
ಬಳ್ಳಾರಿ: ಹೊಸ ವರ್ಷದ ಮೊದಲ ದಿನ ಇಲ್ಲಿ ನಡೆದಿದ್ದ ದೊಂಬಿ, ಗಾಳಿಯಲ್ಲಿ ಗುಂಡಿನ ದಾಳಿ ಘಟನೆಗೆ ಸಂಬಂಧಿಸಿದಂತೆ ಬ್ರೂಸ್‌ಪೇಟೆ ಪೊಲೀಸರು ದಾಖಲಿಸಿಕೊಂಡಿದ್ದ ಸ್ವಯಂ ಪ್ರೇರಿತ ಪ್ರಕರಣದಲ್ಲಿ ಗನ್‌ಮ್ಯಾನ್ ಸೇರಿದಂತೆ ಒಟ್ಟು 26 ಆರೋಪಿಗಳನ್ನು ಬಂಧಿಸಲಾಗಿದೆ. ಆದರೆ, ಪ್ರಕರಣದಲ್ಲಿ ಹೆಸರೇ ಇಲ್ಲದವರನ್ನು ಬಂಧಿಸಲಾಗಿದ್ದು, ಎಫ್‌ಐಆರ್‌ನಲ್ಲಿ ಆರೋಪಿಗಳಾಗಿರುವ ಯಾರೊಬ್ಬರನ್ನೂ ಬಂಧಿಸಲು ಪೊಲೀಸರಿಗೆ ಈ ವರೆಗೆ ಸಾಧ್ಯವಾಗಿಲ್ಲ.
ಸಿರುಗುಪ್ಪ ರಸ್ತೆಯ ಅವ್ವಂಬಾವಿಯಲ್ಲಿರುವ ಜನಾರ್ದನ ರೆಡ್ಡಿ ನಿವಾಸದ ಎದುರು ಬ್ಯಾನರ್ ಅಳವಡಿಸುವುದಕ್ಕೆ ಸಂಬಂಧಿಸಿದಂತೆ ನಡೆದ ದೊಂಬಿ ಪ್ರಕರಣಗಳಿಗೆ ಸಂಬಂಧಿಸಿದಂತೆ ಒಟ್ಟು 26 ಮಂದಿಯನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ಇಲಾಖೆ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿತು.
‘ದೊಂಬಿಗೆ ಸಂಬಂಧಿಸಿದಂತೆ 6 ಎಫ್‌ಐಆರ್ ದಾಖಲಾಗಿದ್ದವು. ಪ್ರಕರಣಗಳ ತನಿಖೆ ವೇಳೆ ದೊರೆತ ಸಾಕ್ಷಿ ಹಾಗೂ ವಿಡಿಯೊ ದೃಶ್ಯಾವಳಿ ಆಧಾರದ ಮೇಲೆ 26 ಆರೋಪಿಗಳನ್ನು ಪತ್ತೆ ಹಚ್ಚಿ ದಸ್ತಗಿರಿ ಮಾಡಲಾಗಿದೆ’ ಎಂದು ಇಲಾಖೆ ತಿಳಿಸಿದೆ.
ಬಂಧಿತರಲ್ಲಿ ಕಾಂಗ್ರೆಸ್, ಬಿಜೆಪಿಯ ಕಾರ್ಯಕರ್ತರು ಇದ್ದಾರೆ ಎನ್ನಲಾಗಿದೆ. ಬಳ್ಳಾರಿ ನಗರದ ಬ್ರೂಸ್‌ಪೇಟೆ ಪೊಲೀಸ್ ಠಾಣೆಯಲ್ಲಿ ಬಂಧನ ಪ್ರಕ್ರಿಯೆ ನಡೆಸಿ ಅವರನ್ನು ನಗರದ ‘ಬಳ್ಳಾರಿ ವೈದ್ಯಕೀಯ ಕಾಲೇಜು ಮತ್ತು ಸಂಶೋಧನ ಕೇಂದ್ರದಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ.
ಕಾರ್ತಿಕ್, ಮುಕ್ಕಣ್ಣ, ಇನಾಯತುಲ್ಲಾ, ರಾಜು, ಮುಸ್ತಫಾ, ಶ್ರೀಕಾಂತ್, ಮೊಹಮದ್ ರಸೂಲ್, ಬಾಬು, ವೆಂಕಟೇಶ್, ಮಾಬಾಷ, ಗುರುಪ್ರಸಾದ್, ವಸುಂಧರ, ಶಿವಕುಮಾರ್, ಸಚಿನ್, ಅಬ್ದುಲ್ ರಜಾಕ್ , ಬಜ್ಜಯ್ಯ, ಎಂ.ತಿಮ್ಮಪ್ಪ, ಗುಂಡಾಲಿ ಶ್ರೀನಿವಾಸ, ಕೆ.ಬಿ ಲಕ್ಷ್ಮಣ, ಪಿ. ಶ್ರೀನಿವಾಸ ರೆಡ್ಡಿ, ಪೋತಪ್ಪ, ಷಡಕ್ಷರಿ, ರವಿಬಾಬು, ರವಿಕುಮಾರ್, ರಂಗಸ್ವಾಮಿ ಬಂಧಿತ ಆರೋಪಿಗಳು. ಇವರನ್ನೆಲ್ಲ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುತ್ತಿದೆ.
ಸ್ವಯಂ ಪ್ರೇರಿತ ಪ್ರಕರಣದಲ್ಲಿ ಜನಾರ್ದನ ರೆಡ್ಡಿ, ಸೋಮಶೇಖರ ರೆಡ್ಡಿ, ಶ್ರೀರಾಮುಲು, ಸತೀಶ್ ರೆಡ್ಡಿ ಅವರನ್ನು ಸ್ವಯಂ ಪ್ರೇರಿತ ಪ್ರಕರಣದಲ್ಲಿ ಆರೋಪಿಗಳನ್ನಾಗಿ ಮಾಡಲಾಗಿತ್ತು. ಇದರ ಜತೆಗೆ, ನಾರಾ ಭರತ್ ರೆಡ್ಡಿ ಗುಂಪು ಕಟ್ಟಿಕೊಂಡು ಬಂದರು ಎಂದು ಹೆಸರಿಸಲಾಗಿತ್ತು.
ಗನ್ ಮ್ಯಾನ್ ಸೆರೆ: ಗಲಭೆ ವೇಳೆ ಗುಂಡು ಹಾರಿಸಿದ ನಾರಾ ಭರತ್ ರೆಡ್ಡಿ ಅವರ ಕಡೆಯವರ ನಾಲ್ವರು ಖಾಸಗಿ ಅಂಗರಕ್ಷಕರನ್ನು ಪೊಲೀಸರು ಭಾನುವಾರ ವಶಕ್ಕೆ ಪಡೆದರು. ಗುರುಚರಣ್ ಸಿಂಗ್ ಎಂಬಾತನೇ ಗುಂಡು ಹಾರಿಸಿದ್ದಾನೆ ಎನ್ನಲಾಗಿದ್ದು, ಆತನನ್ನು ಬಂಧಿಸಲಾಗಿದೆ. ಆದರೆ, ಈತನ ಹೆಸರನ್ನು ಅಧಿಕೃತವಾಗಿ ಘೋಷಿಸಿಲ್ಲ.
ಶಾಂತ ಸ್ಥಿತಿಯತ್ತ: ಬಳ್ಳಾರಿ ನಗರ ಬಹುತೇಕ ಶಾಂತ ಸ್ಥಿತಿಗೆ ಮರಳಿದೆ. ಆದರೂ, ನಗರದ ಪ್ರಮುಖ ರಸ್ತೆಗಳಲ್ಲಿ ಇನ್ನೂ ಮೀಸಲು ಪೊಲೀಸ್ ಪಡೆಯನ್ನು ನಿಯೋಜಿಸಲಾಗಿದೆ. ಭದ್ರತೆಗೆಂದು ಇತರೆ ಜಿಲ್ಲೆಗಳಿಂದ ಬಂದಿದ್ದ ಹಿರಿಯ ಪೊಲೀಸ್ ಅಧಿಕಾರಿಗಳು ಜಿಲ್ಲೆಯಿಂದ ನಿರ್ಗಮಿಸಿದ್ದಾರೆ. ಶಾಸಕರಾದ ಜನಾರ್ದನ ರೆಡ್ಡಿ, ಭರತ್ ರೆಡ್ಡಿ, ಮಾಜಿ ಸಚಿವ ಶ್ರೀರಾಮುಲು, ಸೋಮಶೇಖರ ರೆಡ್ಡಿ ಮನೆಗಳ ಎದುರು ಭದ್ರತೆ ಹೆಚ್ಚಿಸಲಾಗಿದೆ.
ಮೃತ ರಾಜಶೇಖರ ನಿವಾಸಕ್ಕೆ ಸ್ಥಳೀಯ ಕಾಂಗ್ರೆಸ್ ಮುಖಂಡರು ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.