ADVERTISEMENT

17ರ ಸಮಾವೇಶಕ್ಕೆ ಸಿದ್ಧತೆ: ಶ್ರೀರಾಮುಲು

​ಪ್ರಜಾವಾಣಿ ವಾರ್ತೆ
Published 15 ಜನವರಿ 2026, 2:39 IST
Last Updated 15 ಜನವರಿ 2026, 2:39 IST
ಶ್ರೀರಾಮುಲು 
ಶ್ರೀರಾಮುಲು    

ಬಳ್ಳಾರಿ: ‘ಬಳ್ಳಾರಿಯ ಘರ್ಷಣೆಯನ್ನು ನಿಷ್ಪಕ್ಷಪಾತ ತನಿಖೆಗೆ ಸಿಬಿಐಗೆ ವಹಿಸಬೇಕು, ಶಾಸಕ ಭರತ್‌ ರೆಡ್ಡಿ ಮತ್ತು ಬೆಂಬಲಿಗರನ್ನು ಬಂಧಿಸಬೇಕು ಎಂದು ಒತ್ತಾಯಿಸಿ ಇದೆ ಜ. 17ರಂದು ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿದೆ’ ಎಂದು ಮಾಜಿ ಶಾಸಕ ಬಿ. ಶ್ರೀರಾಮುಲು ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಬಳ್ಳಾರಿಯಲ್ಲಿ ಮಾತನಾಡಿದ ಅವರು, ‘ಸಮಾವೇಶ ಕೇವಲ ಬಳ್ಳಾರಿ ಗಲಭೆಗೆ ಸಂಬಂಧಿಸಿದ ಪ್ರತಿರೋಧದ ಸಮಾವೇಶ ಅಲ್ಲ. ಬದಲಿಗೆ ಕಲ್ಯಾಣ ಕರ್ನಾಟಕ ಭಾಗದಲ್ಲಿ ಹದಗೆಟ್ಟಿರುವ ಕಾನೂನು ಸುವ್ಯವಸ್ಥೆಯನ್ನು ವಿರೋಧಿಸಿ ನಡೆಯುತ್ತಿರುವ ಸಮಾವೇಶ’ ಎಂದು ಮಾಜಿ ಸಚಿವ ಶ್ರೀರಾಮುಲು ಹೇಳಿದ್ದಾರೆ. 

‘ಕಲಬುರಗಿ ರಿಪಬ್ಲಿಕ್ ಆಗಿದೆ. ಅಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿದೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ವಿಜಯೇಂದ್ರ, ಛಲವಾದಿ ನಾರಾಯಣಸ್ವಾಮಿ ಆರೋಪಿಸಿದ್ದರು. ಅಲ್ಲಿಗೆ ಹೋದಾಗ ಅವರ ಮೇಲೆ ಕಲ್ಲು ಬಂಡೆಗಳನ್ನು ಹಿಡಿದು ಹಲ್ಲೆಗೆ ಯತ್ನಿಸಲಾಯಿತು. ಅಲ್ಲಿಯೂ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

‘ಬಳ್ಳಾರಿ ಗಲಭೆಗೆ ಸಂಬಂಧಿಸಿದಂತೆ ಪೊಲೀಸರು, ಸಿಐಡಿಗೆ ಎಲ್ಲ ಮಾಹಿತಿ ನೀಡಲಾಗಿದೆ. ಘಟನೆಗೆ ಪೊಲೀಸ್‌ ವೈಫಲ್ಯ ಕಾರಣ. ಸತೀಶ್ ರೆಡ್ಡಿಯ ಬಂದೂಕಿನ ಪರವಾನಗಿ ಮುಕ್ತಾಯಗೊಂಡಿದ್ದರೂ ಅದನ್ನು ಹೇಗೆ ಬಳಸುತ್ತಿದ್ದಾನೆ. ಸತೀಶ್ ರೆಡ್ಡಿ ಹಾಗೂ ಶಾಸಕ ನಾರಾ ಭರತ್ ರೆಡ್ಡಿ ಅವರನ್ನು ಬಂಧಿಸಬೇಕು’ ಎಂದು ಆಗ್ರಹಿಸಿದರು.

‘ಸಮಾವೇಶದಲ್ಲಿ 50 ಸಾವಿರ ಜನ ಸೇರುವ ನಿರೀಕ್ಷೆ ಇದೆ. ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ, ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ, ವಿಪಕ್ಷ ನಾಯಕ ಆರ್. ಅಶೋಕ ಸೇರಿದಂತೆ ರಾಜ್ಯ ನಾಯಕರು ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ’ ಎಂದರು.

ಪಾದಯಾತ್ರೆ ಖಿಚಿತವಾಗಿಲ್ಲ: ‘ಪಾದಯಾತ್ರೆ ಕುರಿತು ರಾಷ್ಟ್ರೀಯ ನಾಯಕ ಜೆ.ಪಿ. ನಡ್ಡಾ ಸಮ್ಮುಖದಲ್ಲಿ ಚರ್ಚೆಯಾಗಿದೆ. ಕೇಂದ್ರದ ನಾಯಕರಿಗೂ ಪಾದಯಾತ್ರೆಗೆ ಸಹಮತ ಇದೆ. ಅಲ್ಲದೆ ಕಾರ್ಯಕರ್ತರು ಅಭಿಪ್ರಾಯ ಇದೇ ಆಗಿದೆ. ರಾಜ್ಯ ಘಟಕದ ಅಧ್ಯಕ್ಷರು ಒಪ್ಪಿಗೆ ನೀಡಿದಲ್ಲಿ ಪಾದಯಾತ್ರೆ ನಡೆಯಲಿದೆ’ ಎಂದು ಶ್ರೀರಾಮುಲು ಹೇಳಿದರು.

‘ಪಾದಯಾತ್ರೆಗೆ 22 ದಿನಗಳ ಮಾರ್ಗಸೂಚಿ ಸಿದ್ಧಪಡಿಸಲಾಗಿದೆ. ಸಮಾವೇಶದ ನಂತರ ಬಳ್ಳಾರಿಯಿಂದಲೇ ಪಾದಯಾತ್ರೆ ಪ್ರಾರಂಭಿಸುವ ನಿರ್ಧಾರ ಆಗಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.