
ಬಳ್ಳಾರಿಯಲ್ಲಿ ಗುರುವಾರ ನಡೆದ ಗುಂಪು ಘರ್ಷಣೆ ವೇಳೆ ಗಾಳಿಯಲ್ಲಿ ಗುಂಡು ಹಾರಿಸಿದ ಪೊಲೀಸರು
ಬಳ್ಳಾರಿ: ಶಾಸಕ ಜನಾರ್ದನ ರೆಡ್ಡಿ ಅವರ ಮನೆ ಎದುರು ಬ್ಯಾನರ್ ಕಟ್ಟುವ ವಿಷಯಕ್ಕೆ ಶಾಸಕ ಭರತ್ ರೆಡ್ಡಿ ಮತ್ತು ಜನಾರ್ದನ ರೆಡ್ಡಿ ಬೆಂಬಲಿಗರ ನಡುವೆ ಗುರುವಾರ ರಾತ್ರಿ ಘರ್ಷಣೆ ಸಂಭವಿಸಿದ್ದು, ಘಟನೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರೊಬ್ಬರು ಸಾವನ್ನಪ್ಪಿದ್ದಾರೆ. ಪೊಲೀಸರು ಸೇರಿ ಹಲವರಿಗೆ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿದೆ.
‘ಗುಂಡು ತಾಗಿ ಕಾಂಗ್ರೆಸ್ ಕಾರ್ಯಕರ್ತ ರಾಜಶೇಖರ್ ಮೃತಪಟ್ಟಿದ್ದಾರೆ. ಜನಾರ್ದನ ರೆಡ್ಡಿ ಅವರ ಕಡೆಯಿಂದ ದಾಳಿ ನಡೆದಿದೆ’ ಎಂದು ಶಾಸಕ ಭರತ್ ರೆಡ್ಡಿ ಆರೋಪಿಸಿದ್ದಾರೆ. ಘಟನೆಯಿಂದ ಬಳ್ಳಾರಿ ಉದ್ವಿಗ್ನಗೊಂಡಿದ್ದು, ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
‘ಜನಾರ್ದನ ರೆಡ್ಡಿ ಅವರ ಮನೆ ಎದುರಿನ ಜಾಗದಲ್ಲಿ ಬ್ಯಾನರ್ ಕಟ್ಟುವ ವಿಚಾರಕ್ಕೆ ಮೊದಲಿಗೆ ಜಗಳ ಆರಂಭವಾಗಿದೆ. ಭರತ್ ರೆಡ್ಡಿ ಬೆಂಬಲಿಗ ಎನ್ನಲಾದ ಸತೀಶ್ ರೆಡ್ಡಿಯು ಜನಾರ್ದನ ರೆಡ್ಡಿ ಅವರ ಮನೆ ಎದುರು ರಸ್ತೆಯಲ್ಲಿ ಕುರ್ಚಿ ಹಾಕಿಕೊಂಡು ಕೂತು ದರ್ಪದಿಂದ ಬ್ಯಾನರ್ ಕಟ್ಟಿಸಿದರು. ಆಗ ಮಾಜಿ ಸಚಿವ ಶ್ರೀರಾಮುಲು ಅಡ್ಡ ಬಂದರು. ಈ ಕಾರಣಕ್ಕೆ ಎರಡು ಬಣಗಳ ನಡುವೆ ಮೊದಲಿಗೆ ಮಾತಿನ ಚಕಮಕಿ ನಡೆದು, ನಂತರ ಕಲ್ಲು ತೂರಾಟ ನಡೆದಿದೆ’ ಎಂದು ದೂರಲಾಗಿದೆ.
ಈ ವಿಷಯ ತಿಳಿದು ಜನಾರ್ದನ ರೆಡ್ಡಿ ಅವರು ಸ್ಥಳಕ್ಕೆ ಬಂದಿದ್ದಾರೆ. ಈ ವೇಳೆ ಸತೀಶ್ ರೆಡ್ಡಿ ಆಪ್ತ ಗನ್‌ಮ್ಯಾನ್‌ಗಳು ಗಾಳಿಯಲ್ಲಿ ಎರಡು ಸುತ್ತು ಗುಂಡು ಹಾರಿಸಿದ್ದಾರೆ ಎಂದು ಗೊತ್ತಾಗಿದೆ. ವಿಷಯ ತಿಳಿದು ಮಾಜಿ ಸಚಿವ ಶ್ರೀರಾಮುಲು ಅವರು ಸ್ಥಳಕ್ಕೆ ಬಂದು ಪರಿಸ್ಥಿತಿ ನಿಭಾಯಿಸಲು ಪ್ರಯತ್ನಿಸಿದರು. ಆದರೆ, ಪರಿಸ್ಥಿತಿ ಹತೋಟಿಗೆ ಬರಲಿಲ್ಲ.
ಘಟನೆ ಏನು?: ಶಾಸಕ ಭರತ್ ರೆಡ್ಡಿ ಅವರ ಬೆಂಬಲಿಗರೆನ್ನಲಾದ ಸಾವಿರಕ್ಕೂ ಹೆಚ್ಚು ಮಂದಿ ನಗರದ ಎಸ್ಪಿ ಸರ್ಕಲ್‌ನಿಂದ ಜನಾರ್ದನ ರೆಡ್ಡಿ ಮನೆಗೆ ದೊಣ್ಣೆ, ಕಲ್ಲುಗಳೊಂದಿಗೆ ಬಂದು ದಾಳಿ ನಡೆಸಿದರು. ಆಗ ಜನಾರ್ದನ ರೆಡ್ಡಿಯವರ ಮನೆ ಕಿಟಕಿ ಗಾಜುಗಳು ಹಾನಿಗೀಡಾದವು. ಆದರೆ, ಪೊಲೀಸರು ಮಧ್ಯಪ್ರವೇಶಿಸಿ, ಪರಿಸ್ಥಿತಿ ನಿಭಾಯಿಸಿದರು. ಜನರನ್ನು ಚದುರಿಸಲು ಪೊಲೀಸರು ಸಹ ಗಾಳಿಯಲ್ಲಿ ಗುಂಡು ಹಾರಿಸಬೇಕಾಯಿತು.
ಘಟನೆ ಕುರಿತು ಸುದ್ದಿಗಾರರ ಜೊತೆ ಜನಾರ್ದನ ರೆಡ್ಡಿ ಮಾತನಾಡಿ, ‘ಬ್ಯಾನರ್ ವಿಷಯಕ್ಕೆ ಗಲಾಟೆ ಆಗುತ್ತಿರುವ ಸುದ್ದಿ ಗೊತ್ತಾದ ಕೂಡಲೇ ಮನೆಗೆ ಬಂದೆ. ಆಗ ನನ್ನ ಮೇಲೆ ಗುಂಡು ಹಾರಿಸುವ ಪ್ರಯತ್ನ ನಡೆಯಿತು’ ಎಂದು ಆರೋಪಿಸಿದರು.
‘ಶಾಸಕರಾಗಿ ಆಯ್ಕೆಯಾಗಿ ಎರಡೂವರೆ ವರ್ಷ ಕಳೆದರೂ ಭರತ್ ರೆಡ್ಡಿ ಅವರಿಗೆ ನಗರದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಮಾಡಲು ಸಾಧ್ಯವಾಗಿಲ್ಲ. ಅವರ ವಿರುದ್ಧ ಆಡಳಿತ ವಿರೋಧಿ ಅಲೆ ಇರುವುದರಿಂದ ವಾಲ್ಮೀಕಿ ಪ್ರತಿಮೆಯನ್ನು ಸ್ಥಾಪಿಸುವ ಮೂಲಕ ವೋಟ್ ಬ್ಯಾಂಕ್ ರಾಜಕಾರಣ ಮಾಡಲು ಪ್ರಯತ್ನ ನಡೆಸಿದ್ದಾರೆ’ ಎಂದರು.
‘ಶಾಸಕ ಭರತ್ ರೆಡ್ಡಿ ಅವರ ತಂದೆ ನಾರಾಯಣ ರೆಡ್ಡಿ ದೊಡ್ಡ ಕ್ರಿಮಿನಲ್. ಇಂಥ ಶಾಸಕರನ್ನು ಕಟ್ಟಿಕೊಂಡು ರಾಜ್ಯ ಕಾಂಗ್ರೆಸ್ ಸರ್ಕಾರ ರೌಡಿಗಳ ಸಾಮ್ರಾಜ್ಯ ಕಟ್ಟುತ್ತಿದೆ. ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಪಾಲಿಸಲು ಕಷ್ಟವಾಗುತ್ತಿರುವ ಕಾರಣಕ್ಕೆ ಇಂದಿನ ಎಸ್ಪಿ ಶೋಭಾರಾಣಿ ಸ್ವತಃ ವರ್ಗಾವಣೆ ಮಾಡಿಸಿಕೊಂಡು ಬೇರೆ ಜಿಲ್ಲೆಗೆ ಹೋಗಿದ್ದಾರೆ ಎಂದು ಅವರು ಹೇಳಿದರು.
ಗಲಾಟೆ ಯಾಕೆ?
ಬಳ್ಳಾರಿಯ ವಾಲ್ಮೀಕಿ ವೃತ್ತದಲ್ಲಿ ವಾಲ್ಮೀಕಿ ಪ್ರತಿಮೆಯನ್ನು ಸ್ಥಾಪನೆ ಮಾಡಲಾಗಿದೆ. ಜನವರಿ 3ರಂದು ಪ್ರತಿಮೆ ಅನಾವರಣ ಮಾಡಲು ಸಿದ್ಧತೆ ನಡೆಸಲಾಗಿದೆ.
ಈ ಕಾರ್ಯಕ್ರಮಕ್ಕಾಗಿ ನಗರದಾದ್ಯಂತ ಬ್ಯಾನರ್ ಅಳವಡಿಕೆ ಮಾಡಲಾಗುತ್ತಿದೆ. ಬ್ಯಾನರ್ ಅನ್ನು ಜನಾರ್ದನ ರೆಡ್ಡಿ ಅವರ ಮನೆ ಮುಂದೆ ಅಳವಡಿಸುವ ಸಂದರ್ಭದಲ್ಲಿ ಈ ಗಲಾಟೆ ನಡೆದಿದೆ.
ಧರಣಿ ಕುಳಿತ ಶಾಸಕ
ಬಳ್ಳಾರಿ: ಬಳ್ಳಾರಿಯಲ್ಲಿ ತಡರಾತ್ರಿಯೂ ಬಿಗುವಿನ ವಾತಾವರಣ ಮುಂದುವರಿದಿತ್ತು.
ನಗರದ ಸಿರುಗುಪ್ಪ ರಸ್ತೆಯಲ್ಲಿ ಸಂಚಾರ ನಿಷೇಧಿಸಲಾಗಿದೆ.
ಈ ನಡುವೆ ಶಾಸಕ ಜನಾರ್ದನ ರೆಡ್ಡಿ ಬಂಧನಕ್ಕೆ ಆಗ್ರಹಿಸಿ ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ ನಗರದ ಅವಂಬಾವಿಯಲ್ಲಿರುವ ಜನಾರ್ದನ ರೆಡ್ಡಿ ನಿವಾಸದ ಎದುರೇ ಗುರುವಾರ ರಾತ್ರಿ ಧರಣಿ ಕುಳಿತರು.
ಗಲಾಟೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.