
ಛಲವಾದಿ ನಾರಾಯಣಸ್ವಾಮಿ
ಬಳ್ಳಾರಿ: ‘ಗನ್, ಗುಂಡು ನಿಮ್ಮದು, ಗುಂಡು ಹಾರಿಸಿದವರು ನಿಮ್ಮವರು, ಸತ್ತವರು ನಿಮ್ಮವರು, ಕೇಸು ಮಾತ್ರ ಜನಾರ್ದನ ರೆಡ್ಡಿ, ಶ್ರೀರಾಮುಲು ಮೇಲೆನಾ’ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣ ಸ್ವಾಮಿ ಪ್ರಶ್ನಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಗುಂಡಿನ ದಾಳಿ ನಡೆಸಿದ ಅಂಗರಕ್ಷಕ ಹಾಗೂ ಅವರನ್ನು ಕೆಲಸಕ್ಕೆ ಇಟ್ಟುಕೊಂಡವರನ್ನು ಸರ್ಕಾರ ಬಂಧಿಸಬೇಕಿತ್ತು. ಆದರೆ, ಗನ್ನುಗಳನ್ನು ಬಂಧಿಸಲಾಗಿದೆಯಂತೆ’ ಎಂದು ವ್ಯಂಗ್ಯವಾಡಿದರು.
‘ಜನಾರ್ದನ ರೆಡ್ಡಿ ಮನೆ ಎದುರಿನ ಬ್ಯಾನರ್ ತೆಗೆದಿದ್ದು ಪೊಲೀಸರು. ಆ ಕಾರಣಕ್ಕೆ ಶಾಸಕ ಭರತ್, ಸಾವಿರಾರು ಜನರನ್ನು ಕರೆದುಕೊಂಡು ಬಂದಿದ್ದರು. ಅವರಿಗೆ ಡಿಎಸ್‌ಪಿ ಚಂದ್ರಕಾಂತ ನಂದಾರೆಡ್ಡಿ ಬೆಂಗಾವಲು ನೀಡಿದ್ದರು. ಅವರನ್ನೇಕೆ ಅಮಾನತು ಮಾಡಲಿಲ್ಲ. ಎಸ್‌ಪಿಯನ್ನೇ ಏಕೆ ಬಲಿಪಶು ಮಾಡಲಾಯಿತು?’ ಎಂದು ಕೇಳಿದರು.
‘ಇದು ಗಾಂಜಾ ಗುಂಗಿನಲ್ಲಿ ಆದ ಜಗಳ. ಇಡೀ ರಾಜ್ಯ ಗಾಂಜಾ ಬೀಡಾಗಿದೆ. ಗೃಹ ಸಚಿವ ಪಾರ್ಟ್‌ಟೈಮ್ ಮಿನಿಸ್ಟರ್ ಆಗಿದ್ದಾರೆ. ಫುಲ್ ಟೈಮ್ ಆಗಿದ್ದರೆ ಹೀಗಾಗುತ್ತಿರಲಿಲ್ಲ. ರಾಜ್ಯದ ಎಲ್ಲ ಶಾಸಕರೂ ಗೃಹಸಚಿವರೇ ಆಗಿದ್ದಾರೆ’ ಎಂದು ಹೇಳಿದರು.
‘ಜನಾರ್ದನ ರೆಡ್ಡಿಯನ್ನು ಮುಗಿಸುತ್ತೇನೆ, ತಾಳ್ಮೆ ಕೆಟ್ಟರೆ ಬಳ್ಳಾರಿಯನ್ನೇ ಸುಟ್ಟು ಹಾಕುತ್ತೇನೆಂದು ಶಾಸಕನೊಬ್ಬ ಹೇಳುತ್ತಾನೆ. ಅವನ ಸ್ಥಾನಕ್ಕೆ ಏನಾದರೂ ಮಾನ್ಯತೆ ಇದೆಯೇ? ಆ ಶಾಸಕನನ್ನೂ ಕಾಂಗ್ರೆಸ್ ಅಮಾನತು ಮಾಡಬೇಕಿತ್ತು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.