ADVERTISEMENT

ಅಂಚಿನ ಸಮುದಾಯಗಳು ಅಭಿವೃದ್ಧಿಯಿಂದ ದೂರ: ಸಾಮಾಜಿಕ ಹೋರಾಟಗಾರ್ತಿ ಕೆ. ನೀಲಾ

​ಪ್ರಜಾವಾಣಿ ವಾರ್ತೆ
Published 3 ಏಪ್ರಿಲ್ 2019, 13:23 IST
Last Updated 3 ಏಪ್ರಿಲ್ 2019, 13:23 IST
ಕಾರ್ಯಕ್ರಮದಲ್ಲಿ ಕೆ. ನೀಲಾ ಮಾತನಾಡಿದರು
ಕಾರ್ಯಕ್ರಮದಲ್ಲಿ ಕೆ. ನೀಲಾ ಮಾತನಾಡಿದರು   

ಹೊಸಪೇಟೆ: ‘ಪ್ರಭುತ್ವಕ್ಕೆ ಜನರ ಒಡಲು ತುಂಬುವ ರಾಜಕೀಯ ಇಚ್ಛಾಶಕ್ತಿ ಇರಬೇಕೇ ಹೊರತು ಧಾರ್ಮಿಕ, ಭಕ್ತಿಯ ನೆಲೆಗಳ ಬಗ್ಗೆ ಪ್ರಭುತ್ವ ತಲೆ ಕೆಡಿಸಿಕೊಳ್ಳಬಾರದು’ ಎಂದು ಸಾಮಾಜಿಕ ಹೋರಾಟಗಾರ್ತಿ ಕೆ. ನೀಲಾ ತಿಳಿಸಿದರು.

ಇಲ್ಲಿನ ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಬುಧವಾರ ಅಭಿವೃದ್ಧಿ ಅಧ್ಯಯನ ವಿಭಾಗದಿಂದ ಹಮ್ಮಿಕೊಂಡಿದ್ದ ‘ಹೈದರಾಬಾದ್‌-ಕರ್ನಾಟಕ ಪ್ರದೇಶದಲ್ಲಿ ಸಾಮಾಜಿಕ ಅಭಿವೃದ್ಧಿಗೆ ಇರುವ ಸವಾಲುಗಳು’ ಕುರಿತ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.

‘ಮಹಾತ್ಮ ಗಾಂಧಿಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಅಡಿಯಲ್ಲಿ ಕೆಲಸ ಮಾಡುತ್ತಿರುವ ನಾನು ಅನೇಕ ಹಳ್ಳಿಗಳನ್ನು ಸುತ್ತಿದ್ದೇನೆ. ಅಂಚಿನಲ್ಲಿರುವ ಅನೇಕ ಸಮುದಾಯಗಳಿಗೆ ಅಭಿವೃದ್ಧಿಯ ಬಗ್ಗೆ ಏನೂ ಗೊತ್ತಿಲ್ಲ. ಇವತ್ತಿಗೂ ಮಹಿಳೆಯರಿಗೆ, ದಲಿತರಿಗೆ, ಗ್ರಾಮ ಪಂಚಾಯಿತಿಯ ಕುರ್ಚಿಯಲ್ಲಿ ಕುಳಿತುಕೊಳ್ಳುವ ಧೈರ್ಯ ಬಂದಿಲ್ಲ’ ಎಂದು ಹೇಳಿದರು.

ADVERTISEMENT

‘ಈ ಪ್ರದೇಶದವರ ತಲಾ ಆದಾಯ ₹50 ರೂಪಾಯಿಗಿಂತ ಕಡಿಮೆ ಇದೆ. ಕೃಷಿ ಕುರಿತು ರಾಷ್ಟ್ರೀಯ ನೀತಿ ಇಲ್ಲವಾದ್ದರಿಂದ ಕೃಷಿಯು ಬಹುರಾಷ್ಟ್ರೀಯ ಕಂಪನಿಗಳ ಪಾಲಾಗುತ್ತಿದೆ. ಜಾಗತಿಕ ಮಟ್ಟದಲ್ಲಿರುವ ವಲಸೆಗಿಂತ ಸ್ಥಳೀಯ ಮಟ್ಟದ ವಲಸೆ ಈ ಭಾಗದ ಮಹಿಳೆಯರನ್ನು ಬಹುವಾಗಿ ಕಾಡುತ್ತಿದೆ. ಮಹಿಳೆಯರು ಹೊಟ್ಟೆಪಾಡಿಗಾಗಿ ವಲಸೆ ಹೋಗುತ್ತಾರೆನ್ನುವುದು ಬಹಳ ಗಂಭೀರವಾದ ವಿಷಯ’ ಎಂದು ಕಳವಳ ವ್ಯಕ್ತಪಡಿಸಿದರು.

‘ಕಲಬುರ್ಗಿಯಲ್ಲಿ ಹೆಣ್ಣುಮಕ್ಕಳ ಗರ್ಭಾಶಯಕ್ಕೆ ಕತ್ತರಿಗೆ ಸಂಬಂಧಿಸಿದ ಸಮಿತಿಯ ಅಧ್ಯಕ್ಷೆಯಾಗಿದ್ದ ಸಂದರ್ಭದಲ್ಲಿ ಈ ಪ್ರದೇಶದ ಸತ್ಯದರ್ಶನ ನನಗಾಯಿತು. ಖಾಸಗೀಕರಣದ ದಾಹ ವೈದ್ಯಲೋಕ ಹಣದ ದಾಹದಿಂದ ಕಾರಣಗಳಿಲ್ಲದೆ ಮಹಿಳೆಯರ ಗರ್ಭಾಶಯಕ್ಕೆ ಕತ್ತರಿ ಬಿತ್ತೆಂಬ ಸತ್ಯ ತಿಳಿಯಿತು. ವಲಸೆಯೊಂದಿಗಿರುವ ಮತ್ತೊಂದು ಅಪಾಯಕಾರಿ ಅಂಶವೆಂದರೆ ಹೊಟ್ಟೆಗಾಗಿ ಮೈಮಾರಿಕೊಳ್ಳುವ ವ್ಯವಸ್ಥೆ ಕರ್ನಾಟಕದಲ್ಲಿಯೂ ಹೆಚ್ಚಾಗಿದೆ’ ಎಂದು ವಿಷಾದಿಸಿದರು.

‘ಹೈದರಾಬಾದ್‌-ಕರ್ನಾಟಕ ಪ್ರದೇಶದ ಉನ್ನತ ಶಿಕ್ಷಣದ ಅಭಿವೃದ್ದಿಗೆ ಇರುವ ಸವಾಲುಗಳು –ಸಾಧ್ಯತೆಗಳು’ ಕುರಿತು ಮಾತನಾಡಿದಸಾಮಾಜಿಕ ಹೋರಾಟಗಾರ ರಜಾಕ್‌ ಉಸ್ತಾದ್‌, ‘ದೇಶದಲ್ಲಿ ಉನ್ನತ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳ ಸಂಖ್ಯೆ ಶೇ. 24ರಷ್ಟಿದೆ. ರಾಜ್ಯದಲ್ಲಿ ಶೇ. 27ರಷ್ಟು ಇದೆ. ಅದರಲ್ಲೂ ಹೈದರಾಬಾದ್-ಕರ್ನಾಟಕ ಪ್ರದೇಶದಲ್ಲಿ ಶೇ. 10.14ರಷ್ಟಿದೆ. ಕಾಡುವ ಬಡತನ ಮತ್ತು ಸೌಲಭ್ಯಗಳ ಕೊರತೆ ಇದಕ್ಕೆ ಕಾರಣವಾಗಿದೆ’ ಎಂದು ಮಾಹಿತಿ ನೀಡಿದರು.

‘ಈ ಭಾಗದಲ್ಲಿ ಒಟ್ಟು 67 ಪದವಿ ಕಾಲೇಜುಗಳಿದ್ದು 890 ಮಂಜೂರಾದ ಹುದ್ದೆಗಳಿವೆ. 78 ಹುದ್ದೆಗಳು ಖಾಲಿ ಇವೆ. ಈ ಹುದ್ದೆಗಳಲ್ಲಿ ಅರೆಕಾಲಿಕ ಉಪನ್ಯಾಸಕರು ಕಾರ್ಯನಿರ್ವಹಿಸುತ್ತಾರೆ. ನೆಲದ ಮೇಲೆ ಕುಳಿತು ಪರೀಕ್ಷೆ ಬರೆಯುವ ವಿದ್ಯಾರ್ಥಿಗಳು ಇಂದಿಗೂ ಇದ್ದಾರೆ. ಹೈದರಾಬಾದ್-ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಅಭಿವೃದ್ಧಿ ಕುರಿತ ಪರಿಕಲ್ಪನೆಯೇ ಸರಿಯಾಗಿಲ್ಲ. ರಸ್ತೆ ಕಾಮಗಾರಿ, ಕಟ್ಟಡ ಕಾಮಗಾರಿ, ಅಭಿವೃದ್ಧಿ ಎಂದು ಭಾವಿಸಿದೆ’ ಎಂದರು.

‘ಕಾನೂನು ಮಾಡುವವರ, ಅನುಷ್ಠಾನಗೊಳಿಸುವವರ ಹಾಗೂ ಫಲಾನುಭವಿಗಳ ನಡುವೆ ಸಂಪರ್ಕವೇ ಇಲ್ಲ. ಉನ್ನತ ಶಿಕ್ಷಣ ಪಡೆಯಬೇಕೆಂಬ ಮನಃಸ್ಥಿತಿ ಬರಬೇಕು. ಆಗ ಓದುವವರ ಸಂಖ್ಯೆ ಹೆಚ್ಚಾಗುತ್ತದೆ. ಉದ್ಯೋಗ ಆಧಾರಿತ ಪಾಲಿಟೆಕ್ನಿಕ್ ಕಾಲೇಜುಗಳನ್ನು ಎಲ್ಲ ತಾಲ್ಲೂಕುಗಳಲ್ಲೂ ಆರಂಭಿಸಬೇಕು. ಈ ಭಾಗದಲ್ಲಿ ವಿಶ್ವವಿದ್ಯಾಲಯಗಳ ಸ್ಥಾಪನೆಯಾಗಬೇಕು. ತಳಮಟ್ಟದವರ ಅಭಿವೃದ್ಧಿಯಾಗಬೇಕು’ ಎಂದು ತಿಳಿಸಿದರು.

ಕುಲಪತಿ ಪ್ರೊ.ಸ.ಚಿ. ರಮೇಶ ಮಾತನಾಡಿ, ‘ಅಂಬೇಡ್ಕರ್ ಅವರು ಅಭಿವೃದ್ಧಿಯ ನೆಲೆಯಲ್ಲಿ ಸಂಪತ್ತನ್ನು ರಾಷ್ಟ್ರೀಕರಣಗೊಳಿಸಬೇಕೆಂದು ತಿಳಿಸಿದ್ದಾರೆ. ಈ ಭಾಗದ ಸಂಪತ್ತನ್ನು ಅಭಿವೃದ್ಧಿಯ ಹೆಸರಿನಲ್ಲಿ ಬಹುರಾಷ್ಟ್ರೀಯ ಕಂಪನಿಗಳಿಗೆ ಕೊಡುತ್ತಿರುವುದು ಬಹಳ ದೊಡ್ಡ ಪೆಟ್ಟು. ಸಂಪನ್ಮೂಲದ ಸಮಾನ ಹಂಚಿಕೆಯಾಗಬೇಕು’ ಎಂದು ಹೇಳಿದರು.

ವಿಭಾಗದ ಮುಖ್ಯಸ್ಥರಾದ ಜನಾರ್ದನ,ಪ್ರಾಧ್ಯಾಪಕ ಎಚ್.ಡಿ.ಪ್ರಶಾಂತ್,ಸಹಾಯಕ ಪ್ರಾಧ್ಯಾಪಕಿ ಕೆ. ಗೀತಮ್ಮ, ಸಂಶೋಧನಾ ವಿದ್ಯಾರ್ಥಿನಿ ಟಿ. ಭಾರತಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.