ADVERTISEMENT

ಹೊಸಪೇಟೆ: ಭರವಸೆಯಾಗೇ ಉಳಿದ ಸಂಸದರ ಕಚೇರಿ

ಮೂರು ವರ್ಷ ಕಳೆದರೂ ಹೊಸಪೇಟೆಯಲ್ಲಿ ಆರಂಭವಾಗದ ಲೋಕಸಭೆ ಸದಸ್ಯರ ಕಚೇರಿ

ಶಶಿಕಾಂತ್ ಎಸ್. ಶೆಂಬೆಳ್ಳಿ
Published 7 ಮೇ 2022, 19:30 IST
Last Updated 7 ಮೇ 2022, 19:30 IST
ವೈ.ದೇವೇಂದ್ರಪ್ಪ
ವೈ.ದೇವೇಂದ್ರಪ್ಪ   

ಹೊಸಪೇಟೆ (ವಿಜಯನಗರ): ನಗರದಲ್ಲಿ ಸಂಸದರ ಕಚೇರಿ ಆರಂಭಿಸುವ ವಿಷಯ ಈಗಲೂ ಭರವಸೆಯಾಗೇ ಉಳಿದಿದೆ.

ಲೋಕಸಭೆಗೆ ಚುನಾವಣೆ ನಡೆದು ಮೂರು ವರ್ಷ ಕಳೆದಿವೆ. ಇನ್ನೆರಡು ವರ್ಷ ಮುಗಿದರೆ ಹಾಲಿ ಸಂಸದ ವೈ.ದೇವೇಂದ್ರಪ್ಪನವರ ಅವಧಿ ಕೊನೆಗೊಳ್ಳುತ್ತದೆ. ಆದರೆ, ಇದುವರೆಗೆ ಕಚೇರಿ ಆರಂಭಿಸುವ ನಿಟ್ಟಿನಲ್ಲಿ ಯಾವುದೇ ಪ್ರಯತ್ನಗಳು ನಡೆದಿಲ್ಲ.

ಚುನಾವಣೆಗೂ ಮುನ್ನ ಹಾಗೂ ಚುನಾವಣೆಯಲ್ಲಿ ಗೆದ್ದ ನಂತರ ಹಲವು ಸಭೆಗಳಲ್ಲಿ ಸ್ವತಃ ದೇವೇಂದ್ರಪ್ಪನವರು ಹೊಸಪೇಟೆಯಲ್ಲಿ ಸಂಸದರ ಕಚೇರಿ ಆರಂಭಿಸುವ ಭರವಸೆ ನೀಡಿದ್ದರು. ಅವಿಭಜಿತ ಬಳ್ಳಾರಿ ಜಿಲ್ಲೆ ಭೌಗೋಳಿಕವಾಗಿ ವಿಶಾಲ ಆಗಿರುವುದರಿಂದ ಸಾರ್ವಜನಿಕರ ಅನುಕೂಲಕ್ಕಾಗಿ ಬಳ್ಳಾರಿ ಜಿಲ್ಲಾ ಕೇಂದ್ರದ ಜೊತೆಯಲ್ಲಿ ಹೊಸಪೇಟೆಯಲ್ಲೂ ಸಂಸದರ ಕಚೇರಿ ಆರಂಭಿಸಿ, ಸಾರ್ವಜನಿಕರ ಅಹವಾಲು ಸ್ವೀಕರಿಸಿ, ಪರಿಹಾರ ಕಲ್ಪಿಸಲು ಯೋಜಿಸಲಾಗಿತ್ತು. ಆದರೆ, ಅದು ಇನ್ನೂ ಕಾರ್ಯಾರೂಪಕ್ಕೆ ಬಂದಿಲ್ಲ.

ADVERTISEMENT

ವಿಜಯನಗರ–ಬಳ್ಳಾರಿ ಜಿಲ್ಲೆಯನ್ನು ದೇವೇಂದ್ರಪ್ಪನವರು ಪ್ರತಿನಿಧಿಸುತ್ತಾರೆ. ಬಳ್ಳಾರಿ ಜಿಲ್ಲಾ ಕೇಂದ್ರವೊಂದರಲ್ಲೇ ಕಚೇರಿ ಇರುವುದರಿಂದ ಸಾರ್ವಜನಿಕರು ಪ್ರತಿಯೊಂದು ಕೆಲಸಕ್ಕೆ ಈಗಲೂ ಬಳ್ಳಾರಿಗೆ ಹೋಗಿ ಬರಬೇಕು. ಇದು ದೂರದ ಊರಿನವರಿಗೆ ಕಷ್ಟದಾಯಕ ಕೆಲಸವಾಗಿದೆ. ಆರ್ಥಿಕವಾಗಿ ಹೊರೆಯೂ ಆಗಿದೆ.

‘ದೇವೇಂದ್ರಪ್ಪನವರು ಚುನಾವಣೆಯುದ್ದಕ್ಕೂ ಹೊಸಪೇಟೆಯಲ್ಲಿ ಸಂಸದರ ಕಚೇರಿ ಆರಂಭಿಸುವ ಮಾತುಗಳನ್ನು ಆಡಿದ್ದರು. ಮೂರು ವರ್ಷ ಕಳೆದರೂ ಕಚೇರಿ ಆರಂಭಿಸಲು ಅವರಿಗೆ ಸಾಧ್ಯವಾಗಿಲ್ಲ. ಜನರ ಬಗೆಗಿನ ನಿರಾಸಕ್ತಿ, ನಿಷ್ಕಾಳಜಿಗೆ ಇದು ಸಾಕ್ಷಿ’ ಎಂದು ಸಾಮಾಜಿಕ ಹೋರಾಟಗಾರ ಬಸವರಾಜ ಹೇಳಿದರು.

‘ರಾಜಕಾರಣಿಗಳಿಗೆ ಚುನಾವಣೆ ಸಂದರ್ಭದಲ್ಲಿ ಕೊಡುವ ಭರವಸೆಗಳು ಗೆದ್ದ ನಂತರ ಮರೆತು ಹೋಗುವುದು ಸಾಮಾನ್ಯ ಚಾಳಿಯಾಗಿದೆ. ಅದರಲ್ಲಿ ದೇವೇಂದ್ರಪ್ಪ ಕೂಡ ತಾವು ಒಬ್ಬರು ಎನ್ನುವುದನ್ನು ಸಾಬೀತು ಪಡಿಸಿದ್ದಾರೆ. ಇನ್ನೂ ಕಾಲ ಮೀರಿಲ್ಲ. ಇನ್ನೂ ಅವರ ಅವಧಿ ಪೂರ್ಣಗೊಳ್ಳಲು ಎರಡು ವರ್ಷ ಇದೆ. ಅಷ್ಟರೊಳಗೆ ಹೊಸಪೇಟೆಯಲ್ಲಿ ಸಂಸದರ ಕಚೇರಿ ಆರಂಭಿಸಿ, ಸಾರ್ವಜನಿಕರ ಅಹವಾಲು ಸ್ವೀಕರಿಸುವ ಕೆಲಸ ಆರಂಭಿಸಬೇಕು. ಇಲ್ಲವಾದರೆ ಅವರ ವಿರುದ್ಧ ಹೋರಾಟ ನಡೆಸಲಾಗುವುದು’ ಎಂದು ಎಚ್ಚರಿಕೆ ನೀಡಿದರು.

‘ಹಾಲಿ ಸಂಸದರಿಗೆ ಒಂದುವೇಳೆ ಪೂರ್ಣ ಪ್ರಮಾಣದಲ್ಲಿ ಕಚೇರಿ ಆರಂಭಿಸಲು ಸಾಧ್ಯವಾಗದಿದ್ದರೆ ಕನಿಷ್ಠ ವಾರಕ್ಕೊಮ್ಮೆ ಹೊಸಪೇಟೆಗೆ ಬಂದು ಜನರ ಅಹವಾಲು ಸ್ವೀಕರಿಸಬೇಕು. ಇದುವರೆಗೆ ಅವರು ಆ ಕೆಲಸ ಮಾಡಿಲ್ಲ. ಪಕ್ಷದ ಸಭೆ, ಸಮಾರಂಭ, ಸರ್ಕಾರಿ ಕಾರ್ಯಕ್ರಮಗಳಿಗೆ ಸಂಸದರು ಸೀಮಿತರಾಗಿದ್ದಾರೆ. ಅವರಿಗೆ ಜನರ ಸಮಸ್ಯೆ ಬಗೆಹರಿಸುವುದು ಬೇಡದ ವಿಷಯವಾಗಿದೆ’ ಎಂದು ಇನ್ನೊಬ್ಬ ಸಾಮಾಜಿಕ ಹೋರಾಟಗಾರ ರಾಜು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.