ADVERTISEMENT

ಬಳ್ಳಾರಿ: ಗಾಂಜಾ ‘ದೌಲ’ಡಗಿಸಲು ಕಾಯ್ದೆ ಪ್ರಯೋಗ

21 ಪ್ರಕರಣಗಳಲ್ಲಿ ಆರೋಪಿಯಾಗಿರುವ ದೌಲ, ಪಿಟ್‌ ಎನ್‌ಡಿಪಿಎಸ್‌ ಕಾಯ್ದೆ ಬಳಸಿದ ಪೊಲೀಸರು

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2026, 7:26 IST
Last Updated 14 ಫೆಬ್ರುವರಿ 2026, 7:26 IST
ದೌಲ
ದೌಲ   

ಬಳ್ಳಾರಿ: ಎಷ್ಟೇ ಪ್ರಕರಣಗಳನ್ನು ದಾಖಲಿಸಿದರೂ ಜಾಮೀನು ಪಡೆದು ಹೊರಬರುತ್ತಿದ್ದ, ಮಾದಕ ದ್ರವ್ಯ ಮಾರಾಟ ದಂಧೆಯನ್ನು ಮುಂದುವರಿಸಿದ್ದ, ಕುಖ್ಯಾತ ಡ್ರಗ್ಸ್‌ ಪೆಡ್ಲರ್‌ ಮೊಹಬೂಬ್‌ ದೌಲ ಎಂಬಾತನನ್ನು ಬಂಧಿಸಿರುವ ಪೊಲೀಸರು, ಬಳ್ಳಾರಿಯ ಕೇಂದ್ರ ಕಾರಾಗೃಹಕ್ಕೆ ಅಟ್ಟಿದ್ದಾರೆ.

ಇತನ ಬಂಧನಕ್ಕಾಗಿ ಕಲ್ಯಾಣ ಕರ್ನಾಟಕ ಭಾಗದಲ್ಲೇ ಇದೇ ಮೊದಲ ಬಾರಿಗೆ ‘ಮಾದಕ ದ್ರವ್ಯಗಳು ಮತ್ತು ಮನೋವಿಕೃತ ವಸ್ತುಗಳ ಅಕ್ರಮ ಸಾಗಣೆ ತಡೆಗಟ್ಟುವಿಕೆ (ಪಿಟ್‌ ಎನ್‌ಡಿಪಿಎಸ್‌) ಕಾಯ್ದೆ–1988’ಯನ್ನು ಬಳ್ಳಾರಿ ಪೊಲೀಸರು ಪ್ರಯೋಗಿಸಿದ್ದಾರೆ. 

ಬಳ್ಳಾರಿ ಎಪಿಎಂಸಿ ಪೊಲೀಸ್‌ ಠಾಣೆ ವ್ಯಾಪ್ತಿಯ ರಾಣಿತೋಟ ನಿವಾಸಿಯಾಗಿದ್ದ ದೌಲನ ವಿರುದ್ಧ ಬಳ್ಳಾರಿ ನಗರದ ಎಲ್ಲ ಠಾಣೆಗಳೂ ಸೇರಿದಂತೆ ರಾಜ್ಯದಾದ್ಯಂತ 21 ಪ್ರಕರಣಗಳಿದ್ದವು.  ಬ್ರೂಸ್‌ಪೇಟೆ ಠಾಣೆಯಲ್ಲಿ –6, ಗಾಂಧಿನಗರ – 1, ಕೌಲ್‌ ಬಜಾರ್‌ –2, ಸಿಇಎನ್‌ – 4, ತೋರಣಗಲ್ಲು –1, ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ –4, ಚಿತ್ರದುರ್ಗ ಟೌನ್‌ ಠಾಣೆಯಲ್ಲಿ –1, ಮೈಸೂರಿನ ಮಂಡಿ ಠಾಣೆಯಲ್ಲಿ– 2 ಪ್ರಕರಣಗಳು ದಾಖಲಾಗಿವೆ.  

ADVERTISEMENT

ಈ ಪೈಕಿ 12 ಪ್ರಕರಣಗಳು ಸದ್ಯ ವಿಚಾರಣೆ ಹಂತದಲ್ಲಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಉಳಿದ ಪ್ರಕರಣಗಳಲ್ಲಿ ದೌಲ ಖುಲಾಸೆ, ರದ್ದು, ತಡೆ ತಂದಿದ್ದಾನೆ. 

ಈಗ ಬಂಧನ ಹೇಗೆ: ಜಿಲ್ಲೆಯಲ್ಲಿ ಮಾದಕ ದ್ರವ್ಯ ದಂಧೆ ಎಗ್ಗಿಲ್ಲದೇ ನಡೆಯುತ್ತಿರುವ ವಿಚಾರ ಜನವರಿ 1ರಂದು ನಡೆದ ಗಲಭೆ ಬಳಿಕ ಬಯಲಾಗಿತ್ತು. ಜಿಲ್ಲೆಯ ಕಾನೂನು ಸುವ್ಯವಸ್ಥೆ ಕುಸಿಯಲು ಈ ದಂಧೆಗಳೇ ಕಾರಣ ಎಂಬ ಮಾತುಗಳು ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು ಇವುಗಳ ವಿರುದ್ಧ ತಿಂಗಳಿಂದ ವಿಶೇಷ ಕಾರ್ಯಾಚರಣೆ ಕೈಗೊಂಡಿದ್ದರು. ಎಷ್ಟೇ ಪ್ರಕರಣಗಳನ್ನು ದಾಖಲಿಸಿದರೂ ದೌಲ ತನ್ನ ದಂಧೆ ಮುಂದುವರಿಸಿರುವುದು ಪೊಲೀಸರ ಪರಿಶೀಲನೆ ವೇಳೆ ಗೊತ್ತಾಗಿತ್ತು. ಹೀಗಾಗಿ ‘ಪಿಟ್‌ ಎನ್‌ಡಿಪಿಎಸ್‌’ ಕಾಯ್ದೆ ಅಡಿಯಲ್ಲಿ ಈತನನ್ನು ಮುಂಜಾಗ್ರತಾ ಕ್ರಮವಾಗಿ ಬಂಧಿಸಿ ಜೈಲಿಗೆ ಅಟ್ಟಲು ಆದೇಶಿಸುವಂತೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸುಮನ್‌ ಡಿ.ಪಿ, ವಲಯ ಐಜಿಪಿಗೆ ಪ್ರಸ್ತಾವನೆ ಸಲ್ಲಿಸಿದ್ದರು. ಪ್ರಸ್ತಾವನೆ ಪರಿಶೀಲಿಸಿದ್ದ ಐಜಿಪಿ ‘ಪಿಟ್‌ ಎನ್‌ಡಿಪಿಎಸ್‌’ನ ಸೆಕ್ಷನ್‌ 3 (1)ರ ಅಡಿಯಲ್ಲಿ ತಮಗಿರುವ ಅಧಿಕಾರ ಬಳಸಿ, ಮುಂಜಾಗ್ರತಾ ಕ್ರಮವಾಗಿ ದೌಲನನ್ನು ಬಂಧಿಸಿ ಜೈಲಿಗಟ್ಟಲು ಅದೇಶಿಸಿದ್ದರು. ಅದರಂತೆ ಪೊಲೀಸರು ದೌಲನ್ನು ಶುಕ್ರವಾರ ಬಂಧಿಸಿ, ಬಳ್ಳಾರಿ ಕೇಂದ್ರ ಕಾರಾಗೃಹಕ್ಕೆ ರವಾನಿಸಿದ್ದಾರೆ.   

ಈ ಕಾಯ್ದೆಯಲ್ಲಿ ಆರೋಪಿಯನ್ನು ಕನಿಷ್ಠ ಒಂದು ವರ್ಷದವರೆಗೆ ಜೈಲಿನಲ್ಲಿ ಇಡಲು ಗೃಹ ಇಲಾಖೆಗೆ ಅವಕಾಶವಿದೆ. ಈ ಸಂಬಂಧ ಗೃಹ ಇಲಾಖೆಗೆ ವರದಿಯನ್ನು ಸಲ್ಲಿಸಲಾಗುತ್ತದೆ. ವರದಿ ಆಧರಿಸಿ ಗೃಹ ಇಲಾಖೆ ಅಧಿಕೃತ ಆದೇಶ ಹೊರಡಿಸಲಿದೆ. 

ಬಳ್ಳಾರಿ ವಲಯ ವ್ಯಾಪ್ತಿಯ ಜಿಲ್ಲೆಗಳಲ್ಲಿ ಡ್ರಗ್ಸ್‌ ದಂಧೆ ವಿರುದ್ಧ ಕಟ್ಟು ನಿಟ್ಟಿನ ಕಾನೂನು ಕ್ರಮ ಕೈಗೊಳ್ಳುತ್ತೇವೆ. ಕಾರ್ಯಾಚರಣೆ ನಿರಂತರವಾಗಿ ಮುಂದುವರಿಯಲಿದೆ 
– ಡಾ. ಪಿ.ಎಸ್‌ ಹರ್ಷ, ಬಳ್ಳಾರಿ ವಲಯ ಐಜಿಪಿ 
ಏನೇ ಮಾಡಿದರೂ ತಪ್ಪಿಸಿಕೊಳ್ಳಬಹುದು ದಂಧೆಗಳನ್ನು ಮುಂದುವರಿಸಬಹುದು ಎಂದು ತಿಳಿದಿರುವವರಿಗೆ ಪೊಲೀಸ್‌ ಇಲಾಖೆಯ ನಡೆ ಸ್ಪಷ್ಟ ಸಂದೇಶವಾಗಲಿದೆ  
– ಸುಮನ್‌ ಡಿ.ಪಿ., ಬಳ್ಳಾರಿ ಎಸ್‌ಪಿ
ದೌಲನ ಮೇಲಿರುವ ಎಲ್ಲ ಪ್ರಕರಣಗಳಲ್ಲಿ ನ್ಯಾಯಾಲಯಲದಲ್ಲಿ ಸಮರ್ಥವಾಗಿ ಅಭಿಯೋಜಿಸಲಾಗುವುದು. ಶಿಕ್ಷೆ ಆಗಲು ಕ್ರಮ ಕೈಗೊಳ್ಳಲಾಗುವುದು 
– ಬಿ.ಎಸ್‌ ಪಾಟೀಲ್, ವಿಭಾಗೀಯ ಹಿರಿಯ ಕಾನೂನು ಅಧಿಕಾರಿ ಬಳ್ಳಾರಿ