
ಜನಾರ್ದನ ರೆಡ್ಡಿ
ಬಳ್ಳಾರಿ: ಬ್ಯಾನರ್ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿ ನಡೆದ ಗುಂಪು ಘರ್ಷಣೆ, ಕಲ್ಲು ತೂರಾಟ ಹಾಗೂ ಗುಂಡಿನ ದಾಳಿಯಲ್ಲಿ ಮೃತಪಟ್ಟ ಕಾಂಗ್ರೆಸ್ ಕಾರ್ಯಕರ್ತ ರಾಜಶೇಖರ್ ರೆಡ್ಡಿ ಪ್ರಕರಣವನ್ನು ಮುಚ್ಚಿ ಹಾಕುವ ಹುನ್ನಾರ ನಡೆದಿದೆ ಎಂದು ಶಾಸಕ ಜನಾರ್ದನ ರೆಡ್ಡಿ ಆಗ್ರಹಿಸಿದ್ದಾರೆ.
ಶವ ಸಂಸ್ಕಾರಕ್ಕೆ ಸಂಬಂಧಿಸಿದ ವಿಡಿಯೊವೊಂದನ್ನು ಶುಕ್ರವಾರ ಬಿಡುಗಡೆ ಮಾಡಿದ ಅವರು, ‘ಸರ್ಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಶಾಸಕ ಭರತ್ ರೆಡ್ಡಿ ಹಾಗೂ ಸಹಚರರನ್ನು ಕೂಡಲೇ ಬಂಧಿಸಬೇಕು’ ಎಂದು ಆಗ್ರಹಿಸಿದರು.
‘ಸೋಮು ಎನ್ನುವ ಸ್ಮಶಾನ ಕಾಯುವ ಯುವಕನಿಗೆ ರಘು ಎಂಬಾತ ಕರೆ ಮಾಡಿ ದೇಹ ಹೂಳಲು ಗುಂಡಿ ತೆಗೆಯಲು ಹೇಳುತ್ತಾನೆ. ಸ್ಥಳಕ್ಕೆ ಬರುವ ಪೊಲೀಸರು ಫೋಟೊ, ವಿಡಿಯೊ ಚಿತ್ರೀಕರಿಸಿಕೊಂಡಿದ್ದಾರೆ. ನಂತರ ಸೋಮುಗೆ ಮತ್ತೊಂದು ಕರೆ ಬಂದಿದ್ದು, ಕೂಡಲೇ ಗುಂಡಿ ಮುಚ್ಚಲು ತಿಳಿಸಲಾಗಿದೆ. ಈ ಬಗ್ಗೆ ಸೋಮು ಪ್ರಶ್ನೆ ಮಾಡಿದಾಗ ಶಾಸಕರು ಗುಂಡಿ ಮುಚ್ಚಲು ಹೇಳಿದ್ದಾರೆ ಎಂದು ಎಂದು ತಿಳಿಸಲಾಗುತ್ತದೆ. ಹತ್ಯೆಯಾದ ರಾಜಶೇಖರ್ ರೆಡ್ಡಿ ಸ್ನೇಹಿತರೇ ಸೋಮು ಬಳಿ ತೆರಳಿ ‘ಏನು ಮಾಡುವುದು... ದೊಡ್ಡವರು ಹೇಳಿದ್ದಾರೆ. ಸುಡಬೇಕು ಸುಟ್ಟಿದ್ದೇವೆ’ ಎಂದಿದ್ದಾರೆ. ಹತ್ಯೆ ಪ್ರಕರಣದ ಯಾವುದೇ ಸಾಕ್ಷಿ ಸಿಗಬಾರದು ಎಂದು ಶಾಸಕ ಭರತ್ ರೆಡ್ಡಿ ಹಾಗೂ ಸಹಚರರು ಹೀಗೆ ಮಾಡಿದ್ದಾರೆ ಎಂದು ಆರೋಪಿಸಿದರು.
‘ರಾಜಶೇಖರ್ ದೇಹವನ್ನು ಕಟ್ಟಿಗೆಯಿಂದ ದಹಿಸಿಲ್ಲ. ಬದಲಿಗೆ ವಿದ್ಯುತ್ ಚಿತಾಗಾರದಲ್ಲಿ ದಹಿಸಲಾಗಿದೆ. ಪೋಲೀಸರಿಗೆ ಎಲ್ಲ ಮಾಹಿತಿ ಇದ್ದರೂ ಕೈಕಟ್ಟಿ ಕುಳಿತಿದ್ದಾರೆ. ಇಲ್ಲಿವರೆಗೂ ಆರೋಪಿಗಳನ್ನು ಬಂಧಿಸಿಲ್ಲ. ಘರ್ಷಣೆಯಲ್ಲಿ ನಡೆದ ಗುಂಡಿನ ದಾಳಿ ಆಕಸ್ಮಿಕ ಅಲ್ಲ. ಅದು ಪೂರ್ವ ನಿಯೋಜಿತ ಹತ್ಯೆ. ಈ ಹಿನ್ನೆಲೆಯಲ್ಲಿ ಶಾಸಕ ಭರತ್ ರೆಡ್ಡಿ ಹಾಗೂ ಸತೀಶ್ ಅವರನ್ನು ಕೂಡಲೇ ಬಂಧಿಸಬೇಕು’ ಎಂದು ಒತ್ತಾಯಿಸಿದರು.
‘ಭರತ್ ರೆಡ್ಡಿ ಬೆಂಬಲಕ್ಕೆ ಸರ್ಕಾರ ನಿಂತಿದೆ. ಪೊಲೀಸರ ಹಾಗೂ ಸಿಐಡಿ ತನಿಖೆಯಲ್ಲಿ ನ್ಯಾಯ ಸಿಗುವ ಸಾಧ್ಯತೆಯಿಲ್ಲ. ಈ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು’ ಎಂದು ಒತ್ತಾಯಿಸಿದರು.
‘ಇನ್ನೆರಡು ದಿನ ಕಾದುನೋಡಿ ನ್ಯಾಯಾಲಯದ ಮೊರೆ ಹೋಗುತ್ತೇವೆ. ಎಎಸ್‌ಪಿ ರವಿ ಕುಮಾರ್ ಕುತಂತ್ರದಿಂದ ಎಸ್‌ಪಿ ಪವನ್ ನೆಜ್ಜೂರ್ ತಲೆದಂಡವಾಗಿದೆ. ಜೊತೆಗೆ ಡಿಐಜಿ ವರ್ತಿಕಾ ಕಟಿಯಾರ್ ಕೂಡಾ ವರ್ಗಾವಣೆಯಾಗಿದ್ದಾರೆ. ಕೂಡಲೇ ರವಿಕುಮಾರ್ ಹಾಗೂ ಡಿವೈಎಸ್ಪಿ ಚಂದ್ರಕಾಂತ್ ನಂದಾ ರೆಡ್ಡಿ ಅವರನ್ನು ಅಮಾನತುಗೊಳಿಸಬೇಕು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.