ADVERTISEMENT

ಸೌಲಭ್ಯ ವಂಚಿತ ಬೀಡಿ ಕಾರ್ಮಿಕರು

ಎ.ಎಂ.ಸೋಮಶೇಖರಯ್ಯ
Published 30 ಏಪ್ರಿಲ್ 2019, 19:45 IST
Last Updated 30 ಏಪ್ರಿಲ್ 2019, 19:45 IST
ಬೀಡಿ ಕಟ್ಟುವ ಕಾಯಕದಲ್ಲಿ ತೊಡಗಿರುವ ಕೂಡ್ಲಿಗಿ ಪಟ್ಟಣದ 16ನೇ ವಾರ್ಡಿನ ನಿವಾಸಿ ಮೆಹಮೂದ್‌ ಬಾನು
ಬೀಡಿ ಕಟ್ಟುವ ಕಾಯಕದಲ್ಲಿ ತೊಡಗಿರುವ ಕೂಡ್ಲಿಗಿ ಪಟ್ಟಣದ 16ನೇ ವಾರ್ಡಿನ ನಿವಾಸಿ ಮೆಹಮೂದ್‌ ಬಾನು   

ಕೂಡ್ಲಿಗಿ: ಪಟ್ಟಣದಲ್ಲಿ ಸುಮಾರು 500ಕ್ಕೂ ಹೆಚ್ಚು ಮಹಿಳೆಯರು ಬೀಡಿ ಕಟ್ಟುವ ಕೆಲಸ ಮಾಡುತ್ತಾರೆ. ಆದರೆ, ಕಾರ್ಮಿಕರಿಗೆ ಇರುವ ಯಾವ ಸವಲತ್ತು ಅವರಿಗೆ ತಲುಪಿಲ್ಲ. ಎಲೆಗಳನ್ನು ಸುತ್ತಿ ಬೀಡಿ ತಯಾರಿಸುವುದರಲ್ಲಿಯೇ ಅವರ ಬದುಕಿ ಕೊನೆಗೊಳ್ಳುತ್ತಿದೆ.

ಮಹಿಳೆಯರು ಸಿದ್ಧಪಡಿಸಿದ ಬೀಡಿಗಳು ಹರಪನಹಳ್ಳಿ ಸೇರಿದಂತೆ ಹಲವು ಪಟ್ಟಣಗಳಿಗೆ ಪೂರೈಸಲಾಗುತ್ತದೆ. ಬೀಡಿ ಕಂಪೆನಿಯವರು ಒಂದು ವಾರಕ್ಕಾಗುವಷ್ಟು ಎಲೆ, ತಂಬಾಕನ್ನು ಕೆ.ಜಿ.ಯ ಲೆಕ್ಕದಲ್ಲಿ ಕಾರ್ಮಿಕರಿಗೆ ಕೊಡುತ್ತಾರೆ. ಒಬ್ಬರು ದಿನಕ್ಕೆ 2,500 ಬೀಡಿ ಕಟ್ಟುತ್ತಾರೆ. ಒಂದು ಸಾವಿರ ಬೀಡಿಗೆ ₹150 ಕೊಡುತ್ತಾರೆ. 1 ಕೆ.ಜಿ ಎಲೆಯಲ್ಲಿ 2,200 ಬೀಡಿ ಕಟ್ಟಿ ಕೊಡಬೇಕು.

‘ಕೆ.ಜಿ ಲೆಕ್ಕದಲ್ಲಿ ನೀಡಿದ ಎಲೆಗಳು ವ್ಯರ್ಥವಾದರೆ ಅದರ ನಷ್ಟವನ್ನು ಕೂಲಿ ಹಣದಲ್ಲಿ ಕಡಿತಗೊಳಿಸಲಾಗುತ್ತದೆ. ಅದರಿಂದ ನಮಗೆ ಲಾಭಕ್ಕಿಂತ ನಷ್ಟವೇ ಹೆಚ್ಚು’ ಎನ್ನುತ್ತಾರೆ ಬೀಡಿ ಕಟ್ಟುವ ನಾಜೀರಾ, ಶಬೀನಾ, ಖುರ್ಷಿದಾ.

ADVERTISEMENT

ಬಹುತೇಕ ಮಹಿಳೆಯರ ಮನೆ ಬೀಡಿ ಕಟ್ಟುವುದರಿಂದಲೇ ನಡೆಯುತ್ತಿದೆ. ಕೆಲವರಿಗೆ ಬೀಡಿ ಕಟ್ಟುವ ಕೆಲಸವೇ ಮುಖ್ಯ ಉದ್ಯೋಗವಾಗಿದೆ. ಬೆಳಿಗ್ಗೆಯಿಂದ ಸಂಜೆಯವರೆಗೆ ನಿರಂತರವಾಗಿ ಬೀಡಿ ಕಟ್ಟುವ ಕೆಲಸದಲ್ಲಿ ತೊಡಗಿಸಿಕೊಳ್ಳುವುದರಿಂದ ಬೆನ್ನು, ಸೊಂಟ ನೋವು ಬಂದಿದೆ. ಅಲ್ಲದೆ ನಿತ್ಯ ತಂಬಾಕಿನ ಘಾಟು ವಾಸನೆಯಿಂದಾಗಿಯೂ ಶ್ವಾಸಕೋಶದ ಕಾಯಿಲೆಗಳೂ ಕೆಲವರಲ್ಲಿ ಕಾಣಿಸಿಕೊಂಡಿವೆ. ಕಾಯಿಲೆ ಬಂದಾಗ ದುಡಿದ ಹಣವೆಲ್ಲ ಆಸ್ಪತ್ರೆಗೆ ಸುರಿಯಬೇಕು.

‘ಅವರವರ ಮನೆಗಳಲ್ಲಿಯೇ ಕೆಲಸ ನಿರ್ವಹಿಸುವ ಮಹಿಳೆಯರು ಸಂಘಟಿತರಾಗಿಲ್ಲ. ಇದರಿಂದ ಅವರನ್ನು ಯಾರೂ ಕೇಳುವವರಿಲ್ಲ. ಯಾವ ಬ್ಯಾಂಕು ಕೂಡ ಸಾಲ ಕೊಡಲು ಮುಂದೆ ಬರುವುದಿಲ್ಲ. ಕಾರ್ಮಿಕ ಇಲಾಖೆಯಯವರು ಅವರನ್ನು ಗುರುತಿಸಿಲ್ಲ.

ಬಹುತೇಕ ಮಹಿಳಾ ಕಾರ್ಮಿಕರಿಗೆ ವಾಸಕ್ಕೆ ಯೋಗ್ಯ ಮನೆ ಇಲ್ಲ. ಸೇವಾ ಭದ್ರತೆ, ವೈದ್ಯಕೀಯ, ವಿಮೆ ಸೌಲಭ್ಯ ಇಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.