ರತ್ನಮ್ಮವ್ವ
ಬಳ್ಳಾರಿ: ಬಳ್ಳಾರಿಯ ಕೊಳಗಲ್‌ನ ಸಂತ ಎರ‍್ರಿ ತಾತನವರ ಶಿಷ್ಯ ಎರೆಪ್ಪ ತಾತನವರ ಪತ್ನಿ ಗುರುವಾರ ಮೃತಪಟ್ಟಿದ್ದು, ಅವರನ್ನು ಸಮಾಧಿ ಮಾಡುವ ವಿಚಾರವಾಗಿ ಗ್ರಾಮದಲ್ಲಿ ವಿವಾದ ಉಂಟಾಗಿದೆ. ಕೊಳಗಲ್‌ನಲ್ಲಿ ಮೀಸಲು ಪೊಲೀಸ್ ಪಡೆಗಳನ್ನು ನಿಯೋಜಿಸಿ ಬಂದೋಬಸ್ತ್ ಮಾಡಲಾಗಿದೆ.
ರತ್ನಮ್ಮವ್ವ (80) ಮೃತರು. ಬಳ್ಳಾರಿ ನಗರದ ಖಾಸಗಿ ಆಸ್ಪತ್ರೆಯಲ್ಲಿ ಹಲವು ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದ ರತ್ನಮ್ಮವ್ವ ಮೂತ್ರಪಿಂಡ ಮತ್ತು ಯಕೃತ್‌ನ ಸಮಸ್ಯೆಯಿಂದ ಗುರುವಾರ ಮೃತಪಟ್ಟರು.
ಅವರು ಆಸ್ಪತ್ರೆಗೆ ದಾಖಲು ಆದ ದಿನದಿಂದ ಅವರ ಆರೋಗ್ಯಕ್ಕೆ ಸಂಬಂಧಿಸಿದಂತೆ ಕಲ್ಪಿತ ಸುದ್ದಿಗಳು ಗ್ರಾಮದಲ್ಲಿ ಹರಿದಾಡುತ್ತಿದ್ದವು. ಸಮಾಧಿ ಮಾಡುವುದಕ್ಕೆ ಸಂಬಂಧಿಸಿದಂತೆ ಚರ್ಚೆಗಳು ನಡೆದಿದ್ದವು. ಗ್ರಾಮದಲ್ಲಿ ಪ್ರಕ್ಷುಬ್ಧತೆ ಮನೆ ಮಾಡಿತ್ತು. ಅವರ ಸಾವಿನೊಂದಿಗೆ ಈಗ ವಿವಾದ ಮತ್ತೊಂದು ಹಂತಕ್ಕೆ ತಲುಪಿದೆ.
ಏನಿದರ ಹಿನ್ನೆಲೆ: ಬಳ್ಳಾರಿ ಗ್ರಾಮೀಣ ಠಾಣಾ ವ್ಯಾಪ್ತಿಯ ಕೊಳಗಲ್ ಗ್ರಾಮದಲ್ಲಿ ಕುರುಬ ಸಮುದಾಯದ ಎರ‍್ರಿತಾತನ ಮಠವಿದೆ. ಈ ಮಠಕ್ಕೆ ಭೂಮಿ ಕೊಟ್ಟವರು ಪರಿಶಿಷ್ಟ ಜಾತಿಗೆ ಸೇರಿದ ಜಡಿಯಪ್ಪನವರು. ಮಠದ ಮೊದಲ ಪೀಠಾಧಿಪತಿ ಎರ‍್ರಿತಾತ ಕಾಲವಾದ ಬಳಿಕ ಅವರನ್ನು ಮಠದಲ್ಲಿಯೇ ಸಮಾಧಿ ಮಾಡಲಾಗಿತ್ತು. ಜಡಿಯಪ್ಪನವರು ಕಾಲವಾದಾಗಲೂ ಅವರ ದೇಹವನ್ನೂ ಮಠದಲ್ಲಿಯೇ ಮಣ್ಣು ಮಾಡಲಾಗಿತ್ತು. ಆ ಬಳಿಕ, ಜಡಿಯಪ್ಪನವರ ಪುತ್ರ ಎರೆಪ್ಪ ತಾತನವರು ಮಠದ ಎರಡನೇ ಪೀಠಾಧಿಪತಿಯಾಗಿದ್ದರು. ಎರೆಪ್ಪ ತಾತ ಕಾಲವಾದಾಗ ಅವರನ್ನು ಮೊದಲ ಪೀಠಾಧಿಪತಿ ಎರ‍್ರಿತಾತನವರ ಪಕ್ಕದಲ್ಲೇ ಸಮಾಧಿ ಮಾಡಲಾಗಿತ್ತು. ರತ್ನಮ್ಮವ್ವನವರು ಎರಡನೇ ಪೀಠಾಧಿಪತಿ ಎರೆಪ್ಪ ತಾತನವರ ಪತ್ನಿ.
ಮಠದ ಜಾಗ ರತ್ನಮ್ಮವ್ವ ಅವರ ಮನೆತನಕ್ಕೆ ಸೇರಿದ್ದು. ಹೀಗಾಗಿ ಮಠದ ಆವರಣದಲ್ಲಿ, ಪತಿ ಎರೆಪ್ಪ ತಾತನವರ ಸಮಾಧಿ ಪಕ್ಕದಲ್ಲೇ ರತ್ನಮ್ಮವ್ವ ಅವರ ಸಮಾಧಿ ಮಾಡಬೇಕು ಎಂಬುದು ಪರಿಶಿಷ್ಟ ಜಾತಿಯವರ ನಿಲುವು. ಆದರೆ, ಇದನ್ನು ಕುರುಬ ಸಮುದಾಯದ ಒಂದು ಗುಂಪು ವಿರೋಧಿಸುತ್ತಿದೆ. ಮಠವನ್ನು ಹೊರತುಪಡಿಸಿ ಬೇರೆಲ್ಲಾದರೂ ಸಮಾಧಿ ಮಾಡಲಿ ಎಂಬ ಒತ್ತಾಯ ಕುರುಬ ಸಮುದಾಯದ್ದು. ಇದು ಸದ್ಯ ಗ್ರಾಮವನ್ನು ವಿವಾದದ ಕೇಂದ್ರವಾಗಿಸಿದೆ.
ಈ ಮಧ್ಯೆ, ರತ್ನಮ್ಮವ್ವನವರನ್ನು ಮಠದಲ್ಲಿಯೇ ಸಮಾಧಿ ಮಾಡಬೇಕು ಎಂದು ಒಂದಷ್ಟು ಮಂದಿ, ಮಠದಲ್ಲಿ ಸಮಾಧಿ ಮಾಡಬಾರದು ಎಂದು ಇನ್ನೂ ಒಂದಷ್ಟು ಮಂದಿ ಶಾಸಕರು, ಜನಪ್ರತಿನಿಧಿಗಳ ಮೇಲೆ ಒತ್ತಡ ತರಲು ಪ್ರಯತ್ನ ನಡೆಸಿದ್ದಾರೆ.
ಗ್ರಾಮದಲ್ಲಿ ಶಾಂತಿ ಸ್ಥಾಪಿಸಲು ಗ್ರಾಮಸ್ಥರನ್ನು ಕರೆದು ಶಾಂತಿ ಸಭೆ ಮಾಡಲಾಗಿದೆ. ಯಾವುದೇ ಅಹಿತರ ಘಟನೆಗಳಿಗೆ ಪೊಲೀಸ್ ಇಲಾಖೆ ಅವಕಾಶ ನೀಡುವುದಿಲ್ಲ. ಗ್ರಾಮದಲ್ಲಿ ಭದ್ರತೆ ನಿಯೋಜಿಸಲಾಗಿದೆ.ಡಾ. ಶೋಭಾರಾಣಿ ವಿ.ಜೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಳ್ಳಾರಿ
ಕೊಳಗಲ್‌ನಲ್ಲಿ 2024ರಲ್ಲಿ ಮೂರ್ತಿ ಪ್ರತಿಷ್ಠಾಪನೆಗೆ ಸಂಬಂಧಿಸಿಂತೆ ಘರ್ಷಣೆ ಸಂಭವಿಸಿತ್ತು. ಪರಿಸ್ಥಿತಿ ನಿಭಾಯಿಸಲು ಹೋಗಿದ್ದ ಗ್ರಾಮೀಣ ಠಾಣೆ ಪೊಲೀಸರ ಮೇಲೆಯೇ ದೊಣ್ಣೆ ಕಲ್ಲುಗಳಿಂದ ದಾಳಿ ನಡೆದಿತ್ತು. ಇನ್‌ಸ್ಪೆಕ್ಟರ್ ಸಂತೋಷ್ ಡಬ್ಬಿನ್ ಸಿಪಿಐ ಸತೀಶ್ ಸೇರಿದಂತೆ ಹಲವರಿಗೆ ಗಾಯಗಳಾಗಿದ್ದವು. ಅಂದಿನಿಂದಲೂ ಗ್ರಾಮದಲ್ಲಿ ಮುಂಜಾಗ್ರತಾ ಕ್ರಮವಾಗಿ ಪೊಲೀಸರ ನಿಯುಕ್ತಿ ಇದೆ. ಇದೇ ಕಾರಣಕ್ಕೆ ಜಾತ್ರೆಗಳೂ ಮುಂದೂಡಲ್ಪಟ್ಟಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.