ADVERTISEMENT

ಬಳ್ಳಾರಿ: ಮೇಯರ್‌ ಕುರ್ಚಿಗೆ ಕಾಂಗ್ರೆಸ್‌ನಲ್ಲಿ ಭಾರಿ ಲಾಬಿ

39 ವಾರ್ಡ್‌ಗಳಲ್ಲಿ 21 ಕಾಂಗ್ರೆಸ್‌, 13 ಮಂದಿ ಬಿಜೆಪಿ, 5 ಪಕ್ಷೇತರ ಸದಸ್ಯರು

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2021, 3:30 IST
Last Updated 26 ಸೆಪ್ಟೆಂಬರ್ 2021, 3:30 IST
ಬಳ್ಳಾರಿ ಮಹಾನಗರಪಾಲಿಕೆ ಕಟ್ಟಡ
ಬಳ್ಳಾರಿ ಮಹಾನಗರಪಾಲಿಕೆ ಕಟ್ಟಡ   

ಬಳ್ಳಾರಿ: ಇಲ್ಲಿನ ಮಹಾನಗರಪಾಲಿಕೆ ಮೇಯರ್‌ ಮತ್ತು ಉಪ ಮೇಯರ್‌ ಚುನಾವಣೆಗೆ ರಾಜ್ಯ ಸರ್ಕಾರ ಹಸಿರು ನಿಶಾನೆ ತೋರಿರುವ ಬೆನ್ನಲ್ಲೇ, ಇವೆರಡೂ ಕುರ್ಚಿಗಳಿಗಾಗಿ ಕಾಂಗ್ರೆಸ್‌ ಪಕ್ಷದೊಳಗೆ ಭಾರಿ ಲಾಬಿ ಶುರುವಾಗಿದೆ.

ಮೇಯರ್‌, ಉಪ ಮೇಯರ್‌ ಆಯ್ಕೆ ಕುರಿತು ಚರ್ಚಿಸಲು ರಾಜ್ಯ ಕಾಂಗ್ರೆಸ್‌ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಶನಿವಾರ ಬೆಂಗಳೂರಿನಲ್ಲಿ ಬಳ್ಳಾರಿ ಜಿಲ್ಲಾ ಕಾಂಗ್ರೆಸ್‌ ಮುಖಂಡರ ಸಭೆ ಕರೆದಿದ್ದರು. ರಾಜ್ಯಸಭೆ ಸದಸ್ಯ ಡಾ.ಸಯ್ಯದ್‌ ನಾಸೀರ್‌ ಹುಸೇನ್‌, ವಿಧಾನ ಪರಿಷತ್‌ ಸದಸ್ಯರಾದ ಕೆ.ಸಿ.ಕೊಂಡಯ್ಯ, ಗ್ರಾಮೀಣ ಕ್ಷೇತ್ರದ ಶಾಸಕ ನಾಗೇಂದ್ರ ಹಾಗೂ ವಿ.ಎಸ್‌.ಉಗ್ರಪ್ಪ ಭಾಗವಹಿಸಿದ್ದರು.

ಜಿಲ್ಲೆಯಲ್ಲಿ ಪಕ್ಷವನ್ನು ಬಲಪಡಿಸುವ ಉದ್ದೇಶದಿಂದ ಯಾರಿಗೆ ಮೇಯರ್‌ ಮತ್ತು ಉಪ ಮೇಯರ್‌ ಹುದ್ದೆ ಕೊಡಬಹುದೆಂದು ಚರ್ಚಿಸಲಾಯಿತು. ಮೇಯರ್‌ ಹುದ್ದೆ ಆಕಾಂಕ್ಷಿಗಳಾಗಿರುವ ಮೂಲಂಗಿ ನಂದೀಶ್‌, ವಿವೇಕ್‌, ಗಾದಿ ಲಿಂಗಪ್ಪ, ಅಲ್ಪಸಂಖ್ಯಾತ ಸಮುದಾಯದ ಆಸೀಫ್‌ ಮತ್ತು ರಿಯಾಜ್‌ ಅವರ ಹೆಸರು ಪ್ರಮುಖವಾಗಿ ‍‍ಪ್ರಸ್ತಾಪವಾಯಿತು ಎಂದು ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

ADVERTISEMENT

ಮೇಯರ್‌ ಸ್ಥಾನವನ್ನು ಸಾಮಾನ್ಯ ವರ್ಗಕ್ಕೆ ಅದರಲ್ಲೂ, ನಗರದ ವಾರ್ಡ್‌ನಿಂದ ಆಯ್ಕೆಯಾದವರಿಗೆ ಕೊಡುವ ಕುರಿತು ಜಿಲ್ಲೆಯ ಮುಖಂಡರು ಒಲವು ವ್ಯಕ್ತಪಡಿಸಿದರು. ಪಕ್ಷದ ಹಿತಾಸಕ್ತಿ ಗಮನದಲ್ಲಿಟ್ಟುಕೊಂಡು, ಪಕ್ಷಕ್ಕೆ ದುಡಿದವರನ್ನು ಮೇಯರ್‌ ಮಾಡಬೇಕು; ಅವರಿಂದ ಮುಂದೆಯೂ ಪಕ್ಷಕ್ಕೆ ಲಾಭವಾಗುವಂತಿರಬೇಕು ಎಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಯಿತು ಎಂದೂ ಮೂಲಗಳು ಸ್ಪಷ್ಟಪಡಿಸಿವೆ.

ಪಕ್ಷೇತರರಾಗಿ ಗೆದ್ದು ಕಾಂಗ್ರೆಸ್‌ ಸೇರ್ಪಡೆಯಾಗಿರುವ ಹಾಗೂ ಸೇರ್ಪಡೆಯಾಗಲಿರುವ ಪಾಲಿಕೆ ಸದಸ್ಯರಿಗೆ ಸ್ಥಾಯಿ ಸಮಿತಿಗಳಲ್ಲಿ ಅವಕಾಶ ಕಲ್ಪಿಸಲು ಉದ್ದೇಶಿಸಲಾಗಿದೆ. ಪಕ್ಷದ ಮುಖಂಡರು ಇನ್ನೊಂದು ಸುತ್ತಿನ ಸಭೆ ಕರೆದು ಚರ್ಚಿಸಿ ಮೇಯರ್‌ ಮತ್ತು ಉಪ ಮೇಯರ್‌ ಸ್ಥಾನದ ಅಭ್ಯರ್ಥಿಗಳನ್ನು ಅಂತಿಮಗೊಳಿಸಲಿದ್ದಾರೆ ಎಂದು ಮೂಲಗಳು ಹೇಳಿವೆ.

ಬಳ್ಳಾರಿ ಮಹಾನಗರಪಾಲಿಕೆಯಲ್ಲಿ ಒಟ್ಟು 39 ವಾರ್ಡ್‌ಗಳಿದ್ದು, 21 ಕಾಂಗ್ರೆಸ್‌ ಪಾಲಾಗಿವೆ. ಪಕ್ಷೇತರವಾಗಿ ಗೆದ್ದಿರುವ ಐವರಲ್ಲಿ ನಾಲ್ವರು ಕಾಂಗ್ರೆಸ್‌ ಸೇರಿದ್ದಾರೆ. ಮತ್ತೊಬ್ಬರು ಸದ್ಯದಲ್ಲೇ ಸೇರುವ ಸಾಧ್ಯತೆಯಿದೆ. ವಿಧಾನಸಭೆ, ಪರಿಷತ್‌ ಮತ್ತು ರಾಜ್ಯಸಭೆ ಸೇರಿದಂತೆ ನಾಲ್ವರು ಚುನಾಯಿತ ಸದಸ್ಯರಿದ್ದಾರೆ. ಬಿಜೆಪಿಯ 13 ಸದಸ್ಯರು ಪಾಲಿಕೆಗೆ ಆಯ್ಕೆಯಾಗಿದ್ದು, ಬಳ್ಳಾರಿ ನಗರ ಶಾಸಕ ಸೋಮಶೇಖರರೆಡ್ಡಿ ಹಾಗೂ ಸಿರುಗುಪ್ಪ ಶಾಸಕ ಸೋಮಲಿಂಗಪ್ಪ ಒಳಗೊಂಡು ಇಬ್ಬರು ಬಿಜೆಪಿ ಶಾಸಕರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.