ADVERTISEMENT

ಬಳ್ಳಾರಿ | ರೀಲ್ಸ್‌ಗಾಗಿ ಮನೆ ಸುಡಲು ಸಾಧ್ಯವೇ?

​ಪ್ರಜಾವಾಣಿ ವಾರ್ತೆ
Published 26 ಜನವರಿ 2026, 6:11 IST
Last Updated 26 ಜನವರಿ 2026, 6:11 IST
ಜನಾರ್ದನ ರೆಡ್ಡಿ 
ಜನಾರ್ದನ ರೆಡ್ಡಿ    

ಬಳ್ಳಾರಿ: ‘ಸಿಗರೇಟಿನಿಂದ, ರೀಲ್ಸ್‌ನಿಂದ ಮನೆ ಸುಟ್ಟಿದೆ ಎಂದು ಹೇಳಿದರೆ ರಾಜ್ಯದ ಜನ ನಗುವುದಿಲ್ಲವೇ. ಪೆಟ್ರೋಲ್‌, ಡೀಸೆಲ್‌ನಂಥ ವಸ್ತುಗಳನ್ನು ಬಳಸದೇ ಕಟ್ಟಡಕ್ಕೆ ಬೆಂಕಿ ಹಾಕಲು ಸಾಧ್ಯವೇ ಇಲ್ಲ ’ ಎಂದು ಶಾಸಕ ಜನಾರ್ದನ ರೆಡ್ಡಿ ಹೇಳಿದ್ದಾರೆ. 

ಸುದ್ದಿಗೋಷ್ಠಿಯಲ್ಲಿ ಭಾನುವಾರ ಮಾತನಾಡಿದ ಅವರು, ‘2023ರ ವರೆಗೆ ‘ಜಿ–ಸ್ಕ್ವೇರ್‌’ ಎಂಬ ಡೆವಲಪರ್‌ ಸಂಸ್ಥೇ ಬಳ್ಳಾರಿಯಲ್ಲೇ ಇತ್ತು. ಹೆಲಿಕಾಪ್ಟರ್‌ ಮೂಲಕ ವಿಸ್ತಾರವಾದ ಲೇಔಟ್‌ ಅನ್ನು ಗ್ರಾಹಕರಿಗೆ ತೋರಿಸುತ್ತಿತ್ತು. ಹೀಗಾಗಿ 2011ರಿಂದಲೂ ಬಡಾವಣೆ, ಮನೆ ಪಾಳು ಬಿದ್ದಿದೆ, ಭದ್ರತೆ ಇಲ್ಲ ಎಂಬ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸುಮನ್‌ ಪೆನ್ನೇಕರ್‌ ಅವರ ಮಾತು ನಿಜವಲ್ಲ’ ಎಂದರು.    

‘ಮನೆಯಲ್ಲಿ ಕಳ್ಳತನವಾದಾಗ ಕಳೆದ ವರ್ಷ ಭದ್ರತಾ ಸಿಬ್ಬಂದಿಯೇ ದೂರು ನೀಡಿದ್ದರು. ಇದನ್ನು ಎಸ್‌ಪಿ ಗಮನಿಸಬೇಕಾಗಿತ್ತು. ಶುಕ್ರವಾರ ನಡೆದ ಘಟನೆಯನ್ನೂ ಭದ್ರತಾ ಸಿಬ್ಬಂದಿಯೇ ನೋಡಿದ್ದಾರೆ. ನಾವು ಕೊಟ್ಟ ವಿಡಿಯೊ ಆಧಾರದಲ್ಲಿ ಪೊಲೀಸರು 8 ಮಂದಿಯನ್ನು ಬಂಧಿಸಿದ್ದಾರೆ. ಆದರೆ ಓಡಿ ಹೋದ ಐದಾರು ಮಂದಿಯನ್ನು ಪೊಲೀಸರು ಈ ವರೆಗೆ ಬಂಧಿಸಿಲ್ಲ’ ಎಂದರು.  

ADVERTISEMENT

‘ಬಡಾವಣೆಯಲ್ಲಿನ ಮನೆಯನ್ನು ಅಚ್ಚುಕಟ್ಟಾಗಿ ನಿರ್ವಹಣೆ ಮಾಡಲಾಗುತ್ತಿತ್ತು. ಏಕಾಏಕಿ ಬೆಂಕಿ ಹೊತ್ತಿಕೊಂಡಿತು ಎಂಬ ವಾದ ಸರಿಯಲ್ಲ. ಏಕಾಏಕಿ ಸುಟ್ಟುಹೋಗಲು ಅದೇನು ಗುಡಿಸಲಲ್ಲ. ಮರದ ಮನೆಯೂ ಅಲ್ಲ. ಎಎಸ್‌ಪಿ ರವಿಕುಮಾರ್‌ ಅವರನ್ನು ನಂಬುದುವುದನ್ನು ಎಸ್‌ಪಿ ಬಿಡಬೇಕು’ ಎಂದು ಅವರು ಹೇಳಿದರು.   

ಸಿಐಡಿ ಏನು ಮಾಡಿದೆ?: ಜ. 1ರ ಘಟನೆಯಲ್ಲಿ ಮೂವರನ್ನು ಬಂಧಿಸಿರುವುದು ಬಿಟ್ಟರೆ ಸಿಐಡಿ ಈ ವರೆಗೆ ಏನು ಮಾಡಿದೆ. ಸತೀಶ್‌ ರೆಡ್ಡಿಯನ್ನು ಈ ವರೆಗೆ ಬಂಧಿಸಿಲ್ಲ. ಎಎಸ್‌ಪಿ ರವಿಕುಮಾರ್‌ ಖುದ್ದಾಗಿ ಅತನನ್ನು ಬೆಂಗಳೂರಿಗೆ ಕಳುಹಿಸಿದ್ದರು. ಸತೀಶ್‌ ರೆಡ್ಡಿ ಅಂಗರಕ್ಷಕನಿಂದಲೇ ಕಾಂಗ್ರೆಸ್‌ ಕಾರ್ಯಕರ್ತ ರಾಜಶೇಖರ ಸಾವಾಗಿದೆ ಎಂದು ಸಚಿವ ಜಮೀರ್‌ ಹೇಳಿದ್ದಾಗ್ಯೂ ಈವರೆಗೆ ಆತನನ್ನು ಬಂಧಿಸಿಲ್ಲ. ಆತನ ಗನ್‌ಮ್ಯಾನ್ಗಗಳನ್ನು ಕರೆದುಕೊಂಡು ಬಂದಿದ್ದ ಭರತ್‌ ರೆಡ್ಡಿಯನ್ನೂ ಬಂಧಿಸಿಲ್ಲ. ಅಂದು ಎಲ್ಲರನ್ನು ಬಂಧಿಸಿದ್ದಿದ್ದರೆ ನನ್ನ ಮನೆಗೆ ಇಂದು ಬೆಂಕಿ ಬೀಳುತ್ತಿರಲಿಲ್ಲ’ ಎಂದರು.  

‘ಜ. 1ರಂದು ಭರತ್‌ ರೆಡ್ಡಿ ಬೆಂಬಲಿಗರು ಪೊಲೀಸರ ಮೇಲೂ ದಾಳಿ ಮಾಡಿದ್ದಾರೆ. ಅವರನ್ನು ಬಂಧಿಸುವ ಸ್ಥಿತಿಯಲ್ಲಿ ಸರ್ಕಾರವಿಲ್ಲ ಎಂದಾದರೆ ಇನ್ನೂ ಗಂಭೀರ ಘಟನೆಗಳು ನಡೆಯುವ ಸಾಧ್ಯತೆಗಳಿವೆ ಎಂದಾಯ್ತು. ಸುಮನ್‌ ಪೆನ್ನೇಕರ್‌ ಹಿಂದಿನ ಪ್ರಕರಣಗಳಲ್ಲಿ ಧಕ್ಷವಾಗಿ ನಡೆದುಕೊಂಡಿದ್ದಾರೆ. ಹೀಗಾಗಿ ಅವರ ಮೇಲೆ ನಂಬಿಕೆ ಇದೆ. ಅದನ್ನು ಅವರು ಕಳೆದುಕೊಳ್ಳಬಾರದು. ಬಳ್ಳಾರಿಯಲ್ಲಿರುವ ಎಎಸ್‌ಪಿ ರವಿಕುಮಾರ್‌ ಮತ್ತು ಡಿಎಸ್‌ಪಿ ಚಂದ್ರಕಾಂತ ನಂದಾ ರೆಡ್ಡಿ ಇಬ್ಬರೂ ಪೊಲೀಸ್‌ ವೇಷದ ಕ್ರಿಮಿನಲ್‌ಗಳು’ ಎಂದು ವಾಗ್ದಾಳಿ ನಡೆಸಿದರು.  

ದಾಳಿಯನ್ನು ಖಂಡಿಸಿ ಪಾದಯಾತ್ರೆ ನಡೆಸುವ ವಿಚಾರವನ್ನು ಡಿ. 31ರ ಬಳಿಕ ಚರ್ಚಿಸಲಾಗುವುದು ಎಂದರು. 

ಭರತ್‌ಗೆ ‘ದೌಲಾ’ ಗಾಂಜಾ ದುಡ್ಡು:  ಕುಖ್ಯಾತ ಗಾಂಜಾ ಪೆಡ್ಲರ್‌ ದೌಲಾನೊಂದಿಗೆ ಬಳ್ಳಾರಿ ನಗರ ಶಾಸಕ ಭರತ್‌ ರೆಡ್ಡಿ ಅವರಿಗೆ ನಂಟಿದೆ. ದೌಲಾ ನಿತ್ಯ 50 ಕೆ.ಜಿ ಗಾಂಜಾ ಮಾರಾಟ ಮಾಡುತ್ತಾನೆ. ಅದರಲ್ಲಿ ಬರುವ ಹಣದಲ್ಲಿ ಭರತ್‌ ರೆಡ್ಡಿಗೂ ಪಾಲಿದೆ ಎಂದು ಜನಾರ್ದನ ರೆಡ್ಡಿ ಹೇಳಿದರು. 

‘ಪೊಲೀಸರ ನೆರವಿನೊಂದಿಗೆ ಬಳ್ಳಾರಿಯ ಬೀದಿ ಬೀದಿಗಳಲ್ಲಿ ಗಾಂಜಾ ಮಾರಾಟ ಮಾಡಲಾಗುತ್ತಿದೆ’ ಎಂದೂ ಅವರು ಆರೋಪಿಸಿದರು.

ದೌಲಾನೊಂದಿಗೆ ಕುಳಿತಿರುವ ಭರತ್‌ ರೆಡ್ಡಿ ಅವರ ವಿಡಿಯೊವನ್ನೂ ಜನಾರ್ದನ ರೆಡ್ಡಿ ಬಿಡುಗಡೆ ಮಾಡಿದರು.  

ಅಪಾಯಕಾರಿ ಶಾಸಕ: ‘ಭರತ್‌ ರೆಡ್ಡಿ ಅವರ ತಂದೆ, ಸೂರ್ಯನಾರಾಯಣ ರೆಡ್ಡಿ ‌ಕುರುಗೋಡು ಶಾಸಕರಾಗಿದ್ದಾಗ ನಕ್ಸಲರಿಗೆ ನೆಲೆ ನೀಡಿದ್ದರು. ಈ ವಿಷಯವನ್ನು ಅಂದಿನ ಎಸ್‌ಪಿ ಪಂಕಜ್‌ ಕುಮಾರ್‌ ಠಾಕೂರ್‌ ಬಯಲು ಮಾಡಿದ್ದರು. ನಕ್ಸಲರನ್ನು ಬಂಧಿಸಿದ್ದರು. ಅವರ ಅಪ್ಪನ ಗುಣ ಇವನಿಗೂ (ಭರತ್ ರೆಡ್ಡಿ) ಬಂದಿದೆ.  ಗಾಂಜಾದಿಂದ ಭರತ್‌ ರೆಡ್ಡಿ ದುಡ್ಡು ಮಾಡುತ್ತಿದ್ದಾನೆ. ಇವನು ಹೀಗೆ ಮುಂದುವರಿದರೆ ಅಪಾಯಕಾರಿ ಶಾಸಕ ಆಗುತ್ತಾನೆ’ ಎಂದು ಅವರು ಆಘಾತ ವ್ಯಕ್ತಪಡಿಸಿದರು.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.