ADVERTISEMENT

ಬಳ್ಳಾರಿ ಎಪಿಎಂಸಿ: 3ನೇ ದಿನವೂ ಬಂದ್

ಆರ್. ಹರಿಶಂಕರ್
Published 22 ಮಾರ್ಚ್ 2024, 23:28 IST
Last Updated 22 ಮಾರ್ಚ್ 2024, 23:28 IST
   

ಬಳ್ಳಾರಿ: ಬಳ್ಳಾರಿಯ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಲ್ಲಿ (ಎಪಿಎಂಸಿ) ಶೇಂಗಾ ವಹಿವಾಟು ಮೂರು ದಿನಗಳಿಂದ ಸ್ಥಗಿತಗೊಳ್ಳಲು ವರ್ತಕರು ಮತ್ತು ದಲ್ಲಾಳಿಗಳ ನಡುವಿನ ಬಹುದಿನಗಳ ಸಂಘರ್ಷವೇ ಕಾರಣ. ಇದರ ನೇರ ಪರಿಣಾಮ ಎಪಿಎಂಸಿ, ರೈತರು, ಹಮಾಲಿಗಳು, ಕೂಲಿಗಳ ಮೇಲೆ ಆಗಿದೆ.

ವರ್ತಕರೊಬ್ಬರು ₹3 ಕೋಟಿ ಮೌಲ್ಯದ ಶೇಂಗಾವನ್ನು ದಲ್ಲಾಳಿಗಳ ಮೂಲಕ ಖರೀದಿಸಿ, ಹಣ ಪಾವತಿಸದೇ ಮಾರ್ಚ್ 18ರಿಂದ ತಲೆ ಮರೆಸಿ ಕೊಂಡಿದ್ದಾರೆ. ಇದು ದಲ್ಲಾಳಿಗಳ ಆಕ್ರೋಶಕ್ಕೆ ಕಾರಣವಾಗಿದೆ.

‘ಬಳ್ಳಾರಿ ಎಪಿಎಂಸಿಗೆ ಕರ್ನಾಟಕದಿಂದ ಅಲ್ಲದೇ ಆಂಧ್ರ ಪ್ರದೇಶದ ಅನಂತಪುರ ಮತ್ತು ಕರ್ನೂಲು ಜಿಲ್ಲೆಗಳಿಂದ ಶೇಂಗಾ ಬರುತ್ತದೆ. ವ್ಯಾಪಾರ ನಡೆದ ದಿನವೇ ವರ್ತಕರು ದಲ್ಲಾಳಿಗಳಿಗೆ ಮತ್ತು ದಲ್ಲಾಳಿಗಳು ರೈತರಿಗೆ ಹಣ ಪಾವತಿಸಬೇಕು. ಈ ಪ್ರಕ್ರಿಯೆ ಹಲವು ದಿನಗಳಿಂದ ನಡೆದಿದ್ದರೂ ದಲ್ಲಾಳಿಗಳಿಗೆ ವರ್ತಕರಿಂದ ಸಕಾಲಕ್ಕೆ ಹಣ ಪಾವತಿಯಾಗುತ್ತಿಲ್ಲ ಎಂಬ ಆರೋಪವಿದೆ. ಈ ಮುಸುಕಿನ ಗುದ್ದಾಟ ಈಗ ತಾರಕಕ್ಕೇರಿದೆ’ ಎಂದು ಮೂಲಗಳು ತಿಳಿಸಿವೆ.  

ADVERTISEMENT

‘ಮೂರು ತಿಂಗಳಲ್ಲಿ ವರ್ತಕರಿಂದ ದಲ್ಲಾಳಿಗಳಿಗೆ ₹8 ಕೋಟಿ ಬಾಕಿ ಬರಬೇಕಿದೆ. ಚುನಾವಣಾ ನೀತಿ ಸಂಹಿತೆ ನೆಪ ಹೇಳಿ ಹಣ ಪಾವತಿ ಮತ್ತಷ್ಟು ವಿಳಂಬ ಮಾಡಲಾಗುತ್ತಿದೆ. ಹೀಗೆಯೇ ಮುಂದುವರಿದರೆ ರೈತರಿಗೆ ಏನು ಹೇಳುವುದು? ಒಮ್ಮೆ ರೈತರು ನಂಬಿಕೆ ಕಳೆದುಕೊಂಡರೆ, ಅವರನ್ನು ಪುನಃ ಎಪಿಎಂಸಿಗೆ ಕರೆತರುವುದು ಕಷ್ಟ. ಅದಕ್ಕೆ ವಹಿವಾಟು ನಿಲ್ಲಿಸಿದ್ದೇವೆ’ ಎಂದು ದಲ್ಲಾಳಿಗಳ ಸಂಘದ ಮುಖಂಡ ಗುರುಸ್ವಾಮಿ ಹೇಳಿದರು. 

‘ಇದು ಸಣ್ಣ ವಿಚಾರ. ಇದನ್ನೇ ಮುಂದಿಟ್ಟುಕೊಂಡು ಮಾರುಕಟ್ಟೆಯನ್ನೇ ಸ್ಥಗಿತಗೊಳಿಸಿದ್ದು ಸರಿಯಲ್ಲ. ಮಾತುಕತೆ ಮೂಲಕ ವಿಚಾರ ಬಗೆಹರಿಸಿಕೊಳ್ಳ ಬಹುದಿತ್ತು. ಹೀಗೆ ಏಕಾಏಕಿ ವಹಿವಾಟು ಬಂದ್‌ ಮಾಡಿದರೆ, ಮಾರುಕಟ್ಟೆಯ ಮೇಲಿನ ನಂಬಿಕೆ ಹಾಳಾಗುತ್ತದೆ’ ಎಂಬುದು ವರ್ತಕ ಸಂಘದ ಮುಖಂಡ ಪಾಲಣ್ಣ ಅವರ ಕಳವಳ.

‘ಶೇಂಗಾ ಕ್ವಿಂಟಲ್‌ಗೆ ₹8 ಸಾವಿರದ ವರೆಗೆ ಮಾರಾಟವಾಗುತ್ತಿದೆ. ಹಿಂದಿನ ವರ್ಷಗಳಿಗೆ ಹೋಲಿಸಿದರೆ ಈ ಸಲ ಮಾರುಕಟ್ಟೆಗೆ ಬಂದ ಶೇಂಗಾ ಪ್ರಮಾಣ ಕಡಿಮೆ. ನಿತ್ಯ 22 ಸಾವಿರ ಚೀಲದವರೆಗೆ ಶೇಂಗಾ ಆವಕ ಆಗುತ್ತಿದೆ’ ಎಂದು ಎಪಿಎಂಸಿ ಕಾರ್ಯದರ್ಶಿ ನಂಜುಂಡಸ್ವಾಮಿ ತಿಳಿಸಿದರು.

ಸಮಸ್ಯೆ ಬಗ್ಗೆ ಚರ್ಚಿಸಲು ವರ್ತಕ ಸಂಘದವರನ್ನು ಆಹ್ವಾನಿಸಿದರೂ ನಮ್ಮ ಕೋರಿಕೆಗೆ ಸ್ಪಂದಿಸಿಲ್ಲ. ಇನ್ನು ಮುಂದೆ ಹಣವಿಟ್ಟರಷ್ಟೇ ವ್ಯಾಪಾರ ಎಂಬ ಷರತ್ತಿನೊಂದಿಗೆ ನಾವು ಕೆಲಸ ಮಾಡುತ್ತೇವೆ
-ಚಿದಾನಂದಪ್ಪ ಅಧ್ಯಕ್ಷ ದಲ್ಲಾಳಿಗಳ ಸಂಘ
ಮಾರುಕಟ್ಟೆ ಬಂದ್‌ ಮಾಡಿದ್ದು ತಪ್ಪು. ಇಲ್ಲಿನ ಉತ್ಪನ್ನ ಬೇರೆಯವರ ಪಾಲಾದರೆ ದಲ್ಲಾಳಿಗಳಿಗೆ ಅಥವಾ ವರ್ತಕರಿಗೆ ಏನು ಲಾಭ? ಶೀಘ್ರವೇ ವಿವಾದ ಬಗೆಹರಿದು ವ್ಯಾಪಾರ ಆರಂಭವಾಗುವ ವಿಶ್ವಾಸವಿದೆ
- ರಮೇಶ್‌, ಅಧ್ಯಕ್ಷ ವರ್ತಕರ ಸಂಘ
ದಲ್ಲಾಳಿಗಳಿಗೆ ವರ್ತಕರಿಗೆ ನೋಟಿಸ್‌ ನೀಡಲಾಗಿದೆ. ಇಬ್ಬರ ನಡುವೆ ಸಂಧಾನ ಮಾತುಕತೆಗಳು ನಡೆಯುತ್ತಿರುವ ಮಾಹಿತಿ ಇದೆ. ಸಮಸ್ಯೆ ಬಗೆಹರಿಯದಿದ್ದರೆ ಕ್ರಮ ಜರುಗಿಸಲಾಗುವುದು
ನಂಜುಂಡಸ್ವಾಮಿ, ಎಪಿಎಂಸಿ ಕಾರ್ಯದರ್ಶಿ 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.