
ಕೂಡ್ಲಿಗಿ: ತಾಲ್ಲೂಕಿನ ಅಮ್ಮನಕೇರಿ ಗ್ರಾಮದ ಬಸವೇಶ್ವರ ಸ್ವಾಮಿ ರಥೋತ್ಸವ ಶುಕ್ರವಾರ ಸಂಜೆ ಅದ್ದೂರಿಯಾಗಿ ನೆರವೇರಿತು.
ಆರಂಭದಲ್ಲಿ ಬಸವೇಶ್ವರ ಸ್ವಾಮಿಯ ಉತ್ಸವ ಮೂರ್ತಿಯನ್ನು ಪಲ್ಲಕ್ಕಿಯಲ್ಲಿ ಕೂಡಿಸಿಕೊಂಡು ನಂದಿ ಕೋಲು ಸಮಾಳದೊಂದಿಗೆ ದೇವಸ್ಥಾನದಿಂದ ಹೊರಟು ರಥದ ಬಳಿ ಬಂದು ಮೂರು ಸುತ್ತು ಹಾಕಿ ಸ್ವಾಮಿಯನ್ನು ರಥದಲ್ಲಿ ಪ್ರತಿಷ್ಟಾಪನೆ ಮಾಡಲಾಯಿತು.
ಈ ವೇಳೆ ಸ್ವಾಮಿಯ ಹರಾಜು ಹಾಕಲಾದ ಸ್ವಾಮಿಯ ಪಟವನ್ನು ಗ್ರಾಮದ ಚನ್ನನಗೌಡ್ರು ಪ್ರದೀಪ್ ₹65,101 ರೂಪಾಯಿಗಳಿಗೆ ಪಡೆದರು. ನಂತರ ರಥ ಮುಂದೆ ಸಾಗುತ್ತಿದ್ದಂತೆ ಬಾಳೆ ಹಣ್ಣು, ಉತ್ತುತ್ತಿ ಎಸೆದ ಭಕ್ತರು ಜಯ ಘೋಷವನ್ನು ಕೂಗುತ್ತ ರಥವನ್ನು ಪಾದಗಟ್ಟೆಯವರಗೆ ಎಳೆದುಕೊಂಡು ಹೋಗಿ ಮರಳಿ ದೇವಸ್ಥಾನದ ಬಳಿ ಬಂದು ನೆಲೆ ನಿಲ್ಲಿಸಿದರು. ಇದಕ್ಕೂ ಮೊದಲು ಬೆಳಿಗ್ಗೆ ದೇವಸ್ಥಾನದಲ್ಲಿ ಸ್ವಾಮಿಗೆ ಅಭಿಷೇಕ ಮಾಡಿ, ಪುಷ್ಪಗಳಿಂದ ಅಲಂಕಾರ ಮಾಡಿ ಎಲೆ ಪೂಜೆ ನೆರವೇರಿಸಲಾಯಿತು.
ಶಾಸಕ ಡಾ. ಶ್ರೀನಿವಾಸ್ ಎನ್.ಟಿ. ಸೇರಿದಂತೆ ಅಮ್ಮನಕೇರಿ, ಮೊರಬ, ಕೂಡ್ಲಿಗಿ, ವಿರುಪಾಪುರ ಗ್ರಾಮ ಸೇರಿದಂತೆ ಜಿಲ್ಲೆಯ ವಿವಿಧ ಭಾಗಗಳಿಂದ ಬಂದಿದ್ದ ಸಾವಿರರು ಭಕ್ತರು ರಥೋತ್ಸವದ ಭಾಗಿಯಾಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.