ADVERTISEMENT

ಸಂತ ಸೇವಾಲಾಲ್‌ ಮಂದಿರ ಧ್ವಂಸಕ್ಕೆ ಖಂಡನೆ: ಬಂಜಾರ ಸಮುದಾಯದಿಂದ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2019, 8:23 IST
Last Updated 13 ಡಿಸೆಂಬರ್ 2019, 8:23 IST
ಬಂಜಾರ ಸಮುದಾಯದವರು ಶುಕ್ರವಾರ ಹೊಸಪೇಟೆಯಲ್ಲಿ ಪ್ರತಿಭಟನೆ ನಡೆಸಿದರು
ಬಂಜಾರ ಸಮುದಾಯದವರು ಶುಕ್ರವಾರ ಹೊಸಪೇಟೆಯಲ್ಲಿ ಪ್ರತಿಭಟನೆ ನಡೆಸಿದರು   

ಹೊಸಪೇಟೆ: ಕಲಬುರ್ಗಿಯ ಮಾದಿಹಾಳ್‌ ತಾಂಡದಲ್ಲಿ ನಡೆದಿದೆ ಎನ್ನಲಾದ ಸಂತ ಸೇವಾಲಾಲ್‌ ಮಂದಿರ ಧ್ವಂಸ ಘಟನೆಯನ್ನು ಖಂಡಿಸಿ, ಬಂಜಾರ ಸಮುದಾಯದವರು ಶುಕ್ರವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.

ನಗರದ ಮಹಾತ್ಮ ಗಾಂಧಿ ವೃತ್ತದಲ್ಲಿ ಸೇರಿದ ಪ್ರತಿಭಟನಾಕಾರರು ಪುಣ್ಯಮೂರ್ತಿ ವೃತ್ತ, ಬಸ್‌ ನಿಲ್ದಾಣ ರಸ್ತೆ ಮೂಲಕ ಹಾದು ತಹಶೀಲ್ದಾರ್‌ ಕಚೇರಿ ಬಳಿ ಸಮಾವೇಶಗೊಂಡರು. ಬಳಿಕ ತಹಶೀಲ್ದಾರ್‌ಗೆ ಮನವಿ ಪತ್ರ ಸಲ್ಲಿಸಿದರು.

‘ವಿಮಾನ ನಿಲ್ದಾಣ ನಿರ್ಮಾಣದ ಹೆಸರಿನಲ್ಲಿ ಕಲಬುರ್ಗಿಯಲ್ಲಿ ಸಂತ ಸೇವಾಲಾಲ್‌ ಅವರ ಮಂದಿರ ಧ್ವಂಸಗೊಳಿಸುರುವುದು ಅವರಿಗೆ ಹಾಗೂ ಅವರ ಸಮುದಾಯಕ್ಕೆ ಮಾಡಿರುವ ಅಪಮಾನ. ಅದಕ್ಕೆ ಸಂಬಂಧಿಸಿದ ಅಧಿಕಾರಿಗಳನ್ನು ಬಂಧಿಸಿ, ವಿರುದ್ಧ ಪ್ರಕರಣ ದಾಖಲಿಸಬೇಕು. ಅದೇ ಜಾಗದಲ್ಲಿ ದೇಗುಲ ಮರು ಸ್ಥಾಪಿಸಬೇಕು’ ಎಂದು ಮನವಿಯಲ್ಲಿ ಒತ್ತಾಯಿಸಿದರು.

ADVERTISEMENT

‘ಸಮಾಜದಲ್ಲಿ ಜಾಗೃತಿ ಮೂಡಿಸಿ, ಬ್ರಿಟಿಷರ ವಿರುದ್ಧ ಹೋರಾಡಲು ಜನರನ್ನು ಸಂಘಟಿಸಿದ ಕೀರ್ತಿ ಸಂತ ಸೇವಾಲಾಲ್‌ ಅವರಿಗೆ ಸಲ್ಲುತ್ತದೆ. ಪಶುಪಾಲನೆ, ಕೃಷಿ, ವ್ಯಾಪಾರ, ಸಾಂಸ್ಕೃತಿಕ ಲೋಕಕ್ಕೆ ಅವರು ಕೊಟ್ಟಿರುವ ಕೊಡುಗೆ ಅಪಾರ. ಅಂತಹ ಸಂತನಿಗೆ ಅವಮಾನ ಮಾಡಿರುವುದು ಸರಿಯಲ್ಲ. ಸರ್ಕಾರ ಕೂಡಲೇ ಕ್ಷಮೆಯಾಚಿಸಬೇಕು’ ಎಂದು ಆಗ್ರಹಿಸಿದರು.

‘ಕಲಬುರ್ಗಿ ವಿಮಾನ ನಿಲ್ದಾಣಕ್ಕೆ ಸೇವಾಲಾಲ್‌ ಅವರ ಹೆಸರಿಡಬೇಕು. ಜಮೀನು ಕಳೆದುಕೊಂಡ ಲಂಬಾಣಿ ಸಮುದಾಯದವರಿಗೆ ಸರ್ಕಾರಿ ನೌಕರಿ ಕೊಡಬೇಕು. ಇಲ್ಲವಾದಲ್ಲಿ ಬರುವ ದಿನಗಳಲ್ಲಿ ರಾಜ್ಯದಾದ್ಯಂತ ಉಗ್ರ ಹೋರಾಟ ನಡೆಸಲಾಗುವುದು’ ಎಂದು ಎಚ್ಚರಿಸಿದರು.

ಮುಖಂಡರಾದ ಜಾನ್ಯ ನಾಯ್ಕ, ಗೋಲ್ಯ ನಾಯ್ಕ, ಎಸ್‌.ಎಸ್‌. ನಾಯ್ಕ, ಹೇಮಗಿರಿ ನಾಯ್ಕ, ಭೀಮಾ ನಾಯ್ಕ, ಮಂಜು ನಾಯ್ಕ, ಎಲ್‌.ಎಸ್‌. ಮಂಜುನಾಥ ನಾಯ್ಕ, ಶಕುಂತಲಬಾಯಿ, ಜಮಲಬಾಯಿ, ಎಲ್‌. ರಮೇಶ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.