ADVERTISEMENT

ಕನ್ನಡಕ್ಕೆ ಅನ್ಯ ಶಿಸ್ತಿನ ಲೇಖಕರ ಕೊಡುಗೆ ಅಪಾರ: ಸಾಹಿತಿ ಅಮರೇಶ ನುಗಡೋಣಿ

‘ಹಾಯ್‌ ಅಂಗೋಲಾ’ ಪುಸ್ತಕ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2018, 10:39 IST
Last Updated 11 ಡಿಸೆಂಬರ್ 2018, 10:39 IST
ಹೊಸಪೇಟೆಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸಾಹಿತಿ ಅಮರೇಶ ನುಗಡೋಣಿ ಅವರು ‘ಹಾಯ್ ಅಂಗೋಲಾ’ ಪುಸ್ತಕ ಬಿಡುಗಡೆಗೊಳಿಸಿ ಕೃತಿಯ ಲೇಖಕ ಪ್ರಸಾದ್‌ ನಾಯ್ಕ್‌ ಅವರಿಗೆ ಅದರ ಪ್ರತಿ ನೀಡಿದರು. ಚಂದ್ರಶೇಖರಯ್ಯ ರೋಣದಮಠ, ಚಲುವರಾಜು, ಎಸ್‌.ಎಂ.ಶಶಿಧರ್‌ ಹಾಗೂ ಅಂಜಲಿ ಬೆಳಗಲ್‌ ಇದ್ದಾರೆ–ಪ್ರಜಾವಾಣಿ ಚಿತ್ರ
ಹೊಸಪೇಟೆಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸಾಹಿತಿ ಅಮರೇಶ ನುಗಡೋಣಿ ಅವರು ‘ಹಾಯ್ ಅಂಗೋಲಾ’ ಪುಸ್ತಕ ಬಿಡುಗಡೆಗೊಳಿಸಿ ಕೃತಿಯ ಲೇಖಕ ಪ್ರಸಾದ್‌ ನಾಯ್ಕ್‌ ಅವರಿಗೆ ಅದರ ಪ್ರತಿ ನೀಡಿದರು. ಚಂದ್ರಶೇಖರಯ್ಯ ರೋಣದಮಠ, ಚಲುವರಾಜು, ಎಸ್‌.ಎಂ.ಶಶಿಧರ್‌ ಹಾಗೂ ಅಂಜಲಿ ಬೆಳಗಲ್‌ ಇದ್ದಾರೆ–ಪ್ರಜಾವಾಣಿ ಚಿತ್ರ   

ಹೊಸಪೇಟೆ: ‘ಕನ್ನಡ ಸಾಹಿತ್ಯಕ್ಕೆ ಕನ್ನಡದ ಸೃಜನಶೀಲ ಸಾಹಿತಿಗಳ ಜತೆಗೆ ಅನ್ಯ ಶಿಸ್ತಿನ ಲೇಖಕರ ಕೊಡುಗೆಯೂ ಅಪಾರವಿದೆ. ಅವರ ಬರಹಗಳಿಂದ ಕನ್ನಡ ಸಾಹಿತ್ಯ ಇನ್ನಷ್ಟು ಶ್ರೀಮಂತಗೊಳ್ಳಲು ಕಾರಣವಾಗಿದೆ’ ಎಂದು ಸಾಹಿತಿ ಅಮರೇಶ ನುಗಡೋಣಿ ಹೇಳಿದರು.

ಅಖಿಲ ಕರ್ನಾಟಕ ಸಾಂಸ್ಕೃತಿಕ ಕಲಾಕೇಂದ್ರದಿಂದ ಮಂಗಳವಾರ ಇಲ್ಲಿನ ಪ್ರೌಢದೇವರಾಯ ತಾಂತ್ರಿಕ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಎಂಜಿನಿಯರ್‌ ಪ್ರಸಾದ್‌ ನಾಯ್ಕ್‌ ಅವರ ‘ಹಾಯ್‌ ಅಂಗೋಲಾ..!’ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದರು.

‘ವೈದ್ಯಕೀಯ, ಎಂಜಿನಿಯರಿಂಗ್‌ ಕ್ಷೇತ್ರದಲ್ಲಿರುವ ಅನೇಕ ಜನ ಕಥೆ, ಕಾದಂಬರಿ, ಪ್ರವಾಸ ಕಥನಗಳನ್ನು ಬರೆಯುತ್ತಿದ್ದಾರೆ. ನಾಗಲೋಟಿಮಠ ಅವರು ವೈದ್ಯರಾಗಿದ್ದುಕೊಂಡು ಕನ್ನಡ ಸಾಹಿತ್ಯ ಶ್ರೀಮಂತಗೊಳಿಸಿದವರು. ಸಾಹಿತ್ಯದ ವಿದ್ಯಾರ್ಥಿಯಾಗಿರುವ ನಾಗೇಶ ಹೆಗಡೆ ಅವರು ‘ಪ್ರಜಾವಾಣಿ’ಯಲ್ಲಿ ವಿಜ್ಞಾನದ ಲೇಖನಗಳ ಮೂಲಕ ಜನರಿಗೆ ಚಿರಪರಿಚಿತರಾಗಿದ್ದಾರೆ. ಅನ್ಯ ಶಿಸ್ತಿನ ಬಿ.ಜಿ.ಎಲ್‌. ಸ್ವಾಮಿ, ಜಯಂತ್‌ ಕಾಯ್ಕಿಣಿ ಬೇರೆ ಶಿಸ್ತಿನ ವಿದ್ಯಾರ್ಥಿಯಾಗಿದ್ದರೂ ಕನ್ನಡ ಸಾಹಿತ್ಯದ ಕೃಷಿ ಮಾಡುತ್ತಿದ್ದಾರೆ. ಅಂತಹವರ ಸಾಲಿಗೆ ಪ್ರಸಾದ್‌ ನಾಯ್ಕ್‌ ಸೇರುತ್ತಾರೆ’ ಎಂದು ತಿಳಿಸಿದರು.

ADVERTISEMENT

‘ಕನ್ನಡದ ವೃತ್ತಿ ಬರಹಗಾರರಿಗೆ ದಕ್ಕದ ಭಾಷೆ ಪ್ರಸಾದ್‌ ನಾಯ್ಕ್‌ ಅವರಂತಹ ಎಂಜಿನಿಯರಿಂಗ್‌ ಸೇವೆಯಲ್ಲಿರುವವರು ದಕ್ಕಿಸಿಕೊಂಡಿದ್ದಾರೆ. ಭಾಷೆ ಮೇಲೆ ಹಿಡಿತ ಹೊಂದುವುದು ಅಷ್ಟು ಸುಲಭವಾದ ಕೆಲಸವಲ್ಲ. ಅದು ಕೂಡ ಇಂದಿನ ತಂತ್ರಜ್ಞಾನದ ಯುಗದಲ್ಲಿ. ಪತ್ರ ಬರೆಯುವ ಹವ್ಯಾಸವೇ ಇಂದಿನ ದಿನಮಾನಗಳಲ್ಲಿ ಕಳೆದು ಹೋಗಿದೆ. ಇಂತಹ ಸಂದಿಗ್ಧ ಸ್ಥಿತಿಯಲ್ಲಿ ಪ್ರಸಾದ್ ನಾಯ್ಕ್‌ ಅವರನ್ನು ನೋಡಿ ನಮ್ಮ ಯುವಕರು ಕಲಿಯುವುದು ಬಹಳಷ್ಟಿದೆ’ ಎಂದರು.

ಪುಸ್ತಕದ ಕುರಿತು ಮಾತನಾಡಿದ ಹಂಪಿ ಕನ್ನಡ ವಿಶ್ವವಿದ್ಯಾಲಯದ ಬುಡಕಟ್ಟು ಅಧ್ಯಯನ ವಿಭಾಗದ ಪ್ರಾಧ್ಯಾಪಕ ಚಲುವರಾಜು, ‘ಸಾಂಸ್ಕೃತಿಕ, ಸಾಮಾಜಿಕ ಅರಿವಿನ ಪ್ರಜ್ಞೆಯಿದ್ದರಷ್ಟೇ ಬರವಣಿಗೆ ಅದ್ಭುತಗೊಳ್ಳುತ್ತದೆ. ಅಷ್ಟೇ ಸೃಜನಶೀಲವಾಗುತ್ತದೆ. ಒಬ್ಬ ಸೃಜನಶೀಲ ಬರಹಗಾರ ಪ್ರವಾಸ ಕಥನವನ್ನು ಹೇಗೆಲ್ಲ ಬರೆಯಬಹುದು ಎಂಬುದಕ್ಕೆ ಪ್ರಸಾದ್‌ ನಾಯ್ಕ್‌ ದೊಡ್ಡ ನಿದರ್ಶನ’ ಎಂದು ಹೇಳಿದರು.

‘ಅಂಗೋಲಾದ ಸಾಮಾಜಿಕ, ಸಮುದಾಯದ ದೃಷ್ಟಿಕೋನವನ್ನು ಬಹಳ ಸೂಕ್ಷ್ಮವಾಗಿ ಗ್ರಹಿಸಿದ್ದರಿಂದ ಪ್ರವಾಸ ಕಥನವನ್ನು ಅದ್ಭುತವಾಗಿ ಕಟ್ಟಿಕೊಡಲು ಪ್ರಸಾದ್‌ ಅವರಿಗೆ ಸಾಧ್ಯವಾಗಿದೆ. ಲೇಖಕನಾದವನು ಸಮಾಜದ ದೃಷ್ಟಿ ಅರ್ಥ ಮಾಡಿಕೊಂಡರಷ್ಟೇ ಅದರ ಆಳ–ಅಗಲಗಳನ್ನು ಬರೆಯಲು ಸಾಧ್ಯವಾಗುತ್ತದೆ’ ಎಂದು ತಿಳಿಸಿದರು.

‘ಅಂಗೋಲಾ ಪ್ರಾಕೃತಿಕ ಸಂಪನ್ಮೂಲಗಳಿಂದ ಕೂಡಿರುವ ಶ್ರೀಮಂತ ಪ್ರದೇಶ. ಆದರೆ, ಅಲ್ಲಿ ಶ್ರೀಮಂತರು–ಬಡವರ ನಡುವಿನ ಅಂತರ, ಬಂಡವಾಳಷಾಹಿಗಳು ಸಂಪನ್ಮೂಲ ದೋಚಲು ವ್ಯವಸ್ಥಿತ ಹುನ್ನಾರ ನಡೆಸಿರುವುದು, ಅಸಮತೋಲನದಿಂದ ಕೂಡಿರುವ ದೇಶದಲ್ಲಿ ಜನ ಯಾವುದರ ಮೂಲಕ ತಮ್ಮ ಪ್ರತಿಭಟನೆಯನ್ನು ವ್ಯಕ್ತಪಡಿಸುತ್ತಿದ್ದಾರೆ. ಭಾರತೀಯ ಹಾಗೂ ದಕ್ಷಿಣ ಆಫ್ರಿಕಾದ ಬುಡಕಟ್ಟು ಜನರ ಆಚರಣೆಗಳನ್ನು ಎಳೆಎಳೆಯಾಗಿ ಪ್ರಸಾದ್‌ ಕಟ್ಟಿಕೊಟ್ಟಿದ್ದಾರೆ’ ಎಂದರು.

ಪ್ರಸಾದ್‌ ನಾಯ್ಕ್‌ ಮಾತನಾಡಿ, ‘ಆಫ್ರಿಕಾದ ಬಗ್ಗೆ ನಮ್ಮ ಜನರಿಗೆ ಹೆಚ್ಚು ಪರಿಚಯ ಇಲ್ಲ. ನನ್ನ ಪ್ರವಾಸ ಕಥನದಲ್ಲಿ ಅಲ್ಲಿನ ಅನೇಕ ಸಂಗತಿಗಳ ಮೇಲೆ ಬೆಳಕು ಚೆಲ್ಲಿದ್ದರಿಂದ ಜನರಿಗೆ ಈ ಪುಸ್ತಕ ಹತ್ತಿರವಾಯಿತು’ ಎಂದು ಸಂತಸ ಹಂಚಿಕೊಂಡರು.

ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಎಸ್‌.ಎಂ. ಶಶಿಧರ್‌ ಮಾತನಾಡಿ, ‘ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವು ಎಂಜಿನಿಯರಿಂಗ್‌ ವಿದ್ಯಾರ್ಥಿಗಳಿಗೆ ಕನ್ನಡ ಭಾಷೆಯನ್ನು ಕಡ್ಡಾಯಗೊಳಿಸಿದೆ. ಎಲ್ಲರೂ ಕನ್ನಡವನ್ನು ಕಲಿಯಬೇಕೆಂಬ ಉದ್ದೇಶ ಅದರ ಹಿಂದಿದೆ. ಇಂತಹ ಕಾರ್ಯಕ್ರಮಗಳ ಮೂಲಕ ವಿದ್ಯಾರ್ಥಿಗಳಿಗೆ ಕನ್ನಡ ಸಾಹಿತ್ಯದ ಪರಿಚಯವಾಗಲಿ ಎಂದು ಈ ಸಮಾರಂಭ ಹಮ್ಮಿಕೊಂಡಿದ್ದೇವೆ’ ಎಂದರು.

ಕಲಾಕೇಂದ್ರದ ಅಧ್ಯಕ್ಷೆ ಅಂಜಲಿ ಬೆಳಗಲ್‌, ಕಾರ್ಯದರ್ಶಿ ಚಂದ್ರಶೇಖರಯ್ಯ ರೋಣದಮಠ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.