ADVERTISEMENT

ಬಳ್ಳಾರಿ ಜಿಲ್ಲೆಯಲ್ಲಿಲ್ಲ ಅಕ್ರಮ ಮರಳುಗಾರಿಕೆ!: ಅಚ್ಚರಿ ಮೂಡಿಸಿದ ಉತ್ತರ

ವಿಧಾನ ಪರಿಷತ್‌ನಲ್ಲಿ ಸರ್ಕಾರ ಒದಗಿಸಿದ ಮಾಹಿತಿಯಿಂದ ಬಹಿರಂಗ

ಆರ್. ಹರಿಶಂಕರ್
Published 18 ಆಗಸ್ಟ್ 2025, 5:44 IST
Last Updated 18 ಆಗಸ್ಟ್ 2025, 5:44 IST
ನದಿ ಮರಳು (ಪ್ರಾತಿನಿಧಿಕ ಚಿತ್ರ)
ನದಿ ಮರಳು (ಪ್ರಾತಿನಿಧಿಕ ಚಿತ್ರ)   

ಬಳ್ಳಾರಿ: ರಾಜ್ಯದಲ್ಲಿ 2024–25ರ ಸಾಲಿನಲ್ಲಿ ಒಟ್ಟು 219 ಪ್ರಕರಣಗಳಿಂದ 1,61,298 ಟನ್‌ನಷ್ಟು ಅಕ್ರಮ ಮರಳು ಗಣಿಗಾರಿಕೆ ನಡೆದಿದೆ. ಆದರೆ, ಬಳ್ಳಾರಿ ಜಿಲ್ಲೆಯಲ್ಲಿ ಮಾತ್ರ ಒಂದೇ ಒಂದು ಅಕ್ರಮ ಮರಳು ಗಣಿಗಾರಿಕೆಯ ಪ್ರಕರಣ ಪತ್ತೆಯಾಗಿಲ್ಲ!

ರಾಜ್ಯ ವಿಧಾನ ಮಂಡಲದ ಮುಂಗಾರು ಅಧಿವೇಶನ ಆ.11ರಿಂದ ನಡೆಯುತ್ತಿದೆ. ವಿಧಾನ ಪರಿಷತ್‌ನ ಬಿಜೆಪಿ ಸದಸ್ಯ ಸಿ.ಟಿ ರವಿ ರಾಜ್ಯದ ಗಣಿಗಾರಿಕೆಯ ಕುರಿತು ಆ. 12ರಂದು ಪರಿಷತ್‌ನಲ್ಲಿ ಚುಕ್ಕಿ ರಹಿತ ಪ್ರಶ್ನೆಯೊಂದನ್ನು ಕೇಳಿದ್ದರು. ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಸಚಿವರು ಪ್ರಶ್ನೆಗೆ ಲಿಖಿತ ಉತ್ತರ ನೀಡಿದ್ದು, ಅದರಲ್ಲಿ ಈ ಮಾಹಿತಿ ಮತ್ತು ಅಂಕಿ ಅಂಶಗಳು ಇವೆ.

ಬಳ್ಳಾರಿಯಲ್ಲಿ ಅಕ್ರಮ ಮರಳು ಗಣಿಗಾರಿಕೆಯೇ ನಡೆದಿಲ್ಲ ಎಂದು ಸರ್ಕಾರ ಹೇಳುತ್ತಿದೆಯಾದರೂ, ಜಿಲ್ಲೆಯ ನದಿ, ಕೊಳ್ಳಗಳಲ್ಲಿ ಆಗಾಗ ಮರಳು ಬಗೆದ ಪ್ರಕರಣಗಳು ವರದಿಯಾಗುತ್ತಲೇ ಇವೆ. ಹೀಗಾಗಿ ಮಾಹಿತಿಯು ಅನುಮಾನಗಳಿಗೆ ಎಡೆಯಾಗಿಸಿದೆ.

ADVERTISEMENT

ಇನ್ನು ರಾಜ್ಯದಾದ್ಯಂತ ಪತ್ತೆಯಾದ 219 ಅಕ್ರಮ ಗಣಿಗಾರಿಕೆ ಪ್ರಕರಣಗಳಲ್ಲಿ ಒಟ್ಟು ₹75 ಲಕ್ಷ ದಂಡ ವಿಧಿಸಲಾಗಿದ್ದು, 34 ಎಫ್‌ಐಆರ್‌ಗಳು ದಾಖಲಾಗಿವೆ ಎಂದು ದಾಖಲೆಗಳಲ್ಲಿ ಹೇಳಲಾಗಿದೆ. ಇನ್ನೊಂದೆಡೆ, ಈ ವರ್ಷ ಮಾರ್ಚ್‌ ಅಂತ್ಯದ ವರೆಗೆ ರಾಜ್ಯದಲ್ಲಿ ಮರಳು ಅಕ್ರಮ ಸಾಗಣೆಯ ಒಟ್ಟು 2,911 ಪ್ರಕರಣಗಳು ಪತ್ತೆಯಾಗಿವೆ. 1,61,166 ಟನ್‌ ಮರಳು ಸಾಗಣೆ ಮಾಡಲಾಗಿದೆ. ಈ ಪ್ರಕರಣಗಳಲ್ಲಿ ಒಟ್ಟು ₹7.16 ಕೋಟಿ ದಂಡ ವಸೂಲಿ ಮಾಡಲಾಗಿದೆ. 701 ಎಫ್‌ಐಆರ್‌ ದಾಖಲಿಸಲಾಗಿದೆ. 

ಈ ಪೈಕಿ ಬಳ್ಳಾರಿಯಲ್ಲಿ ಒಟ್ಟು 66 ಮರಳು ಅಕ್ರಮ ಸಾಗಣೆಯನ್ನು ಪತ್ತೆ ಮಾಡಲಾಗಿದ್ದು, 221.50 ಟನ್‌ ಸಾಗಣೆ ಮಾಡಲಾಗಿದೆ. ₹14.61 ಲಕ್ಷ ದಂಡ ವಿಧಿಸಲಾಗಿದೆ. ಯಾವುದೇ ಎಫ್‌ಐಆರ್‌ ದಾಖಲಾಗಿಲ್ಲ ಎಂದು ಸರ್ಕಾರ ಮಾಹಿತಿ ನೀಡಿದೆ. ಆದರೆ, ಮರಳು ಅಕ್ರಮ ಸಾಗಣೆಯ ಬಗ್ಗೆ ಹಲವು ಎಫ್‌ಐಆರ್‌ ದಾಖಲಾಗಿದ್ದು, ಪತ್ರಿಕೆಗಳಲ್ಲಿಯೂ ವರದಿಯಾಗಿದೆ.

ಮರಳು ಅಕ್ರಮ ದಾಸ್ತಾನಿಗೆ ಸಂಬಂಧಿಸಿದಂತೆ ರಾಜ್ಯದಲ್ಲಿ ಒಟ್ಟು 341 ಪ್ರಕರಣಗಳು ಪತ್ತೆಯಾಗಿದ್ದು, 74,237 ಟನ್‌ ಮರಳು ವಶಕ್ಕೆ ಪಡೆಯಲಾಗಿದೆ. ₹1.50 ಕೋಟಿ ದಂಡ ವಿಧಿಸಿ 96 ಎಫ್‌ಐಆರ್‌ ದಾಖಲಿಸಲಾಗಿದೆ. ಆದರೆ, ಬಳ್ಳಾರಿಯಲ್ಲಿ ಇಂಥ ಒಂದೇ ಒಂದು ಪ್ರಕರಣ ವರದಿಯಾಗಿಲ್ಲ ಎನ್ನುತ್ತಿದೆ ದಾಖಲೆ. 

ಫಿಲ್ಟರ್‌ ಮರಳು ಉತ್ಪಾದನೆಗೆ ಸಂಬಂಧಿಸಿದಂತೆ ರಾಜ್ಯದಲ್ಲಿ ಮೂರು ಪ್ರಕರಣಗಳು ವರದಿಯಾಗಿವೆ. 319 ಟನ್‌ ವಶಕ್ಕೆ ಪಡೆಯಲಾಗಿದೆ. ಈ ಪ್ರಕರಣಗಳಲ್ಲಿ ₹1.33 ಲಕ್ಷ ದಂಡ ವಿಧಿಸಲಾಗಿದ್ದು, ಯಾವುದೇ ಎಫ್ಐಆರ್‌ ದಾಖಲಾಗಿಲ್ಲ. ಬಳ್ಳಾರಿ ಜಿಲ್ಲೆಗಳಲ್ಲಿ ಸಮೃದ್ಧ ಮರಳು ಲಭ್ಯವಿದ್ದು, ಫಿಲ್ಟರ್‌ ಮರಳಿನ ಪ್ರಮೇಯ ಉದ್ಭವವಾಗಿಲ್ಲ.

ಪ್ರಕರಣ ಸಂಖ್ಯೆ ಕುಸಿತ:

2023–24ನೇ ಸಾಲಿನಲ್ಲಿ ರಾಜ್ಯದಾದ್ಯಂತ ಅಕ್ರಮ ಮರಳು ಗಣಿಗಾರಿಕೆಯ ಒಟ್ಟು 300 ಪ್ರಕರಣ ವರದಿಯಾಗಿತ್ತು. ಆದರೆ ಮರು ವರ್ಷ ಅದು 219ಕ್ಕೆ ಕುಸಿದಿದೆ. ಮರಳು ಅಕ್ರಮ ಸಾಗಣೆಗೆ ಸಂಬಂಧಿಸಿದಂತೆ 2023–24ನೇ ಸಾಲಿನಲ್ಲಿ ಒಟ್ಟು 3355 ಪ್ರಕರಣಗಳು ಪತ್ತೆಯಾಗಿದ್ದರೆ 2024–25ರಲ್ಲಿ 2944 ಪ್ರಕರಣಗಳು ಮಾತ್ರವೇ ವರದಿಯಾಗಿವೆ. ಅಕ್ರಮ ಗಣಿಗಾರಿಕೆ ವಿರುದ್ಧದ ಕಾರ್ಯಾಚರಣೆಗಳು ಸಕ್ರಿಯವಾಗಿ ನಡೆದರೆ ಸಾಮಾನ್ಯವಾಗಿ ಪ್ರಕರಣ ಸಂಖ್ಯೆ ಹೆಚ್ಚಾಗುತ್ತದೆ. ದಾಳಿಗಳು ಸಮರ್ಪಕವಾಗಿ ನಡೆಯದೇ ಹೋದರೆ ಪ್ರಕರಣ ಸಂಖ್ಯೆಯಲ್ಲಿ ಇಳಿಮುಖವಾಗುತ್ತದೆ. ಇದು ಅಕ್ರಮ ಗಣಿಗಾರಿಕೆಯ ವಿಚಕ್ಷಣ ವ್ಯವಸ್ಥೆಯನ್ನು ಪ್ರಶ್ನೆ ಮಾಡುವಂತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.