ADVERTISEMENT

ರಾಜಕಾರಣದಲ್ಲಿ ಪಾಲನೆಯಾಗದ ನೈತಿಕ ಮೌಲ್ಯ: ಬಸವರಾಜ ಹೊರಟ್ಟಿ

‘ಎಂ.ಪಿ.ಪ್ರಕಾಶ್ ಸಂಸದೀಯ ಪ್ರಶಸ್ತಿ’ ಸ್ವೀಕರಿಸಿದ  ಸಭಾಪತಿ ಬಸವರಾಜ ಹೊರಟ್ಟಿ

​ಪ್ರಜಾವಾಣಿ ವಾರ್ತೆ
Published 7 ಜುಲೈ 2025, 4:36 IST
Last Updated 7 ಜುಲೈ 2025, 4:36 IST
ಹರಪನಹಳ್ಳಿ ಟಿಎಂಎಇ ಸಂಸ್ಥೆಯಲ್ಲಿ ಜರುಗಿದ ಸಮಾರಂಭದಲ್ಲಿ ರಾಜಕೀಯ ಅಕಾಡೆಮಿಯಿಂದ ಎಂ.ಪಿ.ಪ್ರಕಾಶ್ ಸಂಸದೀಯ ಪ್ರಶಸ್ತಿಯನ್ನು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರಿಗೆ ಪ್ರದಾನ ಮಾಡಲಾಯಿತು. ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ, ಶಾಸಕಿ ಎಂ.ಪಿ.ಲತಾ ಮಲ್ಲಿಕಾರ್ಜುನ್, ವರದ್ಯೋಜಾತ ಸ್ವಾಮೀಜಿ ಹಾಜರಿದ್ದರು
ಹರಪನಹಳ್ಳಿ ಟಿಎಂಎಇ ಸಂಸ್ಥೆಯಲ್ಲಿ ಜರುಗಿದ ಸಮಾರಂಭದಲ್ಲಿ ರಾಜಕೀಯ ಅಕಾಡೆಮಿಯಿಂದ ಎಂ.ಪಿ.ಪ್ರಕಾಶ್ ಸಂಸದೀಯ ಪ್ರಶಸ್ತಿಯನ್ನು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರಿಗೆ ಪ್ರದಾನ ಮಾಡಲಾಯಿತು. ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ, ಶಾಸಕಿ ಎಂ.ಪಿ.ಲತಾ ಮಲ್ಲಿಕಾರ್ಜುನ್, ವರದ್ಯೋಜಾತ ಸ್ವಾಮೀಜಿ ಹಾಜರಿದ್ದರು   

ಹರಪನಹಳ್ಳಿ: ‘ನೈತಿಕ ಮೌಲ್ಯ, ಸಂವಿಧಾನಿಕ ನಿಯಮ ಪಾಲನೆಯಾಗದೇ ಇಂದಿನ ರಾಜಕಾರಣ ಕಲುಷಿತವಾಗಿದೆ’ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಬೇಸರ ವ್ಯಕ್ತಪಡಿಸಿದರು.

ಪಟ್ಟಣದ ಟಿಎಂಎಇ ಸಂಸ್ಥೆಯ ಡಿ.ಇಡಿ.ಕಾಲೇಜು ಸಭಾಂಗಣದಲ್ಲಿ ಬೆಂಗಳೂರಿನ ಕರ್ನಾಟಕ‌ ರಾಜಕೀಯ ಅಕಾಡೆಮಿ ಭಾನುವಾರ ಆಯೋಜಿಸಿದ್ದ ‘ಎಂ.ಪಿ.ಪ್ರಕಾಶ್‌ ಸಂಸದೀಯ ಪ್ರಶಸ್ತಿ’ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು.

‘ಸದನದಲ್ಲಿ ಮುಖ್ಯವಾಗಿ ರೈತರು, ಆಸ್ಪತ್ರೆಗಳ ಬಗ್ಗೆ ಚರ್ಚೆಯಾಗಬೇಕಿತ್ತು. ಆದರೆ ಹನಿಟ್ರ್ಯಾಪ್ ವಿಷಯ ತಂದು ಸದನದ ಸಮಯ ಹಾಳು ಮಾಡಿದರು. ಸಭಾಪತಿ ಸ್ಥಾನ ಮುಳ್ಳಿನ ಹಾಸಿಗೆ ಇದ್ದಂತೆ, ಈಚೆಗೆ ನಾನು ಆ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದೆ. ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಶಿಕ್ಷಕರು ಹಣ ಪಡೆದು ಮತ ಚಲಾಯಿಸುತ್ತಿದ್ದಾರೆ. ಜಾತಿ, ಧರ್ಮ ಕೇಳುವ ಪರಿಸ್ಥಿತಿಗೆ ರಾಜಕಾರಣ ತಲುಪಿದೆ’ ಎಂದು ವಿಷಾದಿಸಿದರು.

ADVERTISEMENT

ಎಂ.ಪಿ.ಪ್ರಕಾಶ್, ರಾಮಕೃಷ್ಣ ಹೆಗಡೆ, ಗುಂಡೂರಾವ್‌ರಂತಹ ಒಡನಾಟ, ಹಿಂದಿನ ಪರಿಶುದ್ಧ ರಾಜಕಾರಣ, ಕ್ರಮೇಣ ಕಲುಷಿತವಾದ ಬಗೆ ಹಾಗೂ 45 ವರ್ಷದಲ್ಲಿ ರಾಜಕೀಯ ಅನುಭವದ ತುಣುಕುಗಳನ್ನು ಪ್ರಸ್ತಾಪಿಸಿದರು.

‘ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಮಾತನಾಡಿ, ಓಲೈಕೆ ರಾಜಕಾರಣ, ಜಾತಿ ಸಮೀಕ್ಷೆಯ ಒದ್ದಾಟಗಳು, ಧರ್ಮದ ಓಲೈಕೆಗಳು ಮತ ಬ್ಯಾಂಕ್‌ ಗಳಿಕೆಗಾಗಿ ಸಮಾಜ ಒಡೆದಾಳುವ ತುಷ್ಠೀಕರಣದ ವ್ಯವಸ್ಥೆ ಪ್ರಚಲಿತದಲ್ಲಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

ಆದರ್ಶ ರಾಜಕಾರಣಿಯಾಗಲು ದೂರ ದೃಷ್ಟಿಕೋನದ ಚಿಂತನಾ ಶಕ್ತಿ ಅಗತ್ಯ. ಎಂ.ಪಿ.ಪ್ರಕಾಶ್‌ ಮತ್ತು ಬಸವರಾಜ ಹೊರಟ್ಟಿ ಅವರು ಮೀಡಿಯಾ ಮ್ಯಾನೆಜ್‌ ವ್ಯಕ್ತಿತ್ವದಿಂದ ದೂರ ಉಳಿದು, ಮಾದರಿ ರಾಜಕಾರಣಿಯಾಗಿದ್ದಾರೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಶಾಸಕಿ ಎಂ.ಪಿ.ಲತಾ ಮಲ್ಲಿಕಾರ್ಜುನ, ತೆಗ್ಗಿನಮಠದ ವರಸದ್ಯೋಜಾತ ಶಿವಾಚಾರ್ಯ ಸ್ವಾಮೀಜಿ, ರಾಜಕೀಯ ಅಕಾಡೆಮಿ ಗೌರವ ಅಧ್ಯಕ್ಷ ಸಿರಿಗೆರೆ ಯರ್ರಿಸ್ವಾಮಿ ಮಾತನಾಡಿದರು.

ಮೇಲ್ಮನೆ ಘನತೆಗೆ ಧಕ್ಕೆ

ವಿಧಾನ ಪರಿಷತ್ ಶ್ರೇಷ್ಠವಾದದ್ದು ಇಲ್ಲಿಗೆ ಕಲೆ ಸಾಹಿತ್ಯ ರಾಜಕಾರಣದಲ್ಲಿ ಪ್ರತಿಭೆ ಹೊಂದಿದವರು ಚಿಂತಕರನ್ನು ಎಂಎಲ್‌ಸಿಯಾಗಿ ಆಯ್ಕೆ ಮಾಡಬೇಕು. ಸರ್ಕಾರ ವಿಧಾನ ಪರಿಷತ್ತಿಗೆ 11 ಜನರ ಹೆಸರು ಶಿಫಾರಸ್ಸು ಮಾಡಿದಾಗ ಇದರ ಬಗ್ಗೆ ಭಿನ್ನಾಭಿಪ್ರಾಯ ಬಂತು. ತಕ್ಷಣ ರಾಜ್ಯಪಾಲರಿಗೆ ಮುಖ್ಯಮಂತ್ರಿ ಉಪಮುಖ್ಯಮಂತ್ರಿಗೆ ಪತ್ರ ಬರೆದಿರುವೆ. ಅದು ಚರ್ಚೆಯಾಗಿ ಹಾಗೆಯೇ ಕುಂತಿದೆ. ಹಣ ಬಲದಿಂದ ಆಯ್ಕೆಯಾಗಿ ಬರುವವರ ಸಂಖ್ಯೆ ಹೆಚ್ಚಿದ್ದರಿಂದ ಮೇಲ್ಮನೆ ಘನತೆಗೆ ದಕ್ಕೆಯಾಗುತ್ತಿದೆ’ ಎಂದು ಹೊರಟ್ಟಿ ಬೇಸರ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.