
ಸಾಂದರ್ಭಿಕ ಚಿತ್ರ
ಬಳ್ಳಾರಿ: ಹುಟ್ಟುಹಬ್ಬದ ಪಾರ್ಟಿ ವಿಚಾರವಾಗಿ ಬಳ್ಳಾರಿಯ ಮಾಜಿ ಮೇಯರ್ ನಾಗಮ್ಮ ಅವರ ಪುತ್ರ ರಘು, ಯುವಕನೊಬ್ಬನ ಮೇಲೆ ಮಾರಕಾಸ್ತ್ರಗಳಿಂದ ತೀವ್ರ ಹಲ್ಲೆ ನಡೆಸಿದ್ದಾನೆ. ಈ ಸಂಬಂಧ ಗಾಂಧಿನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಏಳು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ಘಟನೆಯಲ್ಲಿ ತಿಪ್ಪೇಸ್ವಾಮಿ (38) ಎಂಬುವವರು ತೀವ್ರವಾಗಿ ಗಾಯಗೊಂಡಿದ್ದು, ಕೋಮಾಕ್ಕೆ ಜಾರಿದ್ದಾರೆ. ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ರಘು, ಅನಿಲ್ ಕುಮಾರ್, ಮುತ್ತು, ಭಾಸ್ಕರ್, ರಾಜಶೇಖರ್, ಬಾಲು, ರಾಜು ಎಂಬುವವರ ಬಂಧನವಾಗಿದೆ. ಇನ್ನು ನಾಲ್ಕು ಜನರು ತಲೆಮರೆಸಿಕೊಂಡಿದ್ದು, ಪೊಲೀಸರು ಹುಡುಕಾಟ ನಡೆಸಿದ್ದಾರೆ.
ಘಟನೆ ವಿವರ: ನಗರದ ಮೂರ್ತಿ ಕಾಲೊನಿಯಲ್ಲಿ ನಡೆಯುತ್ತಿದ್ದ ರಘು ಹುಟ್ಟುಹಬ್ಬದ ಪಾರ್ಟಿಯ ಬಗ್ಗೆ ತಿಪ್ಪೇಸ್ವಾಮಿ ಅವರು ವೆಂಕಟೇಶ್ ಎಂಬಾತನನ್ನು ಪ್ರಶ್ನೆ ಮಾಡಿದ್ದರು. ಆಗ ರಘು ಮತ್ತು ಆತನ ತಂಡದವರನ್ನು ವೆಂಕಟೇಶ್ ಕರೆ ಮಾಡಿ ಸ್ಥಳಕ್ಕೆ ಕರೆಸಿಕೊಂಡಿದ್ದ. ಸ್ಥಳಕ್ಕೆ ಬಂದ ರಘು, ಆತನ ಅಣ್ಣ ರಾಜು ಮತ್ತು ಪವನ್ ಸೇರಿಕೊಂಡು ತಿಪ್ಪೇಸ್ವಾಮಿ ಮತ್ತು ಅವರ ಸಂಬಂಧಿ ಗಿರೀಶ್ ಬಾಬು ಮೇಲೆ ಲಾಂಗುಗಳ ಮೂಲಕ ಹಲ್ಲೆ ಮಾಡಿದ್ದರು. ನಂತರ ಅಲ್ಲೇ ಇದ್ದ ಗಿರೀಶ್ ಬಾಬು ಸ್ನೇಹಿತ ಸಿದ್ದು ಮೇಲೂ ರಘು ಮತ್ತು ಆತನ ತಂಡ ಹಾಕಿ ಬ್ಯಾಟ್ ಮತ್ತು ವಿಕೆಟ್‌ಗಳಿಂದ ಹಲ್ಲೆ ಮಾಡಿದೆ.
ಬಳಿಕ ಸ್ಥಳಕ್ಕೆ ಬಂದ ಅನಿಲ್, ಭಾಸ್ಕರ್, ರಾಜಶೇಖರ್, ರಾಜ, ಬಾಲು ಶೇಖರ್, ಮುತ್ತು, ಸಲ್ಲು ಎಂಬುವವರೂ ಮೂವರ ಮೇಲೆ ಹಲ್ಲೆ ಮಾಡಿದ್ದಾರೆ.
ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡ ತಿಪ್ಪೇಸ್ವಾಮಿ ಪ್ರಜ್ಞೆತಪ್ಪಿ ಬಿದ್ದರು. ಈ ಹೊತ್ತಿಗೆ ಸ್ಥಳಕ್ಕೆ ಬಂದ ತಿಪ್ಪೇಸ್ವಾಮಿ ಸಂಬಂಧಿಗಳು ದಾಳಿ ತಡೆದಿದ್ದಾರೆ. ಗಾಯಗೊಂಡಿದ್ದ ಮೂವರನ್ನೂ ಬಳ್ಳಾರಿಯ ವಿಮ್ಸ್‌ನ ಟ್ರಾಮಾ ಕೇರ್ ಸೆಂಟರ್‌ಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ತಿಪ್ಪೇಸ್ವಾಮಿ ಅವರು ಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.