ಬಳ್ಳಾರಿ: ಶಂಕಾಸ್ಪದ ಪಡಿತರ ಚೀಟಿ (ಬಿಪಿಎಲ್)ಗಳ ಪರಿಶೀಲನೆ ನಡೆಸುತ್ತಿರುವ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯು ಬಳ್ಳಾರಿ ಜಿಲ್ಲೆಯಲ್ಲಿ ಈ ವರೆಗೆ ಒಟ್ಟು 10,802 ಕಾರ್ಡ್‌ಗಳಿಗೆ ಸಂಬಂಧಿಸಿದಂತೆ ಕ್ರಮ ಜರುಗಿಸಿದೆ.
ಅನರ್ಹ ಪಡಿತರ ಚೀಟಿಗಳನ್ನು ರದ್ದುಪಡಿಸುವಂತೆ ಕೇಂದ್ರ ಸೂಚನೆ ನೀಡಿತ್ತು. ಕೇಂದ್ರದ ಸೂಚನೆಯಂತೆ ಅನರ್ಹ ಪಡಿತರ ಚೀಟಿಗಳನ್ನು ರದ್ದುಪಡಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಕಳೆದ 20 ದಿನಗಳಿಂದ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯು ಶಂಕಾಸ್ಪದ ಕಾರ್ಡ್‌ಗಳ ಪರಿಶೀಲನೆಯಲ್ಲಿ ತೊಡಗಿದೆ.
ಜಿಲ್ಲೆಯಲ್ಲಿ ಒಟ್ಟು 29,327 ಶಂಕಾಸ್ಪದ ಪಡಿತರ ಚೀಟಿಗಳಿವೆ ಎಂದು ಗುರುತಿಸಲಾಗಿತ್ತು. ಬಳ್ಳಾರಿ ನಗರದಲ್ಲಿ 12,915, ಬಳ್ಳಾರಿ ಗ್ರಾಮೀಣದಲ್ಲಿ 5,349, ಕಂಪ್ಲಿಯಲ್ಲಿ 1,686, ಕುರುಗೋಡು 1,600, ಸಂಡೂರು 3,458, ಸಿರುಗುಪ್ಪದಲ್ಲಿ 4,319 ಚೀಟಿಗಳನ್ನು ಗುರುತಿಸಲಾಗಿದೆ.
ಈ ವರೆಗೆ ಬಳ್ಳಾರಿಯಲ್ಲಿ 2,217, ಬಳ್ಳಾರಿ ಗ್ರಾಮೀಣ–3,953, ಕಂಪ್ಲಿ 585, ಕುರುಗೋಡು 851, ಸಂಡೂರು 1,238, ಸಿರುಗುಪ್ಪ 1,958 ಸೇರಿದಂತೆ ಜಿಲ್ಲೆಯಲ್ಲಿ ಒಟ್ಟು 10,802 ಕಾರ್ಡ್‌ಗಳ ವಿಷಯದಲ್ಲಿ ಕ್ರಮ ಜರುಗಿಸಲಾಗಿದೆ ಎಂದು ಲಭ್ಯ ದತ್ತಾಂಶಗಳಿಂದ ಗೊತ್ತಾಗಿದೆ.
ಇದರಲ್ಲಿ ₹1.20 ಲಕ್ಷದಷ್ಟು ವಾರ್ಷಿಕ ಆದಾಯ ಹೊಂದಿರುವವರು, ₹25 ಲಕ್ಷದಷ್ಟು ಜಿಎಸ್‌ಟಿ ವಹಿವಾಟು ನಡೆಸಿರುವವರು, ಸಂಸ್ಥೆಗಳಲ್ಲಿ ನಿರ್ದೇಶಕರಾಗಿರುವವರು, ಎರಡೂ ರಾಜ್ಯಗಳಲ್ಲೂ ಬಿಪಿಎಲ್ ಕಾರ್ಡ್ ಹೊಂದಿರವವರು, 12 ತಿಂಗಳಿಗಿಂತಲೂ ಅಧಿಕ ಸಮಯದಿಂದ ಪಡಿತರ ಪಡೆಯದವರು, 6–12ತಿಂಗಳು ಪಡಿತರ ಪಡೆಯದವರು, 7.5 ಎಕರೆಗಿಂತಲೂ ಅಧಿಕ ಭೂಮಿ ಹೊಂದಿರುವವರು, 18 ವರ್ಷಕ್ಕಿಂತಲೂ ಕಡಿಮೆ ವಯಸ್ಸಿನ ಒಬ್ಬರೇ ಸದಸ್ಯರಿರುವ ಕಾರ್ಡ್‌ಗಳು, ವಾಹನಗಳ ಮಾಲೀಕರು, ಪಡಿತರ ಅಂಗಡಿಗಳ ಮಾಲೀಕರು ಪತ್ತೆ ಹಚ್ಚಿದವರು ಇದ್ದಾರೆ.
ಎರಡು ರಾಜ್ಯಗಳಲ್ಲಿ ಪಡಿತರ ಚೀಟಿ ಹೊಂದಿರುವ 10,023 ಸದಸ್ಯರು ಜಿಲ್ಲೆಯಲ್ಲಿ ಇದ್ದಾರೆ ಎನ್ನಲಾಗಿದ್ದು, ಎಲ್ಲಿಯಾದರೂ ಒಂದು ಕಡೆ ಮಾತ್ರ ಕಾರ್ಡ್ ಹೊಂದುವಂತೆ ಮಾಡಲಾಗಿದೆ. ಹೆಚ್ಚಿನ ಆದಾಯ ಹೊಂದಿರವರು, ₹25 ಲಕ್ಷ ಜಿಎಸ್‌ಟಿ ವಹಿವಾಟು ನಡೆಸಿರವವರು, ಹೆಚ್ಚಿನ ಭೂಮಿಯ ಹಿಡುವಳಿ ಹೊಂದಿರವವರ ಕಾರ್ಡ್‌ಗಳನ್ನು ಎಪಿಎಲ್‌ಗೆ ಪರಿವರ್ತಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
7.5 ಎಕರೆಗೂ ಅಧಿಕ ಭೂ ಹಿಡುವಳಿ ಹೊಂದಿಯೂ, ಬಿಪಿಎಲ್ ಕಾರ್ಡ್ ಹೊಂದಿರುವವರ ಪತ್ತೆಗೆ ಆಹಾರ ಇಲಾಖೆಯು ಕಂದಾಯ ಇಲಾಖೆಯ ನೆರವನ್ನು ಪಡೆದುಕೊಂಡಿದೆ. ಇಂಥ 1,590 ಕಾರ್ಡ್‌ಗಳು ಬಳ್ಳಾರಿಯಲ್ಲಿದ್ದು, 1438 ಕಾರ್ಡ್‌ಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.