ADVERTISEMENT

ಜ.13ರಂದು ಜನಸೇವಕ ಸಮಾವೇಶ: ಸಚಿವ ಆನಂದ್‌ ಸಿಂಗ್‌ ಮಾಹಿತಿ

ತಾಪಂ, ಜಿಪಂ ಚುನಾವಣೆ ಬಿಜೆಪಿ ಸಿದ್ಧತೆ

​ಪ್ರಜಾವಾಣಿ ವಾರ್ತೆ
Published 11 ಜನವರಿ 2021, 8:32 IST
Last Updated 11 ಜನವರಿ 2021, 8:32 IST
ಸುದ್ದಿಗೋಷ್ಠಿಯಲ್ಲಿ ಅರಣ್ಯ ಸಚಿವ ಆನಂದ್‌ ಸಿಂಗ್‌ ಮಾತನಾಡಿದರು
ಸುದ್ದಿಗೋಷ್ಠಿಯಲ್ಲಿ ಅರಣ್ಯ ಸಚಿವ ಆನಂದ್‌ ಸಿಂಗ್‌ ಮಾತನಾಡಿದರು   

ಹೊಸಪೇಟೆ: ‘ಬರಲಿರುವ ತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಚುನಾವಣೆಯ ಸಿದ್ಧತೆ, ಬಿಜೆಪಿ ಪಕ್ಷ ಸಂಘಟನೆಗಾಗಿ ಬುಧವಾರ (ಜ. 13) ನಗರದಲ್ಲಿ ‘ಜನಸೇವಕ ಸಮಾವೇಶ’ ಹಮ್ಮಿಕೊಳ್ಳಲಾಗಿದೆ’ ಎಂದು ಅರಣ್ಯ ಸಚಿವ ಆನಂದ್‌ ಸಿಂಗ್‌ ಮಾಹಿತಿ ನೀಡಿದರು.

‘ಅಂದಿನ ಸಮಾವೇಶದಲ್ಲಿ ಹಾಲಿ ಗ್ರಾಮ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಸದಸ್ಯರು, ನಗರಸಭೆಯ ಮಾಜಿ ಸದಸ್ಯರು ಪಾಲ್ಗೊಳ್ಳುವರು. ಕೇಂದ್ರ ಸಂಸದೀಯ ವ್ಯವಹಾರಗಳ ಖಾತೆ ಸಚಿವ ಪ್ರಲ್ಹಾದ ಜೋಶಿ, ಬೃಹತ್‌ ಕೈಗಾರಿಕೆ ಸಚಿವ ಸಚಿವ ಜಗದೀಶ ಶೆಟ್ಟರ್‌, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ಸಚಿವೆ ಶಶಿಕಲಾ ಜೊಲ್ಲೆ ಸೇರಿದಂತೆ ಜಿಲ್ಲೆಯ ಸಂಸದ, ಶಾಸಕರು ಪಾಲ್ಗೊಂಡು ಪಕ್ಷ ಸಂಘಟನೆ ಬಗ್ಗೆ ಮಾರ್ಗದರ್ಶನ ಮಾಡುವರು’ ಎಂದು ಸೋಮವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಇತ್ತೀಚೆಗೆ ನಡೆದ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಅರ್ಧದಷ್ಟು ಬಿಜೆಪಿ ಬೆಂಬಲಿಗರು ಆಯ್ಕೆಯಾಗಿದ್ದಾರೆ. ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನದ ಮೀಸಲು ನಿಗದಿಯಾದ ನಂತರ ಹೆಚ್ಚಿನ ಕಡೆಗಳಲ್ಲಿ ಬಿಜೆಪಿ ಪಂಚಾಯಿತಿ ಗದ್ದುಗೆ ಏರುವ ವಿಶ್ವಾಸ ಇದೆ’ ಎಂದು ಭರವಸೆ ವ್ಯಕ್ತಪಡಿಸಿದರು.

ADVERTISEMENT

ಪಶ್ಚಿಮದವರು ವಿರೋಧಿಸಿಲ್ಲ

‘ವಿಜಯನಗರ ಜಿಲ್ಲೆ ರಚನೆಗೆ ಬಳ್ಳಾರಿ ಜಿಲ್ಲೆಯ ಪಶ್ಚಿಮ ತಾಲ್ಲೂಕುದವರು ವಿರೋಧಿಸುತ್ತಿದ್ದಾರೆ ಎನ್ನುವುದು ಸುಳ್ಳು. ಯಾರು ಕೂಡ ವಿರೋಧಿಸಿಲ್ಲ. ಕೇವಲ ಬಳ್ಳಾರಿಯವರು ವಿರೋಧಿಸುತ್ತಿದ್ದಾರೆ. ಹಗರಿಬೊಮ್ಮನಹಳ್ಳಿ, ಹೂವಿನಹಡಗಲಿ ಶಾಸಕರು ಅವರ ತಾಲ್ಲೂಕು ಜಿಲ್ಲಾ ಕೇಂದ್ರ ಮಾಡಿದರೆ ಸೂಕ್ತ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅದರಲ್ಲಿ ತಪ್ಪೇನೂ ಇಲ್ಲ. ಎಲ್ಲರಿಗೂ ಅವರ ಅಭಿಪ್ರಾಯ ಹೇಳುವ ಹಕ್ಕಿದೆ’ ಎಂದು ಆನಂದ್‌ ಸಿಂಗ್‌ ಹೇಳಿದರು.

‘ಜಿಲ್ಲೆ ರಚನೆ ಪರ, ವಿರುದ್ಧವಾಗಿ ಆಕ್ಷೇಪಣೆಗಳು ಸಲ್ಲಿಕೆಯಾಗುತ್ತಿವೆ. ಆಕ್ಷೇಪಣೆ ಸಲ್ಲಿಕೆಗೆ ಜ. 14 ಕಡೆಯ ದಿನವಾಗಿದೆ. ಅದರ ನಂತರ ಅಧಿಕಾರಿಗಳು ಅವುಗಳನ್ನು ಪರಿಶೀಲಿಸಿ, ಮುಂದಿನ ಕ್ರಮ ಕೈಗೊಳ್ಳುತ್ತಾರೆ. ಯಾವಾಗ ಜಿಲ್ಲೆ ಘೋಷಣೆಯಾಗುತ್ತೆ ಅನ್ನುವುದು ನನಗೂ ಗೊತ್ತಿಲ್ಲ’ ಎಂದು ಪ್ರಶ್ನೆಗೆ ಪ್ರತಿಕ್ರಿಯಿಸಿದರು.

‘ಹೊಸಪೇಟೆ ನಗರದಲ್ಲಿ 24X7 ಕುಡಿಯುವ ನೀರಿನ ಕಾಮಗಾರಿ ಶೇ 85ರಷ್ಟು ಪೂರ್ಣಗೊಂಡಿದೆ. ನಲ್ಲಿಗಳಿಗೆ ಸಂಪರ್ಕ ಕೊಡುವ ಕೆಲಸ ನಿಧಾನಗತಿಯಲ್ಲಿ ನಡೆಯುತ್ತಿದೆ. ಆದಷ್ಟು ಶೀಘ್ರ ಪೂರ್ಣಗೊಳಿಸಿ, ನೀರು ಹರಿಸುವಂತೆ ಸಂಬಂಧಿಸಿದವರಿಗೆ ಸೂಚನೆ ಕೊಡಲಾಗಿದೆ’ ಎಂದು ತಿಳಿಸಿದರು.

‘ವಿವೇಕಾನಂದ ಪುತ್ಥಳಿ ಎಂದು ಎಲ್ಲಿಯೂ ಹೇಳಿಲ್ಲ’

‘ನಗರದ ಜೋಳದರಾಶಿ ಗುಡ್ಡದ ಮೇಲೆ ಸ್ವಾಮಿ ವಿವೇಕಾನಂದರ ಪುತ್ಥಳಿ ಪ್ರತಿಷ್ಠಾಪಿಸಲಾಗುವುದು ಎಂದು ನಾನು ಎಲ್ಲಿಯೂ ಹೇಳಿಲ್ಲ’ ಎಂದು ಸಚಿವ ಆನಂದ್‌ ಸಿಂಗ್‌ ಹೇಳಿದರು.

ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ಸ್ವಾಮಿ ವಿವೇಕಾನಂದ ಮೆಮೊರಿಯಲ್‌ ಟ್ರಸ್ಟ್‌ನವರು ಗುಡ್ಡದ ಮೇಲಿನ ಜಾಗ ಗುತ್ತಿಗೆಗೆ ಪಡೆದುಕೊಂಡಿದ್ದರು. ಅವರ ಪ್ರಸ್ತಾವದಲ್ಲಿ ಏನಿದೆಯೋ ಗೊತ್ತಿಲ್ಲ. 2022ರ ಜನವರಿಯೊಳಗೆ 45 ಅಡಿ ಎತ್ತರದ ಕೃಷ್ಣದೇವರಾಯನ ಕಂಚಿನ ಪುತ್ಥಳಿ ಪ್ರತಿಷ್ಠಾಪಿಸುವ ಗುರಿ ಹಾಕಿಕೊಳ್ಳಲಾಗಿದೆ. ಈಗಾಗಲೇ ಪುತ್ಥಳಿಯ ನಿರ್ಮಾಣ ಕೆಲಸ ಆರಂಭಗೊಂಡಿದೆ’ ಎಂದು ತಿಳಿಸಿದರು.

‘ಐಎಸ್‌ಆರ್‌ ಕಾರ್ಖಾನೆ ಮಾಲೀಕ ನಾನಲ್ಲ’

‘ಇಂಡಿಯನ್‌ ಶುಗರ್‌ ರಿಫೈನರಿ (ಐಎಸ್‌ಆರ್‌ ) ಕಾರ್ಖಾನೆ ಮಾಲೀಕ ನಾನಲ್ಲ’ ಎಂದು ಸುದ್ದಿಗಾರರು, ‘ಕಾರ್ಖಾನೆ ಯಾವಾಗ ಆರಂಭಿಸುತ್ತೀರಿ’ ಎಂದು ಕೇಳಿದ ಪ್ರಶ್ನೆಗೆ ಸಚಿವ ಆನಂದ್‌ ಸಿಂಗ್‌ ಪ್ರತಿಕ್ರಿಯಿಸಿದ್ದು ಹೀಗೆ.

‘ಹೊಸದಾಗಿ ಸಕ್ಕರೆ ಕಾರ್ಖಾನೆ ಆರಂಭಿಸಲು ಪ್ರಯತ್ನಿಸುತ್ತೇನೆ ಎಂದು ಹೇಳಿರುವೆ ಹೊರತು ಐಎಸ್‌ಆರ್‌ ಕಾರ್ಖಾನೆ ಆರಂಭಿಸುವುದರ ಬಗ್ಗೆ ನಾನು ಎಲ್ಲೂ ಮಾತನಾಡಿಲ್ಲ. ಈಗಷ್ಟೇ ಸಹಕಾರ ಕ್ಷೇತ್ರಕ್ಕೆ ಪ್ರವೇಶಿಸಿರುವೆ. ಬಿಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಸ್ಥಾನಕ್ಕೇರುವುದರ ಕುರಿತು ಯೋಚಿಸಿಲ್ಲ. ಸಮಯ ಬಂದಾಗ ನೋಡೋಣ’ ಎಂದರು.

ಬಿಜೆಪಿ ವಿಭಾಗ ಪ್ರಭಾರಿ ಸಿದ್ದೇಶ್‌ ಯಾದವ್‌, ಬಳ್ಳಾರಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಚನ್ನಬಸವನಗೌಡ ಪಾಟೀಲ, ಮಂಡಲ ಅಧ್ಯಕ್ಷ ಬಸವರಾಜ ನಾಲತ್ವಾಡ, ಪ್ರಧಾನ ಕಾರ್ಯದರ್ಶಿ ಜೀವರತ್ನಂ, ಮುಖಂಡರಾದ ಸಂದೀಪ್‌ ಸಿಂಗ್, ಅನಿಲ್ ನಾಯ್ಡು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.