
ಬಳ್ಳಾರಿ: ಜಿಲ್ಲೆಯ ಗಣಿ ಬಾಧಿತ ತಾಲ್ಲೂಕುಗಳಾದ ಸಂಡೂರು ಮತ್ತು ಬಳ್ಳಾರಿಯ ಸರ್ಕಾರಿ ಶಾಲೆ ವಿದ್ಯಾರ್ಥಿಗಳಿಗೆ ಪೌಷ್ಠಿಕ ಆಹಾರವಾಗಿ ಉಸ್ಲಿ, ಹಣ್ಣು ವಿತರಿಸುವ ಕಾರ್ಯ ಸೋಮವಾರದಿಂದ ಆರಂಭವಾಗಿದೆ.
ರಾಜ್ಯದ ಗಣಿಬಾಧಿತ ಜಿಲ್ಲೆಗಳ ತಲಾ ಒಂದೊಂದು ತಾಲ್ಲೂಕುಗಳಲ್ಲಿ ‘ಗಣಿಗಾರಿಕೆ ಪರಿಸರ ಪುನಃಸ್ಥಾಪನೆ ನಿಗಮ’ ಮಕ್ಕಳ ಅಪೌಷ್ಠಿಕತೆ ನಿವಾರಣೆ ಕಾರ್ಯಕ್ರಮವಾಗಿ ಉಸ್ಲಿ, ಹಣ್ಣು ವಿತರಣೆ ಯೋಜನೆಯನ್ನು ಜಾರಿಗೆ ತಂದಿದೆ. ಇದಕ್ಕಾಗಿ ಕೋಟ್ಯಂತರ ಅನುದಾನವನ್ನೂ ಮೀಸಲಿಟ್ಟಿದೆ.
‘ಈ ಕಾರ್ಯಕ್ರಮವನ್ನು ಕೃತಿ ರೂಪಕ್ಕಿಳಿಸಿದ ಮೊದಲ ಜಿಲ್ಲೆ ಎಂಬ ಹೆಗ್ಗಳಿಕೆಗೆ ಬಳ್ಳಾರಿ ಜಿಲ್ಲೆ ಪಾತ್ರವಾಗಿದೆ’ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಮೊಹಮದ್ ಹ್ಯಾರಿಸ್ ಸುಮೇರ್ ‘ಪ್ರಜಾವಾಣಿ’ಗೆ ತಿಳಿಸಿದರು.
ಸಂಡೂರು ಮತ್ತು ಬಳ್ಳಾರಿ ತಾಲೂಕುಗಳ ಅಂದಾಜು 400 ಶಾಲೆಗಳಲ್ಲಿ ಉಸ್ಲಿ, ಹಣ್ಣು ವಿತರಣೆ ನಡೆಯುತ್ತಿದೆ. ಎಲ್ಲೆಲ್ಲಿ ಇಸ್ಕಾನ್‌ನಿಂದ ಮಧ್ಯಾಹ್ನದ ಬಿಸಿಯೂಟ ಪೂರೈಕೆಯಾಗುತ್ತಿದೆಯೋ ಅಲ್ಲಿ, ಇಸ್ಕಾನ್‌ನಿಂದಲೇ ಉಸ್ಲಿ, ಹಣ್ಣು ವಿತರಣೆ ಮಾಡಿಸಲಾಗುತ್ತದೆ. ಉಳಿದ ಕಡೆ ಶಾಲಾ ಅಭಿವೃದ್ಧಿ ಸಮಿತಿಯಿಂದ ಇದನ್ನು ಕೊಡಲಾಗುತ್ತಿದೆ.
ಉಸ್ಲಿ ತಯಾರಿಸುವುದಕ್ಕೆ ಅಡುಗೆ ಸಹಾಯಕರಿಗೆ ತರಬೇತಿಯನ್ನೂ ನೀಡಲಾಗಿದೆ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಮೊಹಮದ್ ಹ್ಯಾರಿಸ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.