
ಬಳ್ಳಾರಿ: ಬಳ್ಳಾರಿ ಘರ್ಷಣೆಯಲ್ಲಿ ಗುಂಡೇಟಿನಿಂದ ಮೃತಪಟ್ಟ ಕಾಂಗ್ರೆಸ್ ಕಾರ್ಯಕರ್ತ ರಾಜಶೇಖರ ಅವರ ಕುಟುಂಬಕ್ಕೆ ಶನಿವಾರ ಬಳ್ಳಾರಿ ಉಸ್ತುವಾರಿ ಸಚಿವ ಜಮೀರ್ ಅಹಮದ್ ಖಾನ್ ಅವರು ₹25 ಲಕ್ಷ ಆರ್ಥಿಕ ನೆರವು ನೀಡಿದರು. ಜೊತೆಗೆ ಸುಸಜ್ಜಿತ ಮನೆಯನ್ನು ನಿರ್ಮಿಸಿಕೊಡುವುದಾಗಿ ಭರವಸೆ ನೀಡಿದರು
ಘಟನೆ ನಡೆದ ಎರಡು ದಿನ್ಗ ಬಳಿಕ ಶನಿವಾರ ಬಳ್ಳಾರಿಗೆ ಬಂದ ಜಮೀರ್ ಅಹಮದ್ ಖಾನ್ ನೇರವಾಗಿ ರಾಜಶೇಖರ್ ಅವರ ಹುಸೇನ್ ನಗರದ ಮೆನೆಗೆ ಭೇಟಿ ನೀಡಿ, ಸಾಂತ್ವನ ಹೇಳಿದರು.
‘ರಾಜಶೇಖರ್ ನಿಧನದಿಂದ ಕುಟುಂಬ ಆಧಾರಸ್ತಂಭ ಕಳೆದುಕೊಂಡಿದೆ. ಅವರ ಕುಟುಂಬಕ್ಕೆ ಆಸರೆಯಾಗುವ ನಿಟ್ಟಿನಲ್ಲಿ ನಾನು, ಶಾಸಕ ಭರತ್ ರೆಡ್ಡಿ ಹಾಗೂ ಗಣೇಶ್ ಸೇರಿ ನೆರವಾಗಿದ್ದೇವೆ. ಸ್ಲಂ ಬೋರ್ಡ್ ವತಿಯಿಂದ ಅವರಿಗೆ ಸುಸಜ್ಜಿತ ಮನೆ ಕಟ್ಟಿಸಿಕೊಡುವ ಭರವಸೆ ನೀಡಿದ್ದೇನೆ. ಪಕ್ಷದ ವತಿಯಿಂದಲೂ ಹೆಚ್ಚಿನ ನೆರವು ನೀಡಲಾಗುವುದು’ ಎಂದು ಜಮೀರ್ ಅಹಮದ್ ಖಾನ್ ಸುದ್ದಿಗಾರರಿಗೆ ತಿಳಿಸಿದರು.
‘ವಾಲ್ಮೀಕಿ ಪ್ರತಿಮೆ ಅನಾವರಣ ನಮ್ಮೆಲ್ಲರ ಬಹು ದಿನಗಳ ಕನಸಾಗಿತ್ತು. ಬ್ಯಾನರ್ ಕಟ್ಟುವ ವಿಷಯದಲ್ಲಿ ಜನಾರ್ದನ ರೆಡ್ಡಿ ದೊಡ್ಡ ಮನಸ್ಸು ಮಾಡಬೇಕಿತ್ತು. ಅದನ್ನು ಬಿಟ್ಟು ಚಿಲ್ಲರೆತನ ಪ್ರದರ್ಶಿಸಿದರು. ಒಂದು ವೇಳೆ ಬ್ಯಾನರ್ ಬೇಡವೆಂದಿದ್ದರೆ, ಶಾಸಕ ಭರತ್ ರೆಡ್ಡಿಗೆ ಫೋನ್ ಮಾಡಿ ಹೇಳಬಹುದಿತ್ತು. ಇಷ್ಟು ದೊಡ್ಡ ಮಟ್ಟದ ಗಲಾಟೆ ಆಗುತ್ತಿರಲಿಲ್ಲ’ ಎಂದರು.
ಇದೇ ವೇಳೆ ಎಚ್.ಎಂ. ರೇವಣ್ಣ ನೇತೃತ್ವದ ಸತ್ಯ ಸಂಶೋಧನಾ ಸಮಿತಿಯು ಜನಾರ್ದನ ರೆಡ್ಡಿ ಮನೆ ಮುಂದಿನ ಗಲಾಟೆ ನಡೆದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿತು. ಶಾಸಕ ಭರತ್ ರೆಡ್ಡಿ ಅವರೊಂದಿಗೆ ಸಮಾಲೋಚನೆ ನಡೆಸಿದ ತಂಡವು ಘಟನೆಯ ಕುರಿತು ಸಂಪೂರ್ಣ ಮಾಹಿತಿ ಕಲೆಹಾಕಿತು.
ಗುಂಡು ಹಾರಿಸಿದವ ಶಾಸಕರ ಪರಿಚಿತ...
ಬಳ್ಳಾರಿ: ‘ಬಳ್ಳಾರಿಯಲ್ಲಿ ಗುರುವಾರ ರಾತ್ರಿ ದಾಳಿಯ ವೇಳೆ ವ್ಯಕ್ತಿಯೊಬ್ಬ ಗುಂಡು ಹಾರಿಸುತ್ತಿರುವುದು ಆ ವ್ಯಕ್ತಿಗೂ ಭರತ್ ರೆಡ್ಡಿ ಮತ್ತು ಅವರ ಆಪ್ತರಿಗೂ ಸಂಪರ್ಕ ಇದೆ’ ಎಂದು ಗಂಗಾವತಿ ಶಾಸಕ ಜಿ. ಜನಾರ್ದನ ರೆಡ್ಡಿ ಇಲ್ಲಿ ಆರೋಪಿಸಿದರು. ಘರ್ಷಣೆ ಸಂದರ್ಭದಲ್ಲಿ ಚಿತ್ರೀಕರಿಸಿದ್ದ ವಿಡಿಯೊವನ್ನು ತಮ್ಮ ಆರೋಪಕ್ಕೆ ಪೂರಕವಾಗಿ ಅವರು ಶನಿವಾರರ ಇಲ್ಲಿ ಮಾಧ್ಯಮಗಳಿಗೆ ಪ್ರದರ್ಶಿಸಿದರು. ‘ಬಾಯಿಗೆ ಬಂದಂತೆ ಮಾತನಾಡಿದರೆ ಹೀರೊಗಳು ಆಗುತ್ತೇವೆ ಎಂಬುದು ಭ್ರಮೆ. ನೀವು ಈಗಾಗಲೇ ಜೀರೊ ಆಗಿದ್ದೀರಿ. 2028ರ ಚುನಾವಣೆಯಲ್ಲಿ ನಿಮ್ಮ ರಾಜಕೀಯ ಕಾಲ ಮುಗಿಯುತ್ತದೆ. ಶ್ರೀರಾಮುಲು ವಿರುದ್ಧ ಅವರ ಕಾಲಿನ ದೂಳಿಗೂ ನೀವು ಸಮಾನರಲ್ಲ’ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು. ಇದೇ ವೇಳೆ ಶಾಸಕ ಬಿ. ನಾಗೇಂದ್ರ ಅವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಅವರು ‘ದಂಧೆಗಳಲ್ಲಿ ತೊಡಗಿದ್ದ ಅವನನ್ನು ಸರಿದಾರಿಗೆ ತಂದಿದ್ದೇ ನಾವು. ಈಗ ಹಗರಣಗಳಲ್ಲಿ ಸಿಲುಕಿ ಅವನ ರಾಜಕೀಯ ಜೀವನವೂ ಅಂತ್ಯವಾಗುತ್ತಿದೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.