ಬಳ್ಳಾರಿ: ಬಳ್ಳಾರಿ ಜಿಲ್ಲಾ ಕಾರ್ಮಿಕರ ಸೇವೆಗಳ ವಿವಿದೊದ್ಧೇಶ ಸಹಕಾರ ಸಂಘವನ್ನು ಕೂಡಲೆ ರಚಿಸಲು ಕ್ರಮಕೈಗೊಳ್ಳಲು ಒತ್ತಾಯಿಸಿ ಎಐಯುಟಿಯುಸಿಗೆ ಸಂಯೋಜನೆಗೊಂಡ ಕರ್ನಾಟಕ ರಾಜ್ಯ ಸಂಯುಕ್ತ ವಸತಿ ನಿಲಯ ಕಾರ್ಮಿಕರ ಸಂಘ, ವಿಮ್ಸ್ ಗುತ್ತಿಗೆ ನೌಕರರ ಸಂಘ ಹಾಗೂ ಕೆಪಿಟಿಸಿಎಲ್ ವಿದ್ಯುತ್ ವಿತರಣಾ ಗುತ್ತಿಗೆ ನೌಕರರ ಸಂಘದ ಸದಸ್ಯರು ಜಿಲ್ಲಾಡಳಿತದ ಮೂಲಕ ಸರ್ಕಾರಕ್ಕೆ ಗುರುವಾರ ಮನವಿ ಸಲ್ಲಿಸಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಮೊಹಮದ್ ಝುಬೇರ ಮನವಿ ಸ್ವೀಕರಿಸಿದರು.
ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಎಐಯುಟಿಯುಸಿ ಜಿಲ್ಲಾ ಅಧ್ಯಕ್ಷ ಎ.ದೇವದಾಸ್ ‘ಹೊರಗುತ್ತಿಗೆ ಏಜೆನ್ಸಿಗಳಿಂದ ಆಗುತ್ತಿರುವ ಶೋಷಣೆಯನ್ನು ತಪ್ಪಿಸಲು ಸಹಕಾರ ಸಂಘ ರಚಿಸುವ ಕಾರ್ಮಿಕ ಇಲಾಖೆಯ ನಿರ್ಧಾರ ಸ್ವಾಗತಾರ್ಹ. ಬಳ್ಳಾರಿ ಜಿಲ್ಲೆಯಲ್ಲಿ ಜನವರಿ 23ರಂದು ಕಾರ್ಮಿಕ ಸೇವೆಗಳ ವಿವಿದುದ್ದೇಶ ಸಹಕಾರ ಸಂಘ ರಚಿಸುವ ಕುರಿತಂತ ಅಗತ್ಯ ಕ್ರಮಕೈಗೊಳ್ಳಲು ಜಿಲ್ಲಾಡಳಿತ ಸುತ್ತೋಲೆ ಹೊರಡಿಸಿದೆ. ಇದರಂತೆ ವಿವಿಧ ಇಲಾಖೆಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಸಾವಿರಾರು ಹೊರಗುತ್ತಿಗೆ ನೌಕರರು ದಾಖಲೆಗಳನ್ನು ಸಲ್ಲಿಸಿದ್ದಲ್ಲಿದ್ದು, ನೋಂದಣಿ ಶುಲ್ಕವೂ ಜಮೆ ಮಾಡಿದ್ದಾರೆ’ ಎಂದರು.
‘ಪ್ರಕ್ರಿಯೆ ಪ್ರಾರಂಭವಾಗಿ 6 ತಿಂಗಳು ಕಳೆದಿದ್ದರೂ, ಈ ವರೆಗೆ ಬಳ್ಳಾರಿ ಜಿಲ್ಲೆಯಲ್ಲಿ ಸಹಕಾರ ಸಂಘ ರಚನೆಯಾಗಿಲ್ಲ. ರಾಜ್ಯ ಸರ್ಕಾರ 4(ಜಿ) ವಿನಾಯಿತಿ ನೀಡಿದರೆ ಮಾತ್ರ ಸಹಕಾರ ಸಂಘ ರಚನೆಗೆ ಮುಂದಾಗಬಹುದು ಎಂಬ ಮಾಹಿತಿಯಿದೆ. ಇಲ್ಲಿಯವರೆಗೂ ಸರ್ಕಾರ 4ಜಿ ವಿನಾಯಿತಿ ನೀಡಿಲ್ಲ. ಈ ವಿಳಂಬದಿಂದಾಗಿ ಸಹಕಾರ ಸಂಘ ರಚನೆಯೂ ವಿಳಂಬವಾಗಿದೆ‘ ಎಂದರು.
‘ಬಳ್ಳಾರಿ ಜಿಲ್ಲಾ ಕಾರ್ಮಿಕರ ಸೇವೆಗಳ ವಿವಿದುದ್ದೇಶ ಸಹಕಾರ ಸಂಘ ರಚಿಸುವ ನಿಟ್ಟಿನಲ್ಲಿ ಅಗತ್ಯವಿರುವ ಎಲ್ಲಾ ಕ್ರಮಕೈಗೊಂಡು, ಅಡ್ಡಿ ಆತಂಕಗಳನ್ನು ನಿವಾರಿಸಿ, ಶೋಷಣೆಗೆ ಒಳಗಾಗುತ್ತಿರುವ ಹೊರಗುತ್ತಿಗೆ ಕಾರ್ಮಿಕರಿಗೆ ನ್ಯಾಯ ಒದಗಿಸಬೇಕು’ ಎಂದು ಮನವಿ ಮಾಡಿದರು.
ಮುಖಂಡರಾದ ಡಾ.ಪ್ರಮೋದ್, ಸೋಮಶೇಖರ ಗೌಡ, ಶಾಂತಾ, ಸುರೇಶ್, ಕಿರಣ್, ವೆಂಕಟಲಕ್ಷ್ಮಿ, ರಾಮಕೃಷ್ಣ, ಪ್ರವೀಣ್ ಮುಂತಾದವರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.