ADVERTISEMENT

ಸೈಬರ್‌ ಕ್ರೈಂ: ಜಾಗೃತಿ ಮಾಸಾಚರಣೆ

ವ್ಯಾಪಕವಾಗುತ್ತಿರುವ ಸಮಸ್ಯೆ ವಿರುದ್ಧ ಅರಿವು ಮೂಡಿಸಲು ವಿವಿಧ ಕಾರ್ಯಕ್ರಮ

ಆರ್. ಹರಿಶಂಕರ್
Published 19 ಅಕ್ಟೋಬರ್ 2025, 7:28 IST
Last Updated 19 ಅಕ್ಟೋಬರ್ 2025, 7:28 IST
ಶೋಭಾರಾಣಿ ವಿ.ಜೆ 
ಶೋಭಾರಾಣಿ ವಿ.ಜೆ    

ಬಳ್ಳಾರಿ: ದೇಶದಲ್ಲಿ ಇತ್ತೀಚೆಗೆ ವ್ಯಾಪಕವಾಗಿ ಹೆಚ್ಚುತ್ತಿರುವ ಸೈಬರ್‌ ಅಪರಾಧ, ಡಿಜಿಟಲ್‌ ಅರೆಸ್ಟ್‌ನಂಥ ಕೃತ್ಯಗಳನ್ನು ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯವು ಗಂಭೀರವಾಗಿ ಪರಿಗಣಿಸಿದ್ದು, ಅಕ್ಟೋಬರ್‌ ತಿಂಗಳಲ್ಲಿ ರಾಷ್ಟ್ರೀಯ ಸೈಬರ್‌ ಭದ್ರತಾ ಜಾಗೃತಿ ಮಾಸಾಚರಣೆ ಆಚರಿಸುತ್ತಿದೆ. 

ಕೇಂದ್ರದ ಸೂಚನೆಯಂತೆ ಬಳ್ಳಾರಿ ಜಿಲ್ಲೆಯಲ್ಲೂ ಜಾಗೃತಿ ಮಾಸಾಚಾರಣೆ ಮಾಡಲಾಗುತ್ತಿದ್ದು, ಅದಕ್ಕಾಗಿ ಪೊಲೀಸ್‌ ಇಲಾಖೆಯು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಸಂಘ–ಸಂಸ್ಥೆ, ಸಾಮಾಜಿಕ ಮಾಧ್ಯಮಗಳಲ್ಲಿ ಈ ಕುರಿತು ಹೆಚ್ಚಿನ ಅರಿವು ಮೂಡಿಸುವ ಪ್ರಯತ್ನ ನಡೆಯುತ್ತಿದೆ. 

ಶಿಕ್ಷಣ, ಸಹಭಾಗಿತ್ವದ ಆಧಾರದಲ್ಲಿ ವ್ಯಕ್ತಿಗಳು ಮತ್ತು ಸಂಸ್ಥೆಗಳಿಗೆ ಸೈಬರ್ ಸುರಕ್ಷತೆಯ ಮಹತ್ವವನ್ನು ತಿಳಿಸಿಕೊಡುವುದು ಈ ಮಾಸಾಚರಣೆಯ ಮುಖ್ಯ ಉದ್ದೇಶ. ‘ಸೈಬರ್ ಜಾಗೃತಿ ಭಾರತ್‌’ ಅಥವಾ ‘ಸೈಬರ್ ಸುರಕ್ಷಿತ ಭಾರತ’ ಎಂಬುದು ಈ ವರ್ಷದ ಧ್ಯೇಯವಾಕ್ಯವಾಗಿದೆ. ಸಾರ್ವಜನಿಕ, ಖಾಸಗಿ ಮತ್ತು ಸರ್ಕಾರಿ ವಲಯಗಳಲ್ಲಿ ಸೈಬರ್‌ ವಂಚನೆಯ ಕುರಿತು ಮಾಹಿತಿ ನೀಡಿ, ವಂಚನೆಯ ಜಾಲದ ವಿರುದ್ಧ ದೇಶವನ್ನು ಗಟ್ಟಿಯಾಗಿ ನಿಲ್ಲಿಸಲು ಅಭಿಯಾನದ ಮೂಲಕ ಪ್ರಯತ್ನಿಸಲಾಗುತ್ತಿದೆ. 

ADVERTISEMENT

ಅದಕ್ಕಾಗಿಯೇ ಜಿಲ್ಲೆಯಲ್ಲಿ ಪೊಲೀಸ್‌ ಇಲಾಖೆ ರೀಲ್ಸ್ ಸ್ಪರ್ಧೆಯನ್ನು ಏರ್ಪಡಿಸಿದೆ. ಡಿಜಿಟಲ್ ವಾಹನಗಳನ್ನು ಬೀದಿಗಿಳಿಸಿ ಅದರಲ್ಲಿ ಅರಿವು ಮೂಡಿಸುವ ವಿಡಿಯೊಗಳನ್ನು ಬಿತ್ತರಿಸುತ್ತಿದೆ. ಶಾಲೆ–ಕಾಲೇಜುಗಳಲ್ಲಿ ವಿಚಾರ ಸಂಕಿರಣ, ಸಂವಾದ, ಚರ್ಚೆಗಳನ್ನು ಏರ್ಪಡಿಸಲಾಗುತ್ತಿದೆ. ಬಸ್‌, ರೈಲ್ವೆ ನಿಲ್ದಾಣ, ದೇವಸ್ಥಾನ ಮತ್ತು ಜನನಿಬಿಡ ಪ್ರದೇಶಗಳಲ್ಲಿ ಸೈಬರ್‌ ಅಪರಾಧದ ಕುರಿತು ಮಾಹಿತಿ ನೀಡಲಾಗುತ್ತಿದೆ. 

ಇದರ ಜತೆಗೆ ಬಿತ್ತಿಪತ್ರಗಳನ್ನು, ಕರಪತ್ರಗಳನ್ನು ಮನೆಮನೆಗೆ ಹಂಚಲಾಗುತ್ತಿದೆ. ಇದರಲ್ಲಿ 25 ಬಗೆಯ ಸೈಬರ್‌ ವಂಚನೆಗಳನ್ನು ಪೊಲೀಸ್‌ ಇಲಾಖೆ ಪಟ್ಟಿ ಮಾಡಿದೆ. ಪಂಚಾಯತ್‌ ರಾಜ್‌ ಇಲಾಖೆಯ ಸಿಬ್ಬಂದಿಗೂ ಈ ಬಗ್ಗೆ ಮಾಹಿತಿ ಒದಗಿಸಿ, ಸ್ಥಳೀಯ ಮಟ್ಟದಲ್ಲಿ ಜಾಗೃತಿ ಮೂಡಿಸುವ ಯೋಜನೆಯನ್ನೂ ಪೊಲೀಸ್‌ ಇಲಾಖೆ ಹಾಕಿಕೊಂಡಿದೆ. ಶಿಕ್ಷಣ ಇಲಾಖೆ ಸೇರಿದಂತೆ ಇಲಾಖಾವಾರು ಅಧಿಕಾರಿ, ಸಿಬ್ಬಂದಿಗೂ ವಂಚನೆಯ ಜಾಲದ ಬಗ್ಗೆ ತಿಳಿಸಲು ಯೋಜನೆ ಸಿದ್ಧಪಡಿಸಲಾಗುತ್ತಿದೆ. ಬೈಕ್‌ ರ್‍ಯಾಲಿ, ಮ್ಯಾರಾಥಾನ್‌ಗಳನ್ನು ಹಮ್ಮಿಕೊಳ್ಳುವ ಚಿಂತನೆಯೂ ಇದೆ ಎನ್ನುತ್ತಾರೆ ಸೈಬರ್‌ ಅಪರಾಧ ವಿಭಾಗದ ಡಿವೈಎಸ್‌ಪಿ ಸಂತೋಷ್‌ ಚೌಹಾಣ್‌.  

ರೀಲ್ಸ್‌ ಮಾಡಿ ಪ್ರಶಸ್ತಿ ಗೆಲ್ಲಿ 

ಸೈಬರ್‌ ಅಪರಾಧ, ಡಿಜಿಟಲ್‌ ಅರೆಸ್ಟ್‌ ಕುರಿತು ಜನರಲ್ಲಿ ಸಮರ್ಥವಾಗಿ ಜಾಗೃತಿ ಮೂಡಿಸಬಲ್ಲ ರೀಲ್ಸ್‌ಗಳನ್ನು ಸೃಷ್ಟಿಸುವಂತೆಯೂ, ಅವುಗಳನ್ನು ಪೊಲೀಸ್‌ ಇಲಾಖೆಗೆ ಕಳುಹಿಸುವುಂತೆಯೂ, ಉತ್ತಮ ಐದು ರೀಲ್ಸ್‌ಗಳಿಗೆ ಬಹುಮಾನ ನೀಡುವುದಾಗಿಯೂ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ. ಶೋಭಾರಾಣಿ ವಿ.ಜೆ ನಾಗರಿಕರಿಗೆ ಸಂದೇಶ ನೀಡಿದ್ದಾರೆ. ಈ ಕುರಿತ ಮಾಹಿತಿಗೆ ಬಳ್ಳಾರಿ ಎಸ್‌ಪಿ ಅವರ ಇನ್‌ಸ್ಟಾಗ್ರಾಂ (@sp_ballari)ನಲ್ಲಿ ಮಾಹಿತಿ ಲಭ್ಯವಿದೆ. 

ಸೈಬರ್‌ ವಂಚನೆಯ ಆಳ ಆಗಲ 

ಈ ವರ್ಷದ ಆಗಸ್ಟ್‌ ಅಂತ್ಯದ ವರೆಗೆ ಜಿಲ್ಲೆಯಲ್ಲಿ 59 ಸೈಬರ್‌ ವಂಚನೆ ಕೇಸುಗಳು ದಾಖಲಾಗಿವೆ. ಈ ಎಲ್ಲ ಪ್ರಕರಣಗಳಿಂದ ₹10,22,70,627 ವಂಚನೆ ಮಾಡಲಾಗಿದೆ. ಈ ಪೈಕಿ ₹92,60,713 ಹಣ ಮಾತ್ರ ಹಿಂದಕ್ಕೆ  ಬಂದಿದೆ. 

ಸೈಬರ್‌ ಅಪರಾಧಗಳ ಕುರಿತು ಜಾಗೃತಿ ಮೂಡಿಸಲು ಈ ತಿಂಗಳಲ್ಲಿ ಹಲವು ಕಾರ್ಯಕ್ರಮಗಳನ್ನು ನಾವು ಹಮ್ಮಿಕೊಂಡಿದ್ದೇವೆ. ಈ ಬಗ್ಗೆ ಜನರೂ ಜಾಗೃತರಾಗಬೇಕು. ಇಂಥ ವಂಚನೆಗಳಿಂದ ದೂರುವಿರಬೇಕು. 
– ಡಾ. ಶೋಭಾರಾಣಿ ವಿ.ಜೆ, ಬಳ್ಳಾರಿ ಎಸ್‌ಪಿ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.