ADVERTISEMENT

ಬಳ್ಳಾರಿ | ಅನುಮಾನ ಮೂಡಿಸಿದ ‘ಎಫ್‌ಆರ್‌ಎ’

ಗಣಿ ಗುತ್ತಿಗೆ ಪ್ರದೇಶದಲ್ಲಿ ಅರಣ್ಯ ಹಕ್ಕು ಅರ್ಜಿಗಳೇ ಇಲ್ಲ ಎಂದು ಪ್ರಮಾಣಪತ್ರ

ಆರ್. ಹರಿಶಂಕರ್
Published 22 ಅಕ್ಟೋಬರ್ 2025, 5:40 IST
Last Updated 22 ಅಕ್ಟೋಬರ್ 2025, 5:40 IST

ದೇವದಾರಿ ಗಣಿ ಗುತ್ತಿಗೆ ನಕ್ಷೆ

ದೇವದಾರಿ ಗಣಿ ಗುತ್ತಿಗೆ ನಕ್ಷೆ

ಬಳ್ಳಾರಿ: ಅರಣ್ಯ ಹಕ್ಕುಗಳ ಮಾನ್ಯತೆ ಕಾಯ್ದೆ 2006ರಡಿ (ಎಫ್‌ಆರ್‌ಎ) ಹಲವು ಅರ್ಜಿಗಳು ಬಾಕಿ ಇದ್ದ ಹೊರತಾಗಿಯೂ ಬಳ್ಳಾರಿ ಜಿಲ್ಲಾಡಳಿತ ಕುದುರೆಮುಖ ಕಬ್ಬಿಣದ ಅದಿರು ಕಂಪನಿಯ (ಕೆಐಒಸಿಎಲ್‌) ‘ದೇವದಾರಿ ಗಣಿ’ಗೆ ಎಫ್‌ಆರ್‌ಎ ಪ್ರಮಾಣ ಪತ್ರ ನೀಡಿದ್ದು ಬಹಿರಂಗವಾಗಿದೆ.

ADVERTISEMENT

ಸಂಡೂರು ತಾಲ್ಲೂಕಿನ ನರಸಿಂಗಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಣಜಿತಪುರ ಗ್ರಾಮದ ಸುತ್ತಮುತ್ತ 1196.16 ಎಕರೆ (484.07 ಹೆಕ್ಟೇರ್) ಅರಣ್ಯ ಭೂಮಿಯನ್ನು ಖನಿಜೋತ್ಪಾದನೆ ಹಾಗೂ ಸಂಪರ್ಕ ರಸ್ತೆ ನಿರ್ಮಾಣಕ್ಕಾಗಿ ಕೆಐಒಸಿಎಲ್‌ ಕಂಪನಿಗೆ ವರ್ಗಾಯಿಸಲು ಬೇಕಾದ ಪ್ರಮಾಣಪತ್ರವನ್ನು ಬಳ್ಳಾರಿ ಜಿಲ್ಲಾಡಳಿತ 2022ರ ನ.3ರಂದು ಮಂಜೂರು ಮಾಡಿದೆ.

‘ಪ್ರಸ್ತಾಪಿತ 484.07 ಹೆಕ್ಟೇರ್ ಅರಣ್ಯ ಪ್ರದೇಶದಲ್ಲಿ ಯಾವುದೇ ವಸಾಹತು, ಅರಣ್ಯ ನಿವಾಸಿಗಳು, ಅರಣ್ಯ ಹಕ್ಕು ಕಾಯ್ದೆಯಡಿ ಹಕ್ಕುಗಳು, ಅರ್ಜಿಗಳು ಬಾಕಿ ಇಲ್ಲ’ ಎಂದು  ಜಿಲ್ಲಾಡಳಿತ ನೀಡಿದ್ದ ಪ್ರಮಾಣ ಪತ್ರದ ಫಾರಂ–1ರ ‘ಡಿ’ನಲ್ಲಿ ಉಲ್ಲೇಖಿಸಿದೆ.

ಆದರೆ, ಇದೇ ಪ್ರದೇಶದಲ್ಲಿ ಕನಿಷ್ಠ 11 ಕುಟುಂಬಗಳು ದಶಕಗಳಿಂದಲೂ ಕೃಷಿ ಚಟುವಟಿಕೆಯಲ್ಲಿ ತೊಡಗಿರುವುದು, ಅರಣ್ಯ ಹಕ್ಕುಗಳ ಮಾನ್ಯತೆ ಕಾಯ್ದೆ 2006 ಅಡಿ ಪಟ್ಟಾ ವಿತರಿಸಲು ಕೋರಿ 2016ರಲ್ಲಿ ನರಸಿಂಗಪುರ ಗ್ರಾಮ ಪಂಚಾಯಿತಿಯ ಅರಣ್ಯ ಹಕ್ಕು ಸಮಿತಿಗೆ 21 ಮಂದಿ ಅರ್ಜಿ ಸಲ್ಲಿಸಿರುವ ಪಟ್ಟಿ ‘ಪ್ರಜಾವಾಣಿ’ಗೆ ಲಭ್ಯವಾಗಿದೆ. ಈ ಅರ್ಜಿಗಳ ಪೈಕಿ ಕನಿಷ್ಠ 11 ಅರ್ಜಿಗಳು ಕೆಐಒಸಿಎಲ್‌ನ ದೇವದಾರಿ ಗಣಿ ಗುತ್ತಿಗೆ ವ್ಯಾಪ್ತಿಗೆ ಒಳಪಡುತ್ತವೆ ಎಂದು ಅಧಿಕೃತ ಮೂಲಗಳು ಮಾಹಿತಿ ನೀಡಿವೆ.

ಈ ಅರ್ಜಿಗಳು ವಿಲೇವಾರಿಯೇ ಆಗದೇ ಜಿಲ್ಲಾಡಳಿತ ಎಫ್‌ಆರ್‌ಎ ಪ್ರಮಾಣ ಪತ್ರ ಕೊಟ್ಟಿದ್ದು ಹೇಗೆ, ಈ ವರೆಗೆ ಈ ವಿಷಯ ಬಹಿರಂಗವಾಗದೇ ಉಳಿದಿದ್ದು ಹೇಗೆ ಎಂಬ ಪ್ರಶ್ನೆ ಈಗ ಎದುರಾಗಿದೆ.

ಎಫ್‌ಆರ್‌ಎ ನಿರ್ಣಾಯಕ: ಅರಣ್ಯ ಪ್ರದೇಶದಲ್ಲಿ ಕೈಗೊಳ್ಳಲಾಗುವ ಯಾವುದೇ ಗಣಿಗಾರಿಕೆಗೆ ಕೇಂದ್ರದ ಅರಣ್ಯ ಇಲಾಖೆಯಿಂದ ಎರಡು ಹಂತದ (ಸ್ಟೇಜ್‌–1 ಹಾಗೂ ಸ್ಟೇಜ್‌–2) ಅನುಮೋದನೆ ಬೇಕು. ಅಂತಿಮ ಹಂತದ ಅನುಮೋದನೆ ಸಿಗಬೇಕಿದ್ದರೆ ಅರಣ್ಯ ಹಕ್ಕು ಕಾಯ್ದೆ–2006ರ ಅಡಿ ಸಂಸ್ಥೆಯೊಂದು ಸಂಬಂಧಿತ ಜಿಲ್ಲಾಡಳಿತದಿಂದ ಪತ್ರ ಪಡೆದು ಕೇಂದ್ರ ಅರಣ್ಯ ಇಲಾಖೆಗೆ ಸಲ್ಲಿಸಬೇಕು.

ಏನಿದು ಅರಣ್ಯ ಹಕ್ಕು ಕಾಯ್ದೆ?: ಅರಣ್ಯ ಹಕ್ಕುಗಳ ಮಾನ್ಯತೆ ಕಾಯ್ದೆ–2006 ಎಂದರೆ, ಸಾಂಪ್ರದಾಯಿಕ ಅರಣ್ಯವಾಸಿಗಳ ಹಕ್ಕುಗಳನ್ನು ರಕ್ಷಿಸುವ ಶಾಸನ. ಬುಡಕಟ್ಟು ಸಮುದಾಯಗಳು ಮತ್ತು ಇತರ ಅರಣ್ಯ ನಿವಾಸಿಗಳಿಗೆ ಭೂಮಿ ಮತ್ತು ಜೀವನೋಪಾಯದ ಹಕ್ಕುಗಳನ್ನು ಈ ಕಾಯ್ದೆ ಒದಗಿಸುತ್ತದೆ. ಇದಕ್ಕಾಗಿ ಸಂಬಂಧಿಸಿದವರು ಅರಣ್ಯ ಹಕ್ಕು ಸಮಿತಿಯಲ್ಲಿ ಅರ್ಜಿ ಸಲ್ಲಿಸಬೇಕು.

ಪ್ರಮಾಣ ಪತ್ರದಲ್ಲಿ ಹೆಸರಿಲ್ಲ, ಮೊಹರೂ ಇಲ್ಲ...!

ಬಳ್ಳಾರಿ ಜಿಲ್ಲಾಡಳಿತ 2022ರ ನವೆಂಬರ್ 3ರಂದು ಕೆಐಒಸಿಎಲ್‌ನ ಮಂಜೂರು ಮಾಡಿದ ಪ್ರಮಾಣಪತ್ರವನ್ನು ಆಧರಿಸಿ ಕೇಂದ್ರ ಸರ್ಕಾರದ ಅರಣ್ಯ ಇಲಾಖೆಯು 2022ರ ಡಿಸೆಂಬರ್ 16ರಂದು ‘ದೇವದಾರಿ ಗಣಿ’ಗೆ ಅಂತಿಮ ಹಂತದ ಅನುಮೋದನೆ ನೀಡಿದೆ. ಈ ಅನುಮೋದನೆ ಪತ್ರದ ಷರತ್ತುಗಳ ಪಟ್ಟಿಯಲ್ಲಿ ರಾಜ್ಯ ಸರ್ಕಾರವು ಅರಣ್ಯ ಭೂಮಿಯನ್ನು ಗುತ್ತಿಗೆದಾರ ಸಂಸ್ಥೆಗೆ ಹಸ್ತಾಂತರಿಸುವ ಮೊದಲು ಪಾಲಿಸಬೇಕಾದ ಷರತ್ತುಗಳನ್ನು ಉಲ್ಲೇಖಿಸಿದೆ.

ಈ ಷರತ್ತುಗಳ ನಾಲ್ಕನೇ ಖಂಡಿಕೆಯಲ್ಲಿ ‘ರಾಜ್ಯ ಸರ್ಕಾರವು ಎಫ್‌ಆರ್‌ಎ ಪ್ರಮಾಣ ಪತ್ರದ ಅನುಸರಣೆಯನ್ನು ಖಚಿತಪಡಿಸಿಕೊಳ್ಳಬೇಕು. ಜಿಲ್ಲಾಧಿಕಾರಿ ನೀಡಿದ ಎಫ್‌ಆರ್‌ಎ ಪ್ರಮಾಣ ಪ್ರಮಾಣಪತ್ರದಲ್ಲಿ ಪತ್ರ ಸಂಖ್ಯೆ, ದಿನಾಂಕ, ಹೆಸರು, ಸಹಿ ಮತ್ತು ಅಧಿಕೃತ ಮೊಹರು ಇರುವುದನ್ನು ಖಾತ್ರಿಪಡಿಸಿಕೊಳ್ಳಬೇಕು’ ಎಂದು ಹೇಳಿದೆ. ಆದರೆ, ಪ್ರಮಾಣ ಪತ್ರದಲ್ಲಿ ಜಿಲ್ಲಾಧಿಕಾರಿ ಹೆಸರು ಮತ್ತು ಅಧಿಕೃತ ಮೊಹರೇ ಇಲ್ಲ!

ಇಷ್ಟು ಸೂಕ್ಷ್ಮ ವಿಷಯ ಕೆಐಒಸಿಎಲ್ ಕಂಪನಿಗೆ ಗಮನಕ್ಕೆ ಬಾರದೇ ಹೋಯಿತೇ ಎಂಬ ಪ್ರಶ್ನೆ ಉದ್ಭವಿಸಿದೆ. ಅಂತಿಮ ಹಂತದ ಅನುಮೋದನೆಗೆ ಸಲ್ಲಿಸಿದ ಪ್ರಮಾಣಪತ್ರವೇ ನಕಲಿಯೇ ಎಂಬ ಅನುಮಾನವೂ ಮೂಡಿದೆ.

ಕೆಲವು ಬಾರಿ ಕೆಳಹಂತದ ಅಧಿಕಾರಿಗಳ ಶಿಫಾರಸು ಆಧರಿಸಿ ಪ್ರಮಾಣ ಪತ್ರ ನೀಡಿರುವ ಸಾಧ್ಯತೆ ಉಂಟು. ಈ ವಿಷಯವನ್ನು ಜಿಲ್ಲಾಡಳಿತದ ಮೂಲಕ ಪರಿಶೀಲನೆ ನಡೆಸಲಾಗುವುದು
ನಾಗೇಂದ್ರ ಪ್ರಸಾದ್‌ ಕೆ. , ಜಿಲ್ಲಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.