ಬಳ್ಳಾರಿ: ಗುಣಮಟ್ಟ ಕಾಯ್ದುಕೊಳ್ಳುವಿಕೆಯ ಜೊತೆಗೆ ಲಾಭದ ನಿರೀಕ್ಷೆಯಲ್ಲಿದ್ದ ಬಳ್ಳಾರಿ ಜೀನ್ಸ್ ಉದ್ಯಮವು ಹತ್ತು ದಿನಗಳಿಂದ ಸ್ತಬ್ಧಗೊಂಡಿದೆ. ಕಾರ್ಮಿಕರು ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿದ್ದರೆ, ಘಟಕ ಬಂದ್ ಮಾಡಬೇಕಾದ ಆತಂಕ ಜೀನ್ಸ್ ಡೈಯಿಂಗ್ (ಬಟ್ಟೆಗಳನ್ನು ತೊಳೆದು ಬಣ್ಣ ಹಾಕುವ) ಉದ್ಯಮಿಗಳನ್ನು ಕಾಡುತ್ತಿದೆ.
ಆಗಿದ್ದೇನು?: ಜನವರಿ 16ರಂದು ಬಳ್ಳಾರಿಗೆ ಭೇಟಿ ನೀಡಿದ್ದ ಉಪ ಲೋಕಾಯುಕ್ತ ಬಿ. ವೀರಪ್ಪ ಅವರು, ಮುಂಡರಗಿ ಅಪೆರಲ್ ಪಾರ್ಕ್‌ಗೆ ಭೇಟಿ ನೀಡಿದ್ದರು. ಡೈಯಿಂಗ್ ಘಟಕಗಳಿಂದ ಬರುವ ಕಲುಷಿತ ನೀರು ಕಂಡು, ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ) ಮತ್ತು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (ಕೆಎಸ್‌ಪಿಸಿಬಿ) ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು. ಹಾಗಾಗಿ, ಜೀನ್ಸ್ ಡೈಯಿಂಗ್ ಉದ್ಯಮಿಗಳು ಘಟಕಗಳನ್ನು ಬಂದ್ ಮಾಡಿದ್ದಾರೆ.
‘ಕಲುಷಿತ ನೀರು ತಡೆಯಲಾಗದ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಲು ಲೋಕಾಯುಕ್ತಕ್ಕೆ ಅಧಿಕಾರವಿದೆ. ಆದರೆ, ಘಟಕಗಳನ್ನು ಮುಚ್ಚುವ ಆದೇಶ ನೀಡಲಾಗದು’ ಎಂದು ಲೋಕಾಯುಕ್ತ ಮೂಲಗಳೂ ಹೇಳಿವೆ. ‘ಘಟಕ ಮುಚ್ಚಲು ನಾವೂ ಆದೇಶಿಸಿಲ್ಲ’ ಎಂದು ಕೆಐಎಡಿಬಿ ಮತ್ತು ಕೆಎಸ್‌ಪಿಸಿಬಿ ಅಧಿಕಾರಿಗಳು ತಿಳಿಸಿದರು.
ಸಂಸ್ಕರಣ ಘಟಕ ಬೇಕು: ಡೈಯಿಂಗ್ ಘಟಕಗಳಿಂದ ಹೊರಬರುವ ನೀರಿನ ಸಂಸ್ಕರಣೆಗೆಂದೇ ಕೆಎಸ್‌ಪಿಸಿಬಿಗೆ ಕೆಐಎಡಿಬಿ ಈ ಹಿಂದೆ ನಾಲ್ಕು ಎಕರೆ ಜಾಗ ನೀಡಿದೆ. ಆದರೆ, ಈವರೆಗೆ ಸಂಸ್ಕರಣಾ ಘಟಕ ನಿರ್ಮಾಣವಾಗಿಲ್ಲ.
‘ಎಲ್ಲರಿಗೂ ಸೇರಿ ಸಾಮಾನ್ಯ ಸಂಸ್ಕರಣಾ ಘಟಕ ನಿರ್ಮಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ, ಕೆಐಎಡಿಬಿ ಮತ್ತು ಕೆಎಸ್‌ಪಿಸಿಬಿ ಆಸಕ್ತಿ ತೋರಬೇಕು. ನಾವೂ ಅಗತ್ಯ ನೆರವು ನೀಡುತ್ತೇವೆ’ ಎಂದು ಡೈಯಿಂಗ್ ಉದ್ಯಮಿಗಳು ತಿಳಿಸಿದರು.
ಬಳ್ಳಾರಿಯ ಮುಂಡರಗಿ ಅಪೆರಲ್ ಪಾರ್ಕ್‌ನಲ್ಲಿ ಆರಂಭದಲ್ಲಿ 83 ಡೈಯಿಂಗ್ ಘಟಕಗಳಿದ್ದವು. ಸದ್ಯ ಅದರ ಸಂಖ್ಯೆ 33ಕ್ಕೆ ಇಳಿದಿದೆ.
ಕಲುಷಿತ ನೀರಿನ ಸಾಮಾನ್ಯ ಸಂಸ್ಕರಣಾ ಘಟಕ ನಿರ್ಮಿಸಲು ಸರ್ಕಾರ ಮುಂದಾಗಬೇಕು. ಜೀನ್ಸ್ ಉದ್ಯಮವನ್ನು ಕಾಪಾಡಬೇಕುವೇಣುಗೋಪಾಲ್ ಜೀನ್ಸ್ ಡೈಯಿಂಗ್ ಘಟಕಗಳ ಅಧ್ಯಕ್ಷ ಬಳ್ಳಾರಿ
ಘಟಕ ಮುಚ್ಚುವ ಆದೇಶ ಕೊಟ್ಟಿಲ್ಲ. ಆದರೆ ಈ ಹಿಂದೆ ನೋಟಿಸ್ ಕೊಟ್ಟಿದ್ದೆವು. ಸದ್ಯ ಪರಿಸ್ಥಿತಿ ಕುರಿತು ಕೇಂದ್ರ ಕಚೇರಿಗೆ ತಿಳಿಸುತ್ತೇವೆಸಿದ್ದೇಶ್ ಬಾಬು ಪರಿಸರ ಅಧಿಕಾರಿ ಕೆಎಸ್‌ಪಿಸಿಬಿ ಬಳ್ಳಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.