ADVERTISEMENT

ಎಲ್ಲೆಡೆ ಮೊಳಗಿದ ಗಂಟೆ ನಾದ, ಚಪ್ಪಾಳೆ ಸದ್ದು

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2020, 13:03 IST
Last Updated 22 ಮಾರ್ಚ್ 2020, 13:03 IST
ಬಳ್ಳಾರಿ ಸಂಸದ ವೈ.ದೇವೇಂದ್ರಪ್ಪನವರು ಕುಟುಂಬ ಸದಸ್ಯರೊಂದಿಗೆ ಚಪ್ಪಾಳೆ ಬಾರಿಸುತ್ತಿರುವುದು
ಬಳ್ಳಾರಿ ಸಂಸದ ವೈ.ದೇವೇಂದ್ರಪ್ಪನವರು ಕುಟುಂಬ ಸದಸ್ಯರೊಂದಿಗೆ ಚಪ್ಪಾಳೆ ಬಾರಿಸುತ್ತಿರುವುದು   

ಹೊಸಪೇಟೆ: ದೇವಸ್ಥಾನವೂ ಅಲ್ಲ, ಮದುವೆ ಮನೆಯೂ ಅಲ್ಲ. ಆದರೆ, ಅಲ್ಲೆಲ್ಲಾ ತಮಟೆ, ಜಾಗಟೆ, ಗಂಟೆ ನಾದ ಮೊಳಗುತ್ತಿತ್ತು. ಸಮಯ ಕಳೆದಂತೆ ಆ ಶಬ್ದ ಎಲ್ಲೆಡೆಯಿಂದ ಕೇಳಿ ಬರಲು ಶುರುವಾಯಿತು.

ಕೊರೊನಾ ಸೋಂಕು ಹರಡುವುದು ತಡೆಯಲು ಹಗಲಿರುಳು ಶ್ರಮಿಸುತ್ತಿರುವ ವೈದ್ಯರು, ಪೊಲೀಸ್‌ ಸಿಬ್ಬಂದಿಗೆ ಚಪ್ಪಾಳೆ ಹೊಡೆದು ಕೃತಜ್ಞತೆ ಸಲ್ಲಿಸಬೇಕೆಂದು ಪ್ರಧಾನಿ ನರೇಂದ್ರ ಮೋದಿ ಕೊಟ್ಟ ಕರೆಗೆ ಸ್ಪಂದಿಸಿ ಭಾನುವಾರ ಜನ ಪ್ರತಿಕ್ರಿಯಿಸಿದ್ದರಿಂದ ನಗರದಲ್ಲೆಡೆ ಕೇಳಿ ಬಂದ ಶಬ್ದವದು.

ಬೆಳಿಗ್ಗೆಯಿಂದಲೇ ಸ್ವಯಂಪ್ರೇರಿತರಾಗಿ ಮನೆಯಲ್ಲಿ ಬಂಧಿಯಾಗಿದ್ದ ಜನ ಸಂಜೆ ಐದು ಗಂಟೆಯಾಗುತ್ತಲೇ ಮನೆಯ ಬಾಲ್ಕನಿಯಲ್ಲಿ ಕುಟುಂಬ ಸದಸ್ಯರೊಂದಿಗೆ ಸೇರಿ ಸಾಮೂಹಿಕವಾಗಿ ಚಪ್ಪಾಳೆ ಹೊಡೆದರು.

ADVERTISEMENT

ಕೆಲವರು ಜಾಗಟೆ ಬಾರಿಸಿದರು. ತಮಟೆ ಬಾರಿಸಿದರು. ಕೆಲವರು ಮನೆಯ ತಟ್ಟೆ ಬಾರಿಸಿದರೆ, ಮತ್ತೆ ಕೆಲವರು ಗಂಟೆ ಬಾರಿಸಿದರು. ಹೀಗೆ ಕಿರಿಯರಿಂದ ಹಿರಿಯರ ವರೆಗೆ ಪ್ರತಿಯೊಬ್ಬರೂ ಅವರ ಮನೆ ಎದುರು ಜಮಾಯಿಸಿ ವಿಜಯೋತ್ಸವದ ರೀತಿಯಲ್ಲಿ ಸಂಭ್ರಮದಿಂದ ಕೃತಜ್ಞತೆ ಸಲ್ಲಿಸಿದರು.

ಕೆಲವು ಕಡೆಗಳಲ್ಲಿ ಯುವಕರು ಪಟಾಕಿ ಹೊಡೆದರು. ‘ಗೋ ಕೊರೊನಾ ಗೋ’, ‘ಭಾರತ್‌ ಮಾತಾ ಕೀ ಜೈ’ ಎಂದು ಘೋಷಣೆಗಳನ್ನು ಕೂಗಿದರು. ಸುಮಾರು ಹತ್ತರಿಂದ ಹದಿನೈದು ನಿಮಿಷಗಳ ವರೆಗೆ ಈ ದೃಶ್ಯ ಕಂಡು ಬಂತು. ಅದಾದ ನಂತರ ಪುನಃ ಜನ ಮನೆಯೊಳಗೆ ಸೇರಿಕೊಂಡರು. ಈ ಸಂದರ್ಭದಲ್ಲಿ ಪೊಲೀಸರು ನಗರದ ತುಂಬೆಲ್ಲಾ ಗಸ್ತು ತಿರುಗಿದರು. ಯಾರು ಕೂಡ ಗುಂಪಾಗಿ ಓಡಾಡದಂತೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.