ADVERTISEMENT

ಬಳ್ಳಾರಿ: ಬ್ಯಾನರ್‌, ಕಟೌಟ್‌ ತೆರವಿಗೆ ಬಿಜೆಪಿ ಆಗ್ರಹ

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2025, 5:48 IST
Last Updated 25 ಅಕ್ಟೋಬರ್ 2025, 5:48 IST
ನಗರದ ಇಂದಿರಾ ವೃತ್ತಕ್ಕೆ ನಗರ ಶಾಸಕ ನಾರಾ ಭರತ್‌ ರೆಡ್ಡಿ ಬೆಂಬಲಿಗರು ಅಳವಡಿಸಿರುವ ಬ್ಯಾನರ್‌ಗಳು 
ನಗರದ ಇಂದಿರಾ ವೃತ್ತಕ್ಕೆ ನಗರ ಶಾಸಕ ನಾರಾ ಭರತ್‌ ರೆಡ್ಡಿ ಬೆಂಬಲಿಗರು ಅಳವಡಿಸಿರುವ ಬ್ಯಾನರ್‌ಗಳು    

ಬಳ್ಳಾರಿ: ‘ಬಳ್ಳಾರಿ ನಗರ ಶಾಸಕ ನಾರಾ ಭರತ್‌ ರೆಡ್ಡಿ ಹುಟ್ಟುಹಬ್ಬಕ್ಕಾಗಿ ಅವರ ಹಿಂಬಾಲಕರು, ಕಾಂಗ್ರೆಸ್ ಕಾರ್ಯಕರ್ತರು ರಸ್ತೆ, ವೃತ್ತಗಳಲ್ಲಿ ಅನಧಿಕೃತವಾಗಿ ಫ್ಲೆಕ್ಸ್ ಹಾಕಿದ್ದು, ಜಿಲ್ಲಾ ಆಡಳಿತ ಹಾಗೂ ಪಾಲಿಕೆ ಅಧಿಕಾರಿಗಳು ಕೂಡಲೇ ತೆರವುಗೊಳಿಸಬೇಕು’ ಎಂದು ಬಿಜೆಪಿ ಆಗ್ರಹಿಸಿದೆ. 

ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿದ ಜಿಲ್ಲಾ ಬಿಜೆಪಿ ಅಧ್ಯಕ್ಷ ಅನಿಲ್‌ ಕುಮಾರ್‌ ಮೋಕ, ‘ಪಾಲಿಕೆ ವ್ಯಾಪ್ತಿಯಲ್ಲಿನ ಪ್ರಮುಖ ಸ್ಥಳಗಳಲ್ಲಿ ಫ್ಲೆಕ್ಸ್, ಬ್ಯಾನರ್, ಕಟೌಟ್‌ಗಳನ್ನು ಹಾಕಲಾಗಿದೆ. ಪಾಲಿಕೆಯಲ್ಲಿ ಈ ಬಗ್ಗೆ ವಿಚಾರಿಸಿದಾಗ ಪರವಾನಿಗೆ ತೆಗೆದುಕೊಂಡಿಲ್ಲ ಎಂದು ಹೇಳಿದ್ದಾರೆ. ಶಾಸಕರು ಹುಟ್ಟು ಹಬ್ಬ ಆಚರಿಸಿಕೊಳ್ಳಲಿ. ಆದರೆ, ಅವರ ಹೆಸರಲ್ಲಿ ರಸ್ತೆ, ಡಿವೈಡರ್‌ಗಳಿಗೆ ಅಡ್ಡವಾಗಿ ಬ್ಯಾನರ್‌, ಫ್ಲೆಕ್ಸ್‌ ಹಾಕಿರುವುದು ಸರಿಯಲ್ಲ’ ಎಂದರು. 

‘ಸಾರ್ವಜನಿಕರಿಗೆ, ವಾಹನಗಳ ಸಂಚಾರಕ್ಕೆ ತೊಂದರೆಯಾಗದಂತೆ, ವ್ಯಾಪಾರಸ್ಥರಿಗೂ ಕಿರಿಕಿರಿಯಾಗದಂತೆ, ನಿಗದಿತ ಸ್ಥಳಗಳಲ್ಲಿ ಬ್ಯಾನರ್-ಫ್ಲೆಕ್ಸ್ ಹಾಕಿಕೊಳ್ಳಲಿ. ಅದಕ್ಕಾಗಿ ಪಾಲಿಕೆಯಿಂದ ಅನುಮತಿ ಪಡೆಯಲಿ. ನಿಗದಿತ ಶುಲ್ಕ ತುಂಬಲಿ. ಪಾಲಿಕೆಗೂ ಆದಾಯ  ಬರುತ್ತದೆ’ ಎಂದು ಹೇಳಿದರು. 

ADVERTISEMENT

‘ನಗರದ ಜನನಿಬಿಡ ಪ್ರದೇಶಗಳಲ್ಲಿ, ಪ್ರಮುಖ ಸ್ಥಳಗಳಲ್ಲಿ, ಎಲ್ಲೆಂದರಲ್ಲಿ ಬ್ಯಾನರ್, ಫ್ಲೆಕ್ಸ್, ಅಳವಡಿಸುವುದನ್ನು ನಿಷೇಧಿಸಲು ಇತ್ತೀಚಿನ ಪಾಲಿಕೆ ಸಭೆಯಲ್ಲಿಯೇ ಒಪ್ಪಿಗೆ ಪಡೆಯಲಾಗಿದೆ. ಶಾಸಕರು ಕೂಡ ಇದಕ್ಕೆ ಧ್ವನಿಗೂಡಿಸಿದ್ದರು. ಆದರೆ ಇದೀಗ ಅವರ ಅಭಿಮಾನಿಗಳು, ಬೆಂಬಲಿಗರು ಈ ರೀತಿ ಫ್ಲೆಕ್ಸ್-ಬ್ಯಾನರ್, ಕಟೌಟ್‌ಗಳನ್ನು ಹಾಕಿರುವುದು ಸರಿಯಲ್ಲ’ ಎಂದರು. 

ಬ್ಯಾನರ್‌ಗಳನ್ನು ತೆರವು ಮಾಡುವಂತೆ ಜಿಲ್ಲಾಧಿಕಾರಿ, ಪಾಲಿಕೆ ಆಯುಕ್ತರಿಗೆ ಮನವಿ ಸಲ್ಲಿಸಲಾಗುವುದು ಎಂದೂ ಮುಖಂಡರು ಹೇಳಿದರು. 

‘ಬಳ್ಳಾರಿ ನಗರವೂ ಸೇರಿದಂತೆ ಜಿಲ್ಲೆಯಾದ್ಯಂತ ಎಲ್ಲಾ ತಾಲ್ಲೂಕುಗಳಲ್ಲಿ ರಸ್ತೆಗಳು ಹದಗೆಟ್ಟಿವೆ. ಶಾಂತಿ, ಸುವ್ಯವಸ್ಥೆ, ಕಾನೂನು ಪರಿಸ್ಥಿತಿ ಸಮರ್ಪಕವಾಗಿಲ್ಲ. ಅಧಿಕಾರಿಗಳು ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ಬಹುತೇಕ ಎಲ್ಲಾ ರಸ್ತೆಗಳು ಹಾಳಾಗಿದ್ದು, ಕೂಡಲೇ ದುರಸ್ತಿ ಮಾಡಬೇಕು. ಈ ಬಗ್ಗೆ ಕೆಲವೇ ದಿನಗಳಲ್ಲಿ ಹೋರಾಟ ನಡೆಸಲಾಗುವುದು. ತಾತ್ಕಾಲಿಕವಾಗಿ ಗುಂಡಿಗಳನ್ನು ಮುಚ್ಚುವ ಕೆಲಸವನ್ನು ಬಿಜೆಪಿ ಮಾಡಲಿದೆ’ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಅನಿಲ್‌ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಕಾರ್ಪೋರೇಟರ್‌ಗಳು, ಜಿಲ್ಲಾ ಘಟಕದ ಪದಾಧಿಕಾರಿಗಳು, ಸ್ಥಳೀಯ ಮುಖಂಡರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.