ADVERTISEMENT

ಭಾರತ್‌ ಬಂದ್‌: ಬೀದಿಗಿಳಿದ ಸಂಘಟನೆಗಳು- ಬಳ್ಳಾರಿಗರಿಗೆ ತಟ್ಟಿದ ಬಿಸಿ

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2021, 5:52 IST
Last Updated 27 ಸೆಪ್ಟೆಂಬರ್ 2021, 5:52 IST
   

ಬಳ್ಳಾರಿ: ರೈತ ವಿರೋಧಿ ಕೃಷಿ ಕಾಯ್ದೆ ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಕೆ ವಿರೋಧಿಸಿ ನಡೆಯುತ್ತಿರುವ ಭಾರತ್ ಬಂದ್ ಬಿಸಿ ಬಳ್ಳಾರಿಗರಿಗೆ ಬೆಳಿಗ್ಗೆಯೇ ತಟ್ಟಿದೆ. ಬಂದ್‌ ಬೆಂಬಲಿಸಲು 6ಗಂಟೆಗೆ ಬೀದಿಗಿಳಿದ ಕೆಲವು ಸಂಘಟನೆಗಳ ಕಾರ್ಯಕರ್ತರು ರಾಯಲ್‌ ಸರ್ಕಲ್‌ನಲ್ಲಿ ಕೃಷಿ ಕಾಯ್ದೆ ತಿದ್ದುಪಡಿಗೆ ಬೆಂಕಿ ಹಚ್ಚಿದರು.

ಬ್ಯಾನರ್‌ ಹಾಗೂ ಪೋಸ್ಟರ್ ಹಿಡಿದು ರಾಯಲ್‌ ಸರ್ಕಲ್‌ನಲ್ಲಿ ಸೇರಿದ ಬಂದ್‌ ಪರ ಕಾರ್ಯಕರ್ತರು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಈ ಪ್ರತಿಭಟನೆಯಿಂದಾಗಿ ದುರ್ಗಿಗುಡಿ ಸರ್ಕಲ್‌ನಿಂದ ರಾಯಲ್‌ ಸರ್ಕಲ್‌ವರೆಗೆ ರಸ್ತೆಗೆ ಬ್ಯಾರಿಕೇಡ್‌ಗಳನ್ನು ಹಾಕಿ ಬಂದ್‌ ಮಾಡಲಾಗಿತ್ತು.

ನಗರ ಸಾರಿಗೆ ಹಾಗೂ ಗ್ರಾಮಾಂತರ ಬಸ್‌ಗಳ ಸಂಚಾರ ಎಂದಿನಂತಿತ್ತು. ಬೈಕ್‌, ಕಾರುಗಳಲ್ಲಿ ಓಡಾಡುತ್ತಿದ್ದ ಜನರಿಗೆ ಬಂದ್‌ ಬೆಂಬಲಿಸುವಂತೆ ಕಾರ್ಯಕರ್ತರು ಮನವಿ ಮಾಡುತ್ತಿದ್ದುದು ಕಂಡುಬಂತು. ಹೊಟೇಲ್‌ಗಳು, ಔಷಧ ಅಂಗಡಿಗಳು ತೆರೆದಿದ್ದವು. ಹಾಲು, ಹೂ, ಹಣ್ಣು ಹಾಗೂ ತರಕಾರಿ ಮಾರಾಟಕ್ಕೆ ತೊಂದರೆಯಾಗಲಿಲ್ಲ. ಕೋಳಿ ಮತ್ತು ಮಾಂಸ ಮಾರಾಟದ ಅಂಗಡಿಗಳೂ ವ್ಯಾಪಾರ– ವಹಿವಾಟು ನಡೆಸಿದವು.

ADVERTISEMENT

ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯವು ಬಂದ್‌ ಪರಿಣಾಮವಾಗಿ ಸೋಮವಾರ ನಡೆಯಬೇಕಿದ್ದ ಪದವಿ ಮತ್ತು ಸ್ನಾತಕೋತ್ತರ ‍ಪದವಿಗಳ ಎಲ್ಲ ಪರೀಕ್ಷೆಗಳನ್ನು ಮುಂದೂಡಿ ಭಾನುವಾರ ರಾತ್ರಿ ಸುತ್ತೋಲೆ ಹೊರಡಿಸಿತ್ತು. ಈ ಪರೀಕ್ಷೆಗಳ ಮುಂದಿನ ದಿನಾಂಕ ಪ್ರಕಟಿಸಲಾಗುವುದು ಎಂದು ಕುಲಸಚಿವ (ಮೌಲ್ಯಮಾಪನ) ಪ್ರೊ. ಶಶಿಕಾಂತ್‌ ಉಡಿಕೇರಿ ತಿಳಿಸಿದ್ದಾರೆ.

ಬಂದ್‌ ಹಿನ್ನೆಲೆಯಲ್ಲಿ ನಗರದ ಪ್ರಮುಖ ಸ್ಥಳಗಳಲ್ಲಿ ಬಿಗಿ ಪೊಲೀಸ್‌ ಬಂದೋಬಸ್ತ್‌ ಏರ್ಪಡಿಸಲಾಗಿತ್ತು. ಜಿಲ್ಲಾ ಕಾಂಗ್ರೆಸ್‌, ಎಡ ಪಕ್ಷಗಳು ಮತ್ತು ಅವುಗಳ ಅಂಗ ಸಂಘಟನೆಗಳು ಬಂದ್‌ಗೆ ಬೆಂಬಲ ವ್ಯಕ್ತಪಡಿಸಿದ್ದು, ಮೆರವಣಿಗೆ ನಡೆಸಲು ಉದ್ದೇಶಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.