
ಬಳ್ಳಾರಿ: ಜ. 3ರಂದು ಬಳ್ಳಾರಿಯ ವಾಲ್ಮೀಕಿ ವೃತ್ತದಲ್ಲಿ ಪ್ರತಿಷ್ಠಾಪನೆಯಾಗಲಿರುವ, ಖ್ಯಾತ ಶಿಲ್ಪಿ ಅರುಣ್ ಯೋಗಿರಾಜ್ ಅವರ ಕೆತ್ತನೆಯಲ್ಲಿ ಮೂಡಿ ಬಂದಿರುವ ಮಹರ್ಷಿ ವಾಲ್ಮೀಕಿ ಪ್ರತಿಮೆಯನ್ನು ಗುರುವಾರ ಮೈಸೂರಿನಿಂದ ಬಳ್ಳಾರಿ ನಗರಕ್ಕೆ ಭವ್ಯವಾಗಿ ತರಲಾಯಿತು.
ವಾಲ್ಮೀಕಿ ನಾಯಕರ ಸಮಾಜದ ವತಿಯಿಂದ ಅದ್ಧೂರಿ ಮೆರವಣಿಗೆ ಏರ್ಪಡಿಸಲಾಗಿತ್ತು. ಮೆರವಣಿಗೆಯಲ್ಲಿ ಸಮುದಾಯದ ಮುಖಂಡರು ಭಾಗಿಯಾಗಿದ್ದರು. 1008 ಮಹಿಳಯರು ಕುಂಭ-ಕಳಶ ಹೊತ್ತು ಕೋಟೆ ಶ್ರೀ ಆಂಜನೇಯಸ್ವಾಮಿ ದೇವಾಲಯದಿಂದ ವಾಲ್ಮೀಕಿ ವೃತ್ತಕ್ಕೆ ತೆರಳಿದರು.
ಈ ವೇಳೆ ಮಾತನಾಡಿದ ನಗರ ಶಾಸಕ ನಾರಾ ಭರತ್ ರೆಡ್ಡಿ, ‘ಒಟ್ಟು 16 ಟನ್ ತೂಕದ ಮಹರ್ಷಿ ವಾಲ್ಮೀಕಿಯವರ ಈ ಪ್ರತಿಮೆ ರಚನೆಗೆ ₹1.18 ಕೋಟಿ ಖರ್ಚಾಗಿದೆ. ಇಡೀ ವೃತ್ತ ನಿರ್ಮಾಣಕ್ಕೆ ₹8.50 ಕೋಟಿ ಅನುದಾನ ಬಳಸಲಾಗಿದೆ’ ಎಂದರು.
‘ಅಯೋಧ್ಯೆಯ ರಾಮಲಲ್ಲಾನ ಮೂರ್ತಿಯನ್ನು ಕೆತ್ತಿರುವ ಕಲಾವಿದ ಅರುಣ್ ಯೋಗಿರಾಜ್ ಅವರೇ ವಾಲ್ಮೀಕಿಯವರ ಪ್ರತಿಮೆ ಕೆತ್ತಿದ್ದು, ರಾಮಲಲ್ಲಾನ ಮೂರ್ತಿಗೆ ಬಳಸಲಾದ ಕಲ್ಲನ್ನೇ ಈ ಮೂರ್ತಿಗೆ ಬಳಸಲಾಗಿದೆ. ಅರುಣ್ ಯೋಗಿರಾಜ್ ಅವರ ಪರಿಕಲ್ಪನೆಯಲ್ಲಿ ಮೂಡಿ ಬಂದಿರುವ ಮೊಟ್ಟ ಮೊದಲ ವಾಲ್ಮೀಕಿಯವರ ಪ್ರತಿಮೆ ಇದಾಗಿದೆ’ ಎಂದು ತಿಳಿಸಿದರು.
‘ಜ.3 ರಂದು ಪ್ರತಿಮೆಯ ಅನಾವರಣ ಮಾಡಲಾಗುತ್ತದೆ. ಸಚಿವ ಸತೀಶ್ ಜಾರಕಿಹೊಳಿ, ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹ್ಮದ್, ರಾಜ್ಯಸಭಾ ಸದಸ್ಯ ಸಯ್ಯದ್ ನಾಸಿರ್ ಹುಸೇನ್, ಶಾಸಕ ಬಿ.ನಾಗೇಂದ್ರ, ಶಾಸಕರಾದ ಜೆ.ಎನ್.ಗಣೇಶ್, ಬಿ.ಎಂ.ನಾಗರಾಜ, ಕೆ.ಎನ್ ರಾಜಣ್ಣ ಹಾಗೂ ಎಸ್ಟಿ ಸಮುದಾಯದ ಹಲವು ಶಾಸಕರು ಭಾಗಿಯಾಗಲಿದ್ದಾರೆ. ಕಾರ್ಯಕ್ರಮದ ಸಾನಿಧ್ಯವನ್ನು ರಾಜನಹಳ್ಳಿ ವಾಲ್ಮೀಕಿ ಪೀಠದ ಪ್ರಸನ್ನಾನಂದಪುರಿ ಸ್ವಾಮೀಜಿ ವಹಿಸಲಿದ್ದಾರೆ’ ಎಂದರು.
ವಾಲ್ಮೀಕಿ ನಾಯಕರ ಸಮಾಜದ ಮುಖಂಡ, ಮಾಜಿ ಸಂಸದ ಸಣ್ಣಫಕ್ಕೀರಪ್ಪ, ಗುಮ್ಮನೂರು ಚಿನ್ನಾಯಪ್ಪ, ಕೆಇಬಿ ರುದ್ರಪ್ಪ, ವಕೀಲರಾದ ಜಯರಾಂ, ನಾಗರಾಜ, ರಾಂಪ್ರಸಾದ್, ಡಿಸಿಸಿ ಅಧ್ಯಕ್ಷ ಅಲ್ಲಂ ಪ್ರಶಾಂತ್, ತಿಮ್ಮನಗೌಡ, ನಾಗಭೂಷಣಗೌಡ, ಮೇಯರ್ ಪಿ.ಗಾದೆಪ್ಪ, ಮಾಜಿ ಮೇಯರ್ ರಾಜೇಶ್ವರಿ, ಪಾಲಿಕೆಯ ಸದಸ್ಯರಾದ ರಾಜಶೇಖರ, ಕೆ.ಎಸ್.ಅಶೋಕ್, ನೂರ್ ಮೊಹಮ್ಮದ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.