
ಬಳ್ಳಾರಿ: ‘ಅಧಿಕಾರ ಬಲದಿಂದ ಪೊಲೀಸರು ಭರತ್ ರೆಡ್ಡಿಯನ್ನು ರಕ್ಷಿಸಿರಬಹುದು. ಮುಂದೆ ನಮಗೆ ಅಧಿಕಾರ ಸಿಗುತ್ತದೆ. ಆಗ ಪಾತಾಳದಲ್ಲಿದ್ದರೂ ಭರತ್ ರೆಡ್ಡಿಯನ್ನು ಬಿಡುವುದಿಲ್ಲ. ಆಗ ನಿನ್ನ ರಕ್ಷಣೆಗೆ ಯಾರು ಬರುತ್ತಾರೆ ನೋಡೋಣ’ ಎಂದು ಮಾಜಿ ಸಚಿವ ಬಿ. ಶ್ರೀರಾಮುಲು ಸವಾಲು ಎಸೆದರು.
ನಗರದ ಅವ್ವಂಬಾವಿಯಲ್ಲಿ ನಡೆದ ಘರ್ಷಣೆ ಮತ್ತು ಹತ್ಯೆ ಖಂಡಿಸಿ ಎಪಿಎಂಸಿ ಪ್ರಾಂಗಣದಲ್ಲಿ ಶನಿವಾರ ನಡೆದ ಬಿಜೆಪಿಯ ಪ್ರತಿಭಟನಾ ಸಮಾವೇಶದಲ್ಲಿ ಅವರು ಮಾತನಾಡಿದರು.
‘ಕಲ್ಯಾಣ ಕರ್ನಾಟಕ ಜನರ ರಕ್ಷಣೆಗೆ ಸಮಾವೇಶ ನಡೆಯುತ್ತಿದೆ. ಈ ಭಾಗದಲ್ಲಿ ಕಾನೂನು–ಸುವ್ಯವಸ್ಥೆ ಕುಸಿದಿದೆ. ಬಳ್ಳಾರಿ ಶಾಸಕ ನಾರಾ ಭರತ್ ರೆಡ್ಡಿ ಸಣ್ಣ ವಯಸ್ಸಿನವ. ಲಂಡನ್‌ನಲ್ಲಿ ಓದಿದ್ದೇನೆ, ನಾನು ಶ್ರೀಮಂತ ಎನ್ನುವ ಭರತ್ ರೆಡ್ಡಿಗೆ ಸಂಸ್ಕಾರವೇ ಇಲ್ಲ. ಬ್ಯಾನರ್ ಗಲಾಟೆ ಮೂಲಕ ಹೆಸರು ಮಾಡಲು ಹೋಗಿ ಮುಖಭಂಗವಾಗಿದೆ’ ಎಂದರು.
‘ಘರ್ಷಣೆಯಲ್ಲಿ ಮೃತಪಟ್ಟ ರಾಜಶೇಖರನ ತಾಯಿಗೆ ಘಟನೆ ಬಗ್ಗೆ ವಿವರಿಸಿದ್ದೇವೆ. ಅವರು ಕಣ್ಣೀರು ಹಾಕಿದ್ದಾರೆ. ರಾಜಶೇಖರನ ಕೊಂದವರಿಗೆ ಶಿಕ್ಷೆ ಕೊಡಿಸುತ್ತೇವೆ. ಸದ್ಯ ಆತನ ತಾಯಿಗೆ ₹10 ಲಕ್ಷ ಹಣ ನೀಡಿದ್ದೇವೆ’ ಎಂದು ತಿಳಿಸಿದರು.
‘2028ಕ್ಕೆ ನಮ್ಮದೇ ಸರ್ಕಾರ ಬರುತ್ತದೆ. ಫಿನಿಕ್ಸ್ ರೀತಿ ನಾನೂ ಎದ್ದು ಬರುತ್ತೇನೆ. ಘರ್ಷಣೆ ದಿನ ಭರತ್ ರೆಡ್ಡಿಗೆ ನೆರವು ನೀಡಿದ ನಗರ ಡಿಎಸ್‌ಪಿ ನಂದಾರೆಡ್ಡಿ, ಎಎಸ್‌ಪಿ ರವಿಕುಮಾರ್ ಅವರನ್ನು ನಿವೃತ್ತಿಯಾದರೂ ಬಿಡದೆ ಹುಡುಕಿ ಶಿಕ್ಷಿಸುತ್ತೇನೆ’ ಎಂದು ಹೇಳಿದರು.
ಶಾಸಕ ಜನಾರ್ದನ ರೆಡ್ಡಿ ಮಾತನಾಡಿ, ‘ನಮ್ಮ ವ್ಯತ್ಯಾಸಗಳಿಂದ ಕಾಂಗ್ರೆಸ್‌ನ ಅಪರಾಧಿಗಳು ಗೆದ್ದರು. ನಮ್ಮ ಮೇಲೆ ದಾಳಿಗೆ ಬಂದ ಭರತ್ ರೆಡ್ಡಿಯನ್ನು ಲಜ್ಜೆಗೆಟ್ಟ ಸರ್ಕಾರ ಈವರೆಗೆ ಬಂಧಿಸಿಲ್ಲ. ಈ ಪ್ರಕರಣವನ್ನು ಸಿಬಿಐಗೆ ನೀಡಬೇಕು. ನಂಬಿ ಬಂದ ಕಾರ್ಯಕರ್ತನನ್ನೇ ಕೊಲ್ಲಲಾಗಿದೆ. ಕೊಂದ ಗನ್‌ಮ್ಯಾನ್‌ಗಳ ಮಾಲೀಕ ಭರತ್ ರೆಡ್ಡಿ’ ಎಂದರು.
‘ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ಜನವರಿ 20ರಂದು ನಡೆಯಲಿದೆ. ಅದು ಮುಗಿದ ಬಳಿಕ ಪಾದಯಾತ್ರೆ ಕುರಿತ ನಿರ್ಧರಿಸಲಾಗುವುದು’ ಎಂದು ಹೇಳಿದರು.
ಸುಪಾರಿ ಕಿಲ್ಲರ್‌ಗಳನ್ನು ಕರೆ ತಂದು ಬಳ್ಳಾರಿಯಲ್ಲಿ ಕೊಲೆ ಮಾಡಿಸಲಾಗಿದೆ. ಸಿದ್ದರಾಮಯ್ಯ ಅವರು ಶಾಸಕ ಭರತ್ ರೆಡ್ಡಿಯನ್ನು ಬಂಧಿಸಲು ಕ್ರಮ ಕೈಗೊಳ್ಳಬೇಕು. ಪ್ರಕರಣವನ್ನು ಸಿಬಿಐಗೆ ಕೊಡಬೇಕುಗೋವಿಂದ ಕಾರಜೋಳ ಸಂಸದ
ಬಳ್ಳಾರಿಯನ್ನು ಭಸ್ಮ ಮಾಡುತ್ತೇನೆ ಎನ್ನುವ ಭರತ್ ರೆಡ್ಡಿ ಒಬ್ಬ ಭಸ್ಮಾಸುರ. ನಾವು ಮಾಡಿದ ಅಭಿವೃದ್ಧಿ ಕೆಲಸಗಳಿಗೆ ಭರತ್ ತನ್ನ ಹೆಸರು ಹಾಕಿಕೊಳ್ಳುತ್ತಿದ್ದಾರೆ. ಇನ್ನು ನಿನ್ನ ಆಟ ನಡೆಯುವುದಿಲ್ಲ.ಸೋಮಶೇಖರ ರೆಡ್ಡಿ ಮಾಜಿ ಶಾಸಕ
ಬ್ಯಾನರ್ ರಹಿತ ಸಮಾವೇಶ ಬಳ್ಳಾರಿ ನಗರದಲ್ಲಿ ಅನುಮತಿ ಇಲ್ಲದ ಬ್ಯಾನರ್‌ಗಳನ್ನು ನಿಷೇಧಿಸಿದ್ದರಿಂದ ಶನಿವಾರದ ಸಮಾವೇಶವನ್ನು ಬಿಜೆಪಿಯು ಬ್ಯಾನರ್ ರಹಿತವಾಗಿ ನಡೆಸಿತು. ಸಮಾವೇಶ ನಡೆಯುವ ಜಾಗದಲ್ಲಿ ಮಾತ್ರ ಸಣ್ಣ ಬ್ಯಾನರ್ ಬಾವುಟಗಳನ್ನು ಅಳವಡಿಸಲಾಗಿತ್ತು. ಕನಕದುರ್ಗಮ್ಮ ದೇಗುಲದಿಂದ ಪಾದಯಾತ್ರೆ ಮಾಡಲು ಬಿಜೆಪಿಯು ಈ ಮೊದಲು ನಿರ್ಧರಿಸಿತ್ತು. ಆದರೆ ಅದಕ್ಕೆ ಪೊಲೀಸ್ ಇಲಾಖೆ ಅನುಮತಿ ನೀಡಲಿಲ್ಲ. ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಹೆಚ್ಚು ದೊಂಬಿಯಾಗದಂತೆ ಬಿಜೆಪಿ ಸಮಾವೇಶವನ್ನು ಮಾಡಿ ಮುಗಿಸಿತು. ಇದನ್ನು ನಿರ್ವಹಿಸಲೆಂದೇ ವಿಧಾನ ಪರಿಷತ್‌ನ ಬಿಜೆಪಿ ಮುಖ್ಯ ಸಚೇತಕ ರವಿಕುಮಾರ್ ನಾಲ್ಕು ದಿನ ನಗರದಲ್ಲಿ ಬೀಡು ಬಿಟ್ಟಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.