
ಬಳ್ಳಾರಿ: ನಗರದ ಬೆಂಗಳೂರು ರಸ್ತೆಯಲ್ಲಿರುವ ಕಬರಸ್ತಾನ ಕಬಳಿಕೆ ಆರೋಪಕ್ಕೆ ಸಂಬಂಧಿಸಿದಂತೆ ಪಾಲಿಕೆ ಮತ್ತು ಜಿಲ್ಲಾ ವಕ್ಫ್ ಅಧಿಕಾರಿಯಿಂದ ಎರಡು ಪ್ರತ್ಯೇಕ ಎಫ್‌ಐಆರ್‌ಗಳು ದಾಖಲಾಗಿವೆ.
ಪಾಲಿಕೆ ವಲಯ ಆಯುಕ್ತ ಶ್ರೀನಾಥ ಹೊಗಾಡೆ ನೀಡಿದ ದೂರು ಆಧರಿಸಿ ಬ್ರೂಸ್‌ಪೇಟೆ ಠಾಣೆಯಲ್ಲಿ ವಿಷಯ ನಿರ್ವಾಹಕ ಶ್ರೀಕಾಂತ್, ಕಂದಾಯ ನಿರೀಕ್ಷಕರಾದ ಮನೋಹರ್, ನರೇಶ್ ಕುಮಾರ್, ಸಹಾಯಕ ಕಂದಾಯ ಅಧಿಕಾರಿ ವೆಂಕಟೇಶ್ವರಲು, ಕಂದಾಯ ಅಧಿಕಾರಿ ನಾರಾಯಣ, ಮುಖ್ಯ ಕಚೇರಿಯ ಡೇಟಾ ಎಂಟ್ರಿ ಆಪರೇಟರ್ ಸ್ನೇಹಾ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ನಕಲಿ ದಾಖಲೆಗಳನ್ನು ಸೃಷ್ಟಿಸಿ 2025ರ ಡಿಸೆಂಬರ್ 24ರಂದು ಪಾಲಿಕೆಗೆ ಸಂಬಂಧಪಡದ ಐ.ಪಿ ಅಡ್ರೆಸ್‌ಗಳನ್ನು ಬಳಸಿಕೊಂಡು, ಇ-ಆಸ್ತಿ ತಂತ್ರಾಂಶದಲ್ಲಿ ಲಾಗ್ ಇನ್ ಆಗಿ, ಎ.ಪ್ರಭಾವತಿ ಎಂಬುವವರಿಗೆ ಮೇಲಿನ ಆರೋಪಿಗಳು ಹಕ್ಕು ವರ್ಗಾವಣೆ ಮಾಡಿಕೊಟ್ಟು, ನಮೂನೆ –2 ನೀಡಿದ್ದಾರೆ. ಈ ನಮೂನೆ–2 ನಕಲಿಯಾಗಿದ್ದು, ಕರ್ನಾಟಕ ಪೌರ ಅಧಿನಿಯಮ 1976ರ ಕಲಂ 114 ಎ ರನ್ವಯ ರದ್ದು ಪಡಿಸಲು ಕ್ರಮ ಕೈಗೊಳ್ಳಲಾಗಿದೆ ಎಂದೂ ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.
ಆರೋಪಿಗಳು, ಎ. ಪ್ರಭಾವತಿ ಅವರ ಹೆಸರಿಗೆ ಹಕ್ಕು ಬದಲಾವಣೆ ಮಾಡಿಕೊಡುವುದಾಗಿ ಅವರ ಪತಿಯಿಂದ ವಿವಿಧ ಶುಲ್ಕಗಳೆಂದು ಒಟ್ಟು ₹24,06,610 ಪಡೆದು ವಂಚಿಸಿದ್ದಾರೆ ಎಂದೂ ಪಾಲಿಕೆ ಅಧಿಕಾರಿಗಳ ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ ಎಂದು ದೂರಿನಲ್ಲಿ ಹೇಳಲಾಗಿದೆ.
ನಾಲ್ವರು ಮಹಿಳೆಯರ ವಿರುದ್ಧ ಎಫ್‌ಐಆರ್: ಜಿಲ್ಲಾ ವಕ್ಫ್ ಅಧಿಕಾರಿ ಕೌಲ್ ಬಜಾರ್ ಠಾಣೆಯಲ್ಲಿ ನಾಲ್ವರು ಮಹಿಳೆಯರ ವಿರುದ್ಧ ದೂರು ನೀಡಿದ್ದು, ಎಫ್‌ಐಆರ್ ದಾಖಲಾಗಿದೆ.
ಆಂಧ್ರ ಪ್ರದೇಶದ ರಂಗಮ್ಮ, ಕಾಂಡ್ರಾ ಶಕುಂತಲಾ, ಬಳ್ಳಾರಿ ನಗರದ ಪಾರ್ವತಿ, ಪ್ರಭಾವತಿ ಎಂಬುವವರನ್ನು ಆರೋಪಿಗಳನ್ನಾಗಿ ಮಾಡಲಾಗಿದೆ.
‘11.94 ಸೆಂಟ್ಸ್‌ಗಳ ಕಬರಸ್ತಾನದ ಜಾಗ ವಕ್ಫ್ ಆಸ್ತಿಯಾಗಿದ್ದು, ಮೂಲ ಮಾಲೀಕ ಗುರಪ್ಪ ಅವರ ಕುಟುಂಬಸ್ಥರಾದ ರಂಗಮ್ಮ, ಕಾಂಡ್ರಾ ಶಕುಂತಲಾ, ಕೆ.ಪಾರ್ವತಿ ಎಂಬುವವರು 2022ರಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ಜಮೀನನ್ನು ತಮ್ಮ ಹೆಸರಿಗೆ ಮಾಡಿಕೊಂಡಿದ್ದಾರೆ. ಬಳಿಕ ಪಾರ್ವತಿ ಎಂಬುವರಿಗೆ ಮಾರಾಟ ಮಾಡಿದ್ದಾರೆ. ಪಾರ್ವತಿ ಅವರು ತಮ್ಮ ಮಗಳು ಎ.ಪ್ರಭಾವತಿಗೆ ದಾನಕ್ರಯ ಮಾಡಿಸಿದ್ದಾರೆ. ಮಹಾನಗರ ಪಾಲಿಕೆಯಲ್ಲಿ ಫಾರಂ ನಂ-2ನ್ನು ಪಡೆದಿದ್ದಾರೆ’ ಎಂದು ಆರೋಪಿಸಲಾಗಿದೆ.
ಪ್ರಕರಣದ ವರದಿ ಕೇಳಿದ್ದೇನೆ. ಖಾತೆ ರದ್ದಾಗಬೇಕು ಎಂದು ಪಾಲಿಕೆ ಆಯುಕ್ತರಿಗೆ ಸೂಚಿಸಿದ್ದೇನೆ. ಆರೋಪಿಗಳ ವಿರುದ್ಧ ಈಗಾಗಲೇ ಎಫ್‌ಐಆರ್ ಮಾಡಲಾಗಿದೆ. ಫಾರಂ–2 ರದ್ದು ಮಾಡಲಾಗಿದೆನಾಗೇಂದ್ರ ಪ್ರಸಾದ್ ಕೆ. ಜಿಲ್ಲಾಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.