ADVERTISEMENT

ಬಾಲ್ ಬ್ಯಾಡ್ಮಿಂಟನ್‌ನಲ್ಲಿ ಬಾಲೆಯರ ಬೆರಗು

ವರಕನಹಳ್ಳಿಯ ಕಿತ್ತೂರು ರಾಣಿ ಚನ್ನಮ ವಸತಿ ಶಾಲೆ ವಿದ್ಯಾರ್ಥಿನಿಯರ ಕ್ರೀಡಾ ಸಾಧನೆ

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2018, 12:58 IST
Last Updated 11 ಡಿಸೆಂಬರ್ 2018, 12:58 IST
ಬಾಲ್‌ ಬ್ಯಾಡ್ಮಿಂಟನ್‌ನಲ್ಲಿ ಕ್ರೀಡಾ ಸಾಧನೆ ಮಾಡಿರುವ ವರಕನಹಳ್ಳಿಯ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆ ವಿದ್ಯಾರ್ಥಿನಿಯರು
ಬಾಲ್‌ ಬ್ಯಾಡ್ಮಿಂಟನ್‌ನಲ್ಲಿ ಕ್ರೀಡಾ ಸಾಧನೆ ಮಾಡಿರುವ ವರಕನಹಳ್ಳಿಯ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆ ವಿದ್ಯಾರ್ಥಿನಿಯರು   

ಹೂವಿನಹಡಗಲಿ: ತಾಲ್ಲೂಕಿನ ವರಕನಹಳ್ಳಿಯ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆ ಬಾಲಕಿಯರು ಬಾಲ್‌ ಬ್ಯಾಡ್ಮಿಂಟನ್‌ ಪಂದ್ಯಾವಳಿಯಲ್ಲಿ ಮಿಂಚು ಹರಿಸಿ, ಜಿಲ್ಲಾ ಮಟ್ಟದಲ್ಲಿ ಸತತ ಮೂರನೇ ಬಾರಿಗೆ ಗೆಲುವು ದಾಖಲಿಸಿದ್ದಾರೆ.

ಗ್ರಾಮದ ಹೊರ ವಲಯದ ಏರು ದಿಬ್ಬದಲ್ಲಿ ತಲೆಯೆತ್ತಿರುವ ಈ ವಸತಿ ಶಾಲೆಯು ಕ್ರೀಡೆ, ಶೈಕ್ಷಣಿಕ ಚಟುವಟಿಕೆಗಳು ವರ್ಷದಿಂದ ವರ್ಷಕ್ಕೆ ಏರುಗತಿಯಲ್ಲೇ ಸಾಗಿವೆ. ಸಮಚಿತ್ತದ ಆಟಕ್ಕೆ ಹೆಸರಾಗಿರುವ ಈ ವಸತಿ ಶಾಲೆಯ ವಿದ್ಯಾರ್ಥಿನಿಯರು ಬಾಲ್‌ ಬ್ಯಾಡ್ಮಿಂಟನ್‌ ಪಂದ್ಯಾವಳಿಯಲ್ಲಿ ಕಳೆದ ಮೂರು ವರ್ಷಗಳಿಂದ ವಲಯ, ತಾಲ್ಲೂಕು, ಜಿಲ್ಲಾ ಮಟ್ಟದಲ್ಲಿ ಮೊದಲಿಗರಾಗಿ ವಿಭಾಗ ಮಟ್ಟದಲ್ಲಿ ಸಾಧನೆ ಮಾಡಿದ್ದಾರೆ.

ವಸತಿ ಶಾಲೆಯ ಪ್ರಾಚಾರ್ಯ, ದೈಹಿಕ ಶಿಕ್ಷಣ ಶಿಕ್ಷಕರನ್ನು ಒಳಗೊಂಡಂತೆ ಬಹುತೇಕ ಎಲ್ಲ ಶಿಕ್ಷಕರು ಬ್ಯಾಡ್ಮಿಂಟನ್‌ ಕ್ರೀಡೆಯಲ್ಲಿ ಆಸಕ್ತಿ ಹೊಂದಿದವರೇ ಇದ್ದಾರೆ. ಹೀಗಾಗಿ ವಸತಿ ಶಾಲೆಯಲ್ಲಿ ಉತ್ತಮ ಕ್ರೀಡಾ ವಾತಾವರಣ ಸೃಷ್ಟಿಯಾಗಿದೆ. ಎಂಟನೇ ತರಗತಿಯಿಂದ ಕ್ರೀಡಾ ಪ್ರತಿಭೆಗಳನ್ನು ಗುರುತಿಸಿ ತರಬೇತಿ ನೀಡಲಾಗುತ್ತಿದೆ. ಪರಿಣತಿ ಹೊಂದಿದ ಆಟಗಾರ್ತಿಯರನ್ನು ಆಯ್ಕೆ ಮಾಡಿ ಬಲಿಷ್ಠ ತಂಡ ಕಟ್ಟಲಾಗುತ್ತಿದೆ.

ADVERTISEMENT

2015–16ರ ಪ್ರೌಢಶಾಲಾ ಬಾಲಕಿಯರ ಬಾಲ್‌ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಜಿ.ಎನ್.ಸುಷ್ಮಾ ನೇತೃತ್ವದ ಈ ಶಾಲೆಯ ತಂಡ ವಿಭಾಗ ಮಟ್ಟವನ್ನು ಜಯಿಸಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿತ್ತು. 2016–17ರಲ್ಲಿ ವೀಣಾ ದೊಡ್ಡಮನಿ ನೇತೃತ್ವದ ತಂಡ ಜಿಲ್ಲಾ ಮಟ್ಟದಲ್ಲಿ ಮೊದಲ ಸ್ಥಾನ ಗಳಿಸಿ, ವಿಭಾಗ ಮಟ್ಟದಲ್ಲಿ ಕೊಪ್ಪಳ ವಿರುದ್ಧ ಪರಾಭವಗೊಂಡಿತ್ತು. 2017–18ರ ಪ್ರಸಕ್ತ ಸಾಲಿನ ಪಂದ್ಯಾವಳಿಯಲ್ಲಿಯೂ ವಿಭಾಗ ಮಟ್ಟ ಪ್ರವೇಶಿಸಿತ್ತು.

ಪ್ರಸಕ್ತ ತಂಡವನ್ನು ಹತ್ತನೇ ತರಗತಿ ವಿದ್ಯಾರ್ಥಿನಿಯರಾದ ಸೋಗಿ ತಾಂಡಾದ ಎನ್.ಪ್ರೇಮಾ (ನಾಯಕಿ), ಹೂವಿನಹಡಗಲಿಯ ಜೆ.ಅನುಷಾ, ಮದಲಗಟ್ಟಿಯ ಎಚ್.ಪ್ರತಿಭಾ, ಅಡವಿಮಲ್ಲನಕೇರಿ ತಾಂಡಾದ ಎಲ್.ಎಚ್.ಅನಿತಾ, ಬಿ.ಎಂ.ಮನು, ಕೂಡ್ಲಿಗಿ ತಾಲ್ಲೂಕು ಬಸಾಪುರದ ಎ.ಕೆ.ಕಾವೇರಿ, ಹೊಳಲಿನ ಕೆ.ಸುಮಾ, ಹನಕನಹಳ್ಳಿಯ ಟಿ.ಲತಾ ಪ್ರತಿನಿಧಿಸುತ್ತಿದ್ದಾರೆ.

ಮಕ್ಕಳಲ್ಲಿ ಶಿಸ್ತು ಮೂಡಿಸುವಲ್ಲಿಯೂ ವಸತಿ ಶಾಲೆ ಹಿಂದೆ ಬಿದ್ದಿಲ್ಲ. ಇಲ್ಲಿನ ಮಹಿಳಾ ಸಿಬ್ಬಂದಿ ಉತ್ತಮ ಆಚಾರ, ವಿಚಾರ, ಸಂಸ್ಕಾರಗಳನ್ನು ವಿದ್ಯಾರ್ಥಿನಿಯರಿಗೆ ಕೊಡವ ಕೆಲಸ ಮಾಡುತ್ತಿದ್ದಾರೆ. ಕ್ರೀಡಾಂಗಣವೇ ಇರಲಿ, ಓದುವ ಕೊಠಡಿಯೇ ಇರಲಿ ಹಣೆಗೆ ವಿಭೂತಿ ಧರಿಸಿಯೇ ಅಲ್ಲಿಗೆ ಹೋಗುತ್ತಾರೆ. ದಲಿತ, ಲಂಬಾಣಿ ಬಾಲಕಿಯರು ವಿಭೂತಿ ಧರಿಸಿ, ಭಕ್ತಿಭಾವದಿಂದ ಕಲಿಕೆಯಲ್ಲಿ ತೊಡಗುತ್ತಾರೆ. ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಪ್ರತಿ ವರ್ಷವೂ ಶೇ 100ರಷ್ಟು ಫಲಿತಾಂಶ ಪಡೆಯುತ್ತ ಬಂದಿರುವುದು ವಸತಿ ಶಾಲೆಯ ಹೆಗ್ಗಳಿಕೆ.

‘ಆಟೋಟಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಿದ್ದೇವೆ. ಪ್ರಾರಂಭದಲ್ಲೇ ಪ್ರತಿಭೆಗಳನ್ನು ಗುರುತಿಸಿ ತರಬೇತಿ ನೀಡಲಾಗುತ್ತದೆ. ಶಾಲಾವಧಿಗೆ ಮುಂಚೆ, ನಂತರ ಯೋಗ, ಕ್ರೀಡಾ ಚಟುವಟಿಕೆಗಳಿಗೆ ನಿರ್ದಿಷ್ಟ ಸಮಯ ಮೀಸಲಿಟ್ಟಿದ್ದೇವೆ’ ಎನ್ನುತ್ತಾರೆ ಪ್ರಭಾರ ಪ್ರಾಚಾರ್ಯ ಹನುಮೇಶ.

‘ವಸತಿ ಶಾಲೆಯಲ್ಲಿ ಪಠ್ಯದ ಜತೆಗೆ ಕ್ರೀಡೆಗೂ ಹೆಚ್ಚಿನ ಪ್ರೋತ್ಸಾಹವಿದೆ. ಶಿಕ್ಷಕರು ಸೂಕ್ತ ತರಬೇತಿ ನೀಡಿದ್ದರಿಂದ ಬಾಲ್‌ ಬ್ಯಾಡ್ಮಿಂಟನ್‌ನಲ್ಲಿ ಉತ್ತಮ ಸಾಧನೆ ಮಾಡಿದ್ದೇವೆ’ ತಂಡದ ನಾಯಕಿ ಎನ್‌. ಪ್ರೇಮಾ.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.