ADVERTISEMENT

ಬಳ್ಳಾರಿ | ಅಂಗವೈಕಲ್ಯತೆ ಶಾಪವಲ್ಲ: ಅನ್ನಪೂರ್ಣ

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2026, 2:10 IST
Last Updated 1 ಮಾರ್ಚ್ 2026, 2:10 IST
ಬಳ್ಳಾರಿ ನಗರದ ಮುನಿಸಿಪಲ್ ಕಾಲೇಜು ಆವರಣದಲ್ಲಿ ಶಾಸಕಿ ಇ.ಅನ್ನಪೂರ್ಣ ಬಳ್ಳಾರಿ ಜಿಲ್ಲೆಯ ಅಂಗವಿಕಲರಿಗೆ ತ್ರಿಚಕ್ರ ವಾಹನ ವಿತರಣೆ ಮಾಡಿದರು. ಮೇಯರ್‌ ಗಾದೆಪ್ಪ, ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್‌ ಕೆ. ಭಾಗವಹಿಸಿದ್ದರು 
ಬಳ್ಳಾರಿ ನಗರದ ಮುನಿಸಿಪಲ್ ಕಾಲೇಜು ಆವರಣದಲ್ಲಿ ಶಾಸಕಿ ಇ.ಅನ್ನಪೂರ್ಣ ಬಳ್ಳಾರಿ ಜಿಲ್ಲೆಯ ಅಂಗವಿಕಲರಿಗೆ ತ್ರಿಚಕ್ರ ವಾಹನ ವಿತರಣೆ ಮಾಡಿದರು. ಮೇಯರ್‌ ಗಾದೆಪ್ಪ, ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್‌ ಕೆ. ಭಾಗವಹಿಸಿದ್ದರು    

ಬಳ್ಳಾರಿ: ‘ದೈಹಿಕ ಅಂಗವೈಕಲ್ಯಕ್ಕಿಂತ ಮಾನಸಿಕ ವೈಕಲ್ಯತೆ ದೊಡ್ಡದು. ವಿಶೇಷ ಚೇತನರನ್ನು ಕೀಳರಿಮೆಯಿಂದ ನೋಡದೆ, ಅವರಲ್ಲಿರುವ ವಿಶೇಷ ಸಾಮರ್ಥ್ಯವನ್ನು ಗುರುತಿಸಿ ಪ್ರೋತ್ಸಾಹಿಸಬೇಕು’ ಎಂದು ಸಂಡೂರು ಶಾಸಕಿ ಇ.ಅನ್ನಪೂರ್ಣ ಅಭಿಪ್ರಾಯಪಟ್ಟರು. 

ಬಳ್ಳಾರಿ ನಗರದ ಡಾ.ರಾಜ್ ಕುಮಾರ್ ರಸ್ತೆಯ ಮುನಿಸಿಪಲ್ ಕಾಲೇಜು ಆವರಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ಬಳ್ಳಾರಿ ಜಿಲ್ಲೆಯ ಅಂಗವಿಕಲರಿಗೆ ತ್ರಿಚಕ್ರ ವಾಹನ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಪೋಷಕರು ಮತ್ತು  ಸಮಾಜ ಅಂಗವಿಕಲರನ್ನು ಮೂಲೆ ಗುಂಪು ಮಾಡದೆ ಅವರಲ್ಲಿ ಆತ್ಮವಿಶ್ವಾಸ ತುಂಬುವ ಕೆಲಸ ಮಾಡಬೇಕು. ಸರ್ಕಾರವು ಇವರ ಅಭಿವೃದ್ಧಿಗೆ ಸದಾ ಬೆಂಬಲ ನೀಡುತ್ತಿದೆ’ ಎಂದರು.

ADVERTISEMENT

‘ಜಿಲ್ಲೆಯಲ್ಲಿ ದೃಷ್ಟಿಹೀನರಿಗಾಗಿ ಬ್ರೈಲ್‌ ಲಿಪಿ ಕಲಿಸುವ ಶಿಬಿರ ಆಯೋಜಿಸುವ ಅಗತ್ಯವಿದೆ. ಶ್ರವಣ ದೋಷವುಳ್ಳವರಿಗೆ ಅಗತ್ಯ ಉಪಕರಣಗಳನ್ನು ಒದಗಿಸುವ ಕಾರ್ಯಗಳು ನಿರಂತರವಾಗಿ ನಡೆಯಬೇಕು. ಮಕ್ಕಳಿಗೆ ಆರಂಭಿಕ ಹಂತದಲ್ಲೇ ಬ್ರೈಲ್‌ ಲಿಪಿಯ ತರಬೇತಿ ನೀಡುವುದರಿಂದ ಅವರ ಭವಿಷ್ಯಕ್ಕೆ ಅನುಕೂಲವಾಗಲಿದೆ’ ಎಂದು ಅಭಿಪ್ರಾಯಪಟ್ಟರು.

ಪಾಲಿಕೆಯ ಮಹಾಪೌರ ಪಿ.ಗಾದೆಪ್ಪ ಮಾತನಾಡಿ, ‘ಪಾಲಿಕೆ ವ್ಯಾಪ್ತಿಯ ಅಂಗವಿಕಲರಿಗೆ ಸೌಲಭ್ಯಗಳು ಸಿಗದೇ ಹೋಗಿದ್ದಲ್ಲಿ ನನ್ನ ಕಚೇರಿಗೆ ಭೇಟಿ ನೀಡಿದರೆ ಅಗತ್ಯ ನೆರವು ನೀಡಲಾಗುವುದು’ ಎಂದು ತಿಳಿಸಿದರು.

ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್.ಕೆ  ಮಾತನಾಡಿ, ‘ಅಂಗವಿಕಲರಿಗೆ ಸೌಲಭ್ಯಗಳನ್ನು ನೀಡುವಾಗ ಅಧಿಕಾರಿಗಳು ವಿಶೇಷ ಆದ್ಯತೆ ನೀಡಬೇಕು. ಧನಾತ್ಮಕ ಕಾಳಜಿಯ ಮೂಲಕ ಅವರಿಗೆ ಹೆಚ್ಚಿನ ಸೌಲತ್ತುಗಳನ್ನು ನೀಡಿದಾಗ ಮಾತ್ರ ಅವರು ಸಮಾಜದಲ್ಲಿ ಸಮಾನವಾಗಿ ಬದುಕಲು ಸಾಧ್ಯ’ ಎಂದು ಹೇಳಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಹಮ್ಮದ್ ಹಾರೀಸ್ ಸುಮೇರ್ ಮಾತನಾಡಿದರು. 

ಕೈಗಾರಿಕೆಗಳ ಸಾಮಾಜಿಕ ಹೊಣೆಗಾರಿಕೆ (ಸಿಎಸ್‌ಆರ್) ನಿಧಿ ಯೋಜನೆಯಡಿ 53 ಅಂಗವಿಕಲರಿಗೆ ತ್ರಿಚಕ್ರ ವಾಹನಗಳನ್ನು ವಿತರಿಸುವ ಗುರಿಯನ್ನು ಜಿಲ್ಲಾಡಳಿತ  ಹೊಂದಿದ್ದು. ಸಾಂಕೇತಿಕವಾಗಿ ಕೆಲವರಿಗೆ ಪ್ರಮಾಣಪತ್ರ ಹಾಗೂ ವಾಹನಗಳನ್ನು ಹಸ್ತಾಂತರಿಸಲಾಯಿತು.

ಸಂಡೂರು ತಾಲ್ಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ನೂರುದ್ದೀನ್, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನವೀನ್ ಕುಮಾರ್, ದಾವಣಗೆರೆಯ ಬಳ್ಳಾರಿ ವಿಭಾಗದ ಸಹಾಯಕ ಕಾರ್ಮಿಕ ಆಯುಕ್ತ ಡಾ.ಅವಿನಾಶ ನಾಯ್ಕ, ಕಾರ್ಖಾನೆಗಳ ಹಿರಿಯ ಸಹಾಯಕ ನಿರ್ದೇಶಕ ವರುಣ. ಆರ್., ಬಳ್ಳಾರಿ ಉಪವಿಭಾಗದ ಕಾರ್ಮಿಕ ಅಧಿಕಾರಿ ಎಸ್.ಜಿ. ಖೈನೂರು  ಇದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.