ADVERTISEMENT

ಬಳ್ಳಾರಿ | ಎಸ್‌ಎಸ್‌ಎಲ್‌ಸಿ: ಪೂರ್ವಭಾವಿ ಪರೀಕ್ಷೆ ಬಿಗಿ

ನೈಜತೆ ತಿಳಿಯಲು ಮುಂದಾದ ಅಧಿಕಾರಿಗಳು; ಫಲಿತಾಂಶದ ಆಧಾರದಲ್ಲಿ ವಿದ್ಯಾರ್ಥಿಗಳಿಗೆ ಸೂಕ್ತ ತರಬೇತಿ

ಆರ್. ಹರಿಶಂಕರ್
Published 13 ಡಿಸೆಂಬರ್ 2025, 6:02 IST
Last Updated 13 ಡಿಸೆಂಬರ್ 2025, 6:02 IST
sumer
sumer   

ಬಳ್ಳಾರಿ: ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಈ ಭಾರಿ ಶತಾಯಗತಾಯ ಉತ್ತಮ ಫಲಿತಾಂಶ ಪಡೆಯಲು ಪ್ರಯತ್ನಿಸಲಾಗುತ್ತಿದ್ದು, ಅದಕ್ಕಾಗಿ ಪೂರ್ವಭಾವಿ ಪರೀಕ್ಷೆಯನ್ನೇ ಬಿಗಿ ಮಾಡಲು ಅಧಿಕಾರಿಗಳು ನಿರ್ಧರಿಸಿದ್ದಾರೆ.  

ಕಳೆದ ಬಾರಿಯ ಪೂರ್ವಭಾವಿ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಸಾಗಿದ್ದರು. ಇದು ಜಿಲ್ಲಾಡಳಿತ, ಶಾಲಾ ಶಿಕ್ಷಣ ಇಲಾಖೆಯ ಅಧಿಕಾರಿಗಳ ಮುಖದಲ್ಲಿ ಹರ್ಷ ಮೂಡಿಸಿತ್ತು.  ಆದರೆ, ಮುಖ್ಯ ಪರೀಕ್ಷೆ ಫಲಿತಾಂಶಗಳು ಪ್ರಕಟವಾದಾಗ ಜಿಲ್ಲೆಯು ನೀರಸ ಸಾಧನೆ ಮಾಡಿ ಪಾತಾಳಕ್ಕೆ ಕುಸಿದಿತ್ತು. 

ಪರೀಕ್ಷೆಗೆ ಹಾಜರಾದ ಒಟ್ಟು 20,126 ವಿದ್ಯಾರ್ಥಿಗಳಲ್ಲಿ 12,128 ಮಂದಿ ಪಾಸಾಗಿ, ಶೇ 60.26 ರಷ್ಟು ಫಲಿತಾಂಶ ಸಿಕ್ಕಿತ್ತು. ಜಿಲ್ಲೆ 29ನೇ ಸ್ಥಾನಕ್ಕೆ ಜಾರಿತ್ತು.  

ADVERTISEMENT

ಮುಖ್ಯ ಪರೀಕ್ಷೆಯಷ್ಟೇ ಕಟ್ಟು ನಿಟ್ಟಾದ ಪರೀಕ್ಷೆಯ ಬರೆದು ಹೆಚ್ಚಿನ ಸಂಖ್ಯೆಯಲ್ಲಿ ಪಾಸಾಗಿದ್ದ ಅದೇ ವಿದ್ಯಾರ್ಥಿಗಳು, ಮುಖ್ಯಪರೀಕ್ಷೆಯಲ್ಲಿ ಮಾತ್ರ ಯಾಕೆ ವಿಫಲರಾದರೂ ಎಂಬ ಪ್ರಶ್ನೆ ಅಧಿಕಾರಿಗಳಲ್ಲಿ ಮೊಳೆತಿತ್ತು. ಹೀಗಾಗಿಯೇ ಈ ಬಾರಿ ಪೂರ್ವಭಾವಿಯನ್ನು ಅತ್ಯಂತ ಕಟ್ಟುನಿಟ್ಟಾಗಿ ನಡೆಸಲು ನಿರ್ಧರಿಸಲಾಗಿದೆ. 

ಈ ಬಾರಿಯ ಪೂರ್ವಭಾವಿ ಪರೀಕ್ಷೆಯಲ್ಲಿ ನೈಜ ಫಲಿತಾಂಶ ಪಡೆಯಲು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಾಕ ಅಧಿಕಾರಿ ಮೊಹಮದ್‌ ಹ್ಯಾರಿಸ್‌ ಸುಮೇರ್, ಒಂದಷ್ಟು ಕ್ರಮಗಳನ್ನು ಶಾಲಾ ಶಿಕ್ಷಣ ಇಲಾಖೆಗೆ ಸೂಚಿಸಿದ್ದಾರೆ. 

ಏನೇನು ಕ್ರಮ: ಪೂರ್ವಭಾವಿ ಪರೀಕ್ಷೆಯ ವೇಳೆ ಪರೀಕ್ಷಾ ಮೇಲ್ವಿಚಾರಕರನ್ನು ಬದಲಿಸಲಾಗುತ್ತಿದೆ. ಉದಾಹರಣೆಗೆ ಬಳ್ಳಾರಿ ತಾಲೂಕಿನ ಮೇಲ್ವಿಚಾರಕರು, ಅಧಿಕಾರಿಗಳನ್ನು ಸಂಡೂರಿಗೆ, ಸಂಡೂರಿನವರನ್ನು ಬೇರೆ ತಾಲ್ಲೂಕಿಗೆ ಹಾಕಲಾಗುತ್ತಿದೆ. ಆದರೆ, ಯಾರನ್ನು ಯಾವ ತಾಲ್ಲೂಕಿಗೆ ನಿಯೋಜಿಸಬೇಕು ಎಂಬುದು ಇನ್ನೂ ತೀರ್ಮಾನವಾಗಿಲ್ಲ. ಇದರ ಜತೆಗೆ, ಪರೀಕ್ಷೆಗಳನ್ನು ಸಿ.ಸಿ ಟಿವಿ ಕ್ಯಾಮೆರಾ ಕಣ್ಗಾವಲಿನಲ್ಲಿ ನಡೆಸಲು ತೀರ್ಮಾನಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಪರೀಕ್ಷಾ ಪತ್ರಿಕೆಗಳ ಮೌಲ್ಯಮಾಪನವನ್ನೂ ಬೇರೆ ಬೇರೆ ತಾಲೂಕಿನ ಶಿಕ್ಷಕರಿಂದ ಮಾಡಿಸಲು ನಿರ್ಧರಿಸಲಾಗಿದೆ. 

ಹೀಗೆ ಮಾಡುವುದರಿಂದ ವಿದ್ಯಾರ್ಥಿಗಳ ಪರೀಕ್ಷೆ ಮತ್ತು ಮೌಲ್ಯಮಾಪನ ಸರಿಯಾಗಿ ನಡೆಯುತ್ತದೆ. ವಿದ್ಯಾರ್ಥಿಗಳ ಕಲಿಕಾ ಮಟ್ಟ ಎಷ್ಟಿದಿದೆ ಎಂಬುದು ತಿಳಿಯಲಿದೆ ಎಂಬುದು ಜಿಲ್ಲಾ ಪಂಚಾಯಿತಿ ಸಿಇಒ ಮತ್ತು ಶಾಲಾ ಶಿಕ್ಷಣ ಇಲಾಖೆಯ ಅಧಿಕಾರಿಗಳ ನಿಲುವಾಗಿದೆ. 

ಪೂರ್ವಭಾವಿ ಪರೀಕ್ಷೆಯಲ್ಲಿ ವಿಫಲರಾದವರಿಗೆ ಮುಖ್ಯ ಪರೀಕ್ಷೆಗೆ ಸಜ್ಜಾಗಲು ಮತ್ತಷ್ಟು ಆದ್ಯತೆ ನೀಡಲಾಗುತ್ತದೆ. ಯಾರು ಯಾವ ವಿಷಯದಲ್ಲಿ ಎಡವುತ್ತಿದ್ದಾರೋ ಆ ವಿಷಯದ ಬಗ್ಗೆ ಅವರಿಗೆ ಹೆಚ್ಚಿನ ತರಬೇತಿ ಕೊಡಲಾಗುತ್ತದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. 

ಆದರೆ, ಇದೇ ಬಿಗಿ ಕ್ರಮಗಳನ್ನು ಮೊದಲಿನಿಂದಲೇ ಕೈಗೊಳ್ಳಬೇಕಾಗಿತ್ತು ಎಂಬುದು ಒಂದಷ್ಟು ಜನರ ಅಭಿಪ್ರಾಯವೂ ಆಗಿದೆ. 

ಈ ಭಾರಿಯ ಪೂರ್ವಭಾವಿ ಪರೀಕ್ಷೆಯನ್ನು ವಿಶಿಷ್ಟವಾಗಿ ಮತ್ತು ಕಟ್ಟುನಿಟ್ಟಾಗಿ ನಡೆಸಲಾಗುತ್ತಿದೆ. ಮೇಲ್ವಿಚಾರಕರು ಅಧಿಕಾರಿಗಳನ್ನು ಬದಲಾವಣೆ ಮಾಡುತ್ತಿದ್ದೇವೆ. ಮೌಲ್ಯಮಾಪನವನ್ನೂ ಬೇರೆ ತಾಲ್ಲೂಕಿನವರು ನಡೆಸುತ್ತಾರೆ  
ಉಮಾದೇವಿ ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕಿ
ಉಮಾದೇವಿ 
ಕಳೆದ ವರ್ಷದ ಪೂರ್ವ ಭಾವಿ ಪರೀಕ್ಷಾ ಫಲಿತಾಂಶದ ನೈಜ ಚಿತ್ರಣ ನಮಗೆ ಗೊತ್ತಾಗಿರಲಿಲ್ಲ. ಈ ಬಾರಿ ನೈಜತೆ ತಿಳಿಯಲು ಮುಂದಾಗಿದ್ದೇವೆ. ಇದರಿಂದ ಮುಖ್ಯ ಪರೀಕ್ಷೆಗೆ ಯೋಜನೆ ರೂಪಿಸಲು ಅನುಕೂಲವಾಗಲಿದೆ  
ಮೊಹಮದ್‌ ಹ್ಯಾರಿಸ್‌ ಸುಮೇರ್‌ ಜಿಲ್ಲಾ ಪಂಚಾಯಿತಿ ಸಿಇಒ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.