ADVERTISEMENT

ಅಯ್ಯಪ್ಪ ಸ್ವಾಮಿ ಚಿನ್ನ ಕಳವು: ಭಕ್ತಿಯ ದುರ್ಬಳಕೆ ಆಯಿತೇ?

ಆರ್. ಹರಿಶಂಕರ್
Published 27 ಅಕ್ಟೋಬರ್ 2025, 4:39 IST
Last Updated 27 ಅಕ್ಟೋಬರ್ 2025, 4:39 IST
ಕೇರಳದ ಅಯ್ಯಪ್ಪ ಸ್ವಾಮಿ ದೇಗುಲದ ಗರ್ಭಗುಡಿಗೆ ಚಿನ್ನಲೇಪಿತ ಬಾಗಿಲನ್ನು ತೊಡಿಸಿ ಪರಿಶೀಲಿಸುತ್ತಿರುವ ಬಳ್ಳಾರಿಯ ರೊದ್ದಂ ಜುವೆಲ್ಸ್‌ನ ಮಾಲೀಕ ಗೋವರ್ಧನ್‌ 
ಕೇರಳದ ಅಯ್ಯಪ್ಪ ಸ್ವಾಮಿ ದೇಗುಲದ ಗರ್ಭಗುಡಿಗೆ ಚಿನ್ನಲೇಪಿತ ಬಾಗಿಲನ್ನು ತೊಡಿಸಿ ಪರಿಶೀಲಿಸುತ್ತಿರುವ ಬಳ್ಳಾರಿಯ ರೊದ್ದಂ ಜುವೆಲ್ಸ್‌ನ ಮಾಲೀಕ ಗೋವರ್ಧನ್‌    

ಬಳ್ಳಾರಿ: ಕೇರಳದ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇಗುಲದಲ್ಲಿ ನಡೆದಿದೆ ಎನ್ನಲಾದ ಚಿನ್ನ ಕಳ್ಳತನ ಪ್ರಕರಣ ರಾಷ್ಟ್ರದಾದ್ಯಂತ ಸಂಚಲನ ಸೃಷ್ಟಿಸಿದೆ. ಈ ಪ್ರಕರಣದ ಜಾಡು ಹಿಡಿದು ತನಿಖಾ ತಂಡ ಬಳ್ಳಾರಿಗೂ ಬಂದು ಹೋಗಿದೆ. ಆದರೆ, ಬಳ್ಳಾರಿ ನಂಟಿನಲ್ಲಿ ಕಳ್ಳತನಕ್ಕಿಂತಲೂ ಮುಖ್ಯವಾಗಿ ‘ಭಕ್ತಿಯ ದುರ್ಬಳಕೆ’ಯೇ ಹೆಚ್ಚಾಗಿ ಗೋಚರಿಸುತ್ತಿದೆ.  

‘ಕೇರಳದ ಅಯ್ಯಪ್ಪ ದೇಗುಲ ಕೋಟ್ಯಂತರ ಭಕ್ತ ಬಳಗ ಹೊಂದಿದೆ. ಆದರೆ, ದೇಗುಲದ ಬಾಗಿಲು ಮಾಡಲು ನನ್ನನ್ನು ಮಾತ್ರವೇ ಸಂಪರ್ಕಿಸಲಾಯಿತು. ದೇವರೇ ನನ್ನಿಂದ ಈ ಕೆಲಸ ಮಾಡಿಸಿಕೊಳ್ಳುತ್ತಿದ್ದಾನೆ ಎಂದು ನಾನು ಅಂದು ಅಂದುಕೊಂಡಿದ್ದೆ. ಆದರೆ, ನಾನು ಮಾಡಿಕೊಟ್ಟ ಬಾಗಿಲು ದೇಗುಲಕ್ಕೆ ಸಮರ್ಪಿತವಾಗಿದ್ದು ಮಾತ್ರ ಉನ್ನಿಕೃಷ್ಣನ್‌ ಹೆಸರಿನಲ್ಲಿ. ಇಂದು ಅದೇ ವ್ಯಕ್ತಿ ಕಳ್ಳತನದ ಆರೋಪಕ್ಕೆ ಗುರಿಯಾಗಿದ್ದಾರೆ. ನಾನಂತೂ ಭಕ್ತಿಯಿಂದ ನನ್ನ ಕೆಲಸ ಮಾಡಿದ್ದೆ. ಆದರೆ, ಈಗ ಉನ್ನಿಕೃಷ್ಣನ್‌ ಬಗ್ಗೆ ಬೇಸರ ಮೂಡಿದೆ’ ಎಂದು ಬಳ್ಳಾರಿಯ ರೊದ್ದಂ ಜ್ಯುವೆಲ್ಸ್‌ ಮಾಲೀಕ ಗೋವರ್ಧನ್‌ ಹೇಳುತ್ತಾರೆ. ಈ ಮೂಲಕ ತಮ್ಮ ಭಕ್ತಿ ದುರ್ಬಳಕೆಯಾದ ಬೇಸರವನ್ನು ಅವರು ವ್ಯಕ್ತಪಡಿಸಿದ್ದಾರೆ. 

ಬಳ್ಳಾರಿಯ ಬೆಂಗಳೂರು ರಸ್ತೆಯ ರೊದ್ದಂ ಜುವೆಲ್ಸ್‌ ಆರಂಭವಾಗಿ 25 ವರ್ಷಗಳಾಗಿವೆ. ಅಯ್ಯಪ್ಪ ಸ್ವಾಮಿಯ ಭಕ್ತರಾದ ಗೋವರ್ಧನ್‌, 35 ವರ್ಷಗಳಿಂದಲೂ ಸತತವಾಗಿ ಶಬರಿಮಲೆಗೆ ನಡೆದುಕೊಳ್ಳುತ್ತಾ ಬಂದಿದ್ದಾರೆ. ಅವರ ಅಯ್ಯಪ್ಪ ಸ್ವಾಮಿ ಭಕ್ತಿಯನ್ನು ಬಳ್ಳಾರಿ ಮಂದಿ ಖಚಿತಪಡಿಸಿದ್ದಾರೆ ಕೂಡ. ಗೋವರ್ಧನ್‌ ಅವರ ಭಕ್ತಿ ಸಮರ್ಪಣೆಯ ಪ್ರಕ್ರಿಯೆಯಲ್ಲಿ ಮಧ್ಯವರ್ತಿಯಾಗಿ ಉನ್ನಿಕೃಷ್ಣನ್‌ ಕೆಲಸ ಮಾಡಿದ್ದ ಎನ್ನಲಾಗಿದೆ.

ADVERTISEMENT

ದೇಗುಲದಲ್ಲಿ ಕನ್ನಡದಲ್ಲಿ ವ್ಯವಹರಿಸುತ್ತಿದ್ದ ಉನ್ನಿಕೃಷ್ಣನ್‌, ಗೋವರ್ಧನ್‌ ಅವರಿಗೆ ಹೆಚ್ಚು ಹತ್ತಿರವಾಗಿದ್ದ. ದೇಗುಲದಲ್ಲಿ ಪಡಿಸೇವೆ ಮಾಡಿಸುವ ಗೋವರ್ಧನ್‌ ಅವರ ಆಸೆಗೆ ಉನ್ನಿಕೃಷ್ಣನ್‌ ನೆರವಾಗಿದ್ದರು ಎನ್ನಲಾಗಿದೆ. ಅಯ್ಯಪ್ಪ ದೇಗುಲದಲ್ಲಿ ಪಡಿಸೇವೆ ಮಾಡಲು ಕಾಯುವಿಕೆ ಸಮಯ (ವೇಟಿಂಗ್‌ ಪಿರಿಯಡ್‌) 10 ವರ್ಷಗಳಾಗಿರುತ್ತವೆ. ಈ ಸೇವೆಗೆ 2008–09ರ ಸುಮಾರಿನಲ್ಲಿ ಗೋವರ್ಧನ್‌ ಬುಕ್ಕಿಂಗ್‌ ಮಾಡಿಕೊಂಡಿದ್ದರು. 2018–19ರ ಸುಮಾರಿನಲ್ಲಿ ಸೇವೆ ಪೂರ್ಣಗೊಳಿಸಲು ಅವರಿಗೆ ಅವಕಾಶ ಸಿಕ್ಕಿತ್ತು. ಆಗ ದೇಗುಲದಲ್ಲಿ ಎಲ್ಲ ವ್ಯವಸ್ಥೆಗಳನ್ನು ಉನ್ನಿಕೃಷ್ಣನ್‌ ನೆರವೇರಿಸಿಕೊಟ್ಟಿದ್ದರು. ಆ ಬಳಿಕ ಉನ್ನಿಕೃಷ್ಣನ್‌ ಮತ್ತು ಗೋವರ್ಧನ್‌ ನಡುವಿನ ಸ್ನೇಹ ಸಂಬಂಧ ಗಟ್ಟಿಯಾಗಿತ್ತು. 

ಶಬರಿಮಲೆಯ ದೇಗುಲದಲ್ಲಿ 2019ಕ್ಕೂ ಹಿಂದೆ ಇದ್ದ ಬಾಗಿಲುಗಳು ಹಳತಾಗಿ, ತೂತುಗಳು ಬಿದ್ದಿದ್ದವು ಎನ್ನಲಾಗಿದೆ. ಹೀಗಾಗಿ ಗರ್ಭಗುಡಿಗೆ ಹಾವು, ಚೇಳುಗಳು ಪ್ರವೇಶಿಸುತ್ತಿದ್ದವು. ದೇಗುಲಕ್ಕೆ ಒಂದು ಹೊಸ ಬಾಗಿಲು ಮಾಡಿಸಲು ಆಡಳಿತ ಮಂಡಳಿಯು ಉನ್ನಿಕೃಷ್ಣನ್‌ ಅವರಿಗೆ ಜವಾಬ್ದಾರಿ ನೀಡಿತ್ತು. ಉನ್ನಿಕೃಷ್ಣನ್‌ ಅದನ್ನು ಗೋವರ್ಧನ್‌ ಅವರ ಮೂಲಕ  ಮಾಡಿಸಿಕೊಂಡಿದ್ದ. ಬಾಗಿಲುಗಳ ಪಕ್ಕದ ಕಂಬಗಳನ್ನೂ ಗೋವರ್ಧನ್‌ ಅವರೇ ಮಾಡಿದ್ದರು.  ಅವುಗಳನ್ನು ಉನ್ನಿಕೃಷ್ಣನ್‌ ಮೊದಲಿಗೆ ಚೆನ್ನೈಗೆ ಕೊಂಡೊಯ್ದು ಬಳಿಕ ದೇಗುಲಕ್ಕೆ ನೀಡಿದ್ದರು ಎನ್ನಲಾಗಿದೆ. 

‘ಉನ್ನಿಕೃಷ್ಣನ್‌ ಹೆಸರಿನಲ್ಲಿ ಸಮರ್ಪಣೆ’

‘ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಅಂದು ಚಿನ್ನದ ವಸ್ತುಗಳನ್ನು ದೇಗುಲಕ್ಕೆ ಸಮರ್ಪಿಸಿದ್ದೆ. ಆದರೆ ನನ್ನ ಹೆಸರು ಎಲ್ಲಿಯೂ ಬರಲಿಲ್ಲ. ಯಾಕೆಂದರೆ ಉನ್ನಿಕೃಷ್ಣನ್‌ ಹೆಸರಿನಲ್ಲಿ ಅವು ಸಮರ್ಪಣೆಯಾಗಿದ್ದವು. ಈ ಬಗ್ಗೆ ನನಗೇನೂ ಬೇಸರವಿರಲಿಲ್ಲ. ದೇವರಿಗೆ ನನ್ನ ಭಕ್ತಿ ತಿಳಿದಿರುತ್ತದೆ ಎಂಬ ಭಾವನೆಯಲ್ಲೇ ಇದ್ದೆ. ಚಿನ್ನ ಕಳ್ಳತನ ಪ್ರಕರಣ ಬೇಸರ ತರಿಸಿದೆ. ಈಗ ಬೇಡದ ಕಾರಣದ ಮೂಲಕ ನನ್ನ ಹೆಸರು ಬಹಿರಂಗವಾಗಿದೆ. ಆದರೆ ನಾನು ಸಲ್ಲಿಸಿದ ಸೇವೆ ಗುರುತಿಸಲು ಅಯ್ಯಪ್ಪನೇ ಈ ಸನ್ನಿವೇಶ ಸೃಷ್ಟಿಸಿದ್ದಾನೆ ಎನ್ನಿಸುತ್ತಿದೆ’ ಎಂದು ಗೋವರ್ಧನ್‌ ಹೇಳಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.