
ಬಳ್ಳಾರಿ: ‘ಲೇಖಕ, ಪ್ರಕಾಶಕ ಮತ್ತು ಓದುಗರನ್ನು ಬೆಸೆಯುವ ಕೆಲಸವನ್ನು ಪ್ರಕಾಶಕರ ಕಮ್ಮಟ ಮಾಡುತ್ತಿದೆ. ಈ ಕೂಡು ಕೆಲಸದಿಂದ ಉತ್ತಮ ಪುಸ್ತಕಗಳು ಕನ್ನಡ ಸಾಹಿತ್ಯಕ್ಕೆ ದೊರೆಯಲಿವೆ’ ಎಂದು ಕಥೆಗಾರ ಅಮರೇಶ ನುಗುಡೋಣಿ ಆಶಾಭಾವನೆ ವ್ಯಕ್ತಪಡಿಸಿದರು.
ಬಳ್ಳಾರಿಯ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯ ಹಾಗೂ (ಭಾರತೀಯ ಪ್ರಕಾಶಕರ ಒಕ್ಕೂಟದ ಜತೆ ಸಂಯೋಜಿತ) ಕರ್ನಾಟಕ ಪ್ರಕಾಶಕರ ಸಂಘ ಬುಧವಾರ ವಿಶ್ವವಿದ್ಯಾಲಯದ ಪ್ರೊ. ಸಿದ್ದು ಪಿ. ಆಲಗೂರ ಸಭಾಂಗಣದಲ್ಲಿ ಆಯೋಜಿಸಿದ್ದ ‘ಪುಸ್ತಕ ಪ್ರಕಾಶನ ಕಮ್ಮಟ’ ಉದ್ಘಾಟಿಸಿ ಅವರು ಮಾತನಾಡಿದರು.
‘12ನೇ ಶತಮಾನದ ಮೌಖಿಕ ಕಾವ್ಯ ಪರಂಪರೆಯಾಗಿತ್ತು. ಜನಪದರ ಅನೂಹ್ಯ ಜಗತ್ತನ್ನು ಕೇಳುವ ಮೂಲಕ ನಾವು ಅದನ್ನು ಉಳಿಸಿಕೊಂಡು ಬಂದಿದ್ದೇವೆ. ಜನಮಾನಸಕ್ಕೆ ವಚನಕಾರರು ‘ಬಾಯ್ದೆರೆ ಸಾಹಿತ್ಯ’ ನೀಡಿದರು’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
‘ಬ್ರಿಟಿಷ್ ಅಧಿಕಾರಿಗಳ ಕಾಲದಲ್ಲಿ ಹಸ್ತಪ್ರತಿ ರಕ್ಷಿಸುವ, ಸಾಹಿತ್ಯ ಸಂರಕ್ಷಿಸುವ ಕೆಲಸ ಆರಂಭವಾಯಿತು. ಬರೆಯುವ ಲೇಖಕರು ಒಂದೆಡೆಯಾದರೆ ಪ್ರಕಟಣೆ ಮಾಡುವವರು ಮತ್ತೊಂದೆಡೆ ಹುಟ್ಟಿಕೊಂಡರು’ ಎಂದು ತಿಳಿಸಿದರು.
‘ದೇವರಾಜ ಅರಸು ಕಾಲದಲ್ಲಿ ಪುಸ್ತಕ ಪ್ರಕಾಶನಕ್ಕೆ ಹೆಚ್ಚಿನ ಆದ್ಯತೆ ಸಿಕ್ಕಿತ್ತು. ದಲಿತ, ಹಿಂದುಳಿದ ವರ್ಗಗಳು ಜ್ಞಾನ ಪಡೆಯಲು ವೇದಿಕೆಯಾಗಿ ಸಾರ್ವಜನಿಕ ಗ್ರಂಥಾಲಯಗಳು ಹುಟ್ಟಿಕೊಂಡವು’ ಎಂದು ಸ್ಮರಿಸಿದರು.
‘ಲೇಖಕ, ಪ್ರಕಾಶಕ, ಓದುಗ ಹಾಗೂ ಹಂಚಿಕೆದಾರರಿಗೆ ಕಳೆದ ಏಳು ವರ್ಷಗಳಿಂದ ನೆರವು ನಿಂತು ಹೋಗಿದೆ. ಬಜೆಟ್‌ಗಳು ಪ್ರಕಾಶಕರಿಗೆ ಹಣಕಾಸಿನ ನೆರವು ನಿಲ್ಲಿಸಿವೆ. ಆಧುನಿಕ ತಂತ್ರಜ್ಞಾನದಿಂದಾಗಿ ಓದುಗರ ಸಂಖ್ಯೆ ಕಡಿಮೆಯಾಗಿ ಮಾನವೀಯ ಮೌಲ್ಯಗಳು ತಮ್ಮ ನೆಲೆ ಕಳೆದುಕೊಂಡಿದೆ. ಪ್ರಕಾಶಕರು ಸೇವಾ ಮನೋಭಾವದಿಂದ ಕೆಲಸ ಮಾಡಬೇಕು’ ಎಂದು ಬೇಸರಿಸಿದರು.
‘ಸರ್ಕಾರ ಎಲ್ಲಾ ಭಾಗ್ಯಗಳ ಜತೆಗೆ ಪುಸ್ತಕ ಭಾಗ್ಯವನ್ನು ಕಲ್ಪಿಸಲಿ. ಆ ಮೂಲಕ ಜನಸಾಮಾನ್ಯರಿಗೆ ಉತ್ತಮ ಪುಸ್ತಕ ತಲುಪಿಸುವ ಕೆಲಸ ಮಾಡಿ ಲೇಖಕ, ಪ್ರಕಾಶಕರ ಕೈಹಿಡಿಯಬೇಕು’ ಎಂದು ಆಗ್ರಹಿಸಿದರು.
ವಿವಿ ಕುಲಪತಿ ಪ್ರೊ. ಮುನಿರಾಜು ಎಂ. ಮಾತನಾಡಿ, ‘ಪುಸ್ತಕ ಪ್ರಕಟಣೆ ಇಂದಿನ ದಿನಗಳಲ್ಲಿ ಕಡಿಮೆಯಾಗುತ್ತದೆ. ವಿದ್ಯಾರ್ಥಿಗಳು ಮಾಹಿತಿಗೆ ‘ಗೂಗಲ್’ ಮಾಡುತ್ತಿದ್ದಾರೆ. ಇದು ಅಪಾಯಕಾರಿ' ಎಂದು ಹೇಳಿದರು.
ಕರ್ನಾಟಕ ಪ್ರಕಾಶಕರ ಸಂಘದ ಅಧ್ಯಕ್ಷೆ ಡಾ. ವಸುಂದರಾ ಭೂಪತಿ, ಪ್ರಸಾರಾಂಗ ನಿರ್ದೇಶಕ ತಿಪ್ಪೇರುದ್ರ, ಕುಲಸಚಿವ ಎನ್.ಎಂ. ಸಾಲಿ, ಪ್ರಕಾಶಕರ ಸಂಘದ ಪ್ರಧಾನ ಕಾರ್ಯದರ್ಶಿ ನ. ರವಿಕುಮಾರ, ಹಣಕಾಸು ಅಧಿಕಾರಿ ನಾಗರಾಜ ಮತ್ತಿತರರು ಇದ್ದರು.
‘ಇಂದಿನ ರಾಜಕಾರಣವು ಇತಿಹಾಸಕ್ಕೆ ಆಪರೇಷನ್ ಮಾಡುತ್ತಿದೆ. 'ವಂದೇ ಮಾತರಂ' ಗೀತೆ ರಾಜಕಾರಣಕ್ಕೆ ಹೇಗೆ ಬಳಕೆಯಾಗುತ್ತಿದೆ ಎಂಬುದೇ ಇದಕ್ಕೆ ಸೂಕ್ತ ಉದಾಹರಣೆ’ ಎಂದು ಕವಿ ಮತ್ತು ಸಿಂಡಿಕೇಟ್ ಸದಸ್ಯ ಬಿ. ಪೀರ್‌ಬಾಷ ಹೇಳಿದರು.
‘ಪುಸ್ತಕ ಪ್ರಕಾಶನ ಕಮ್ಮಟ’ದ ಬೆಳಗಿನ ಗೋಷ್ಠಿಯಲ್ಲಿ ಮಾತನಾಡಿದ ಅವರು ‘ಸಂವಹನವು ಅಕ್ಷರ ಪರಂಪರೆಯಿಂದ ಲಿಪಿಯ ಪರಂಪರೆಗೆ ಬದಲಾದಾಗ ಬರಹಗಾರ ಮತ್ತು ಓದುಗರ ಮಧ್ಯೆ ಪ್ರಕಾಶಕ ಕೊಂಡಿಯಾಗಿ ರೂಪಗೊಳ್ಳಬೇಕು. ಬಳ್ಳಾರಿಯ ಲೋಹಿಯಾ ಪ್ರಕಾಶನ ಸಮಾಜವಾದಿ ಆಶಯಗಳನ್ನು ದಾಖಲಿಸುವ ವೇದಿಕೆಯಾಯಿತು’ ಎಂದರು.
ಬೆಂಗಳೂರಿನ ಕರ್ನಾಟಕ ಪ್ರಕಾಶಕರ ಸಂಘದ ಪ್ರಧಾನ ಕಾರ್ಯದರ್ಶಿ ನ. ರವಿಕುಮಾರ ’ಕನ್ನಡ ಪ್ರಕಾಶನ ರಂಗ ಒಂದು ಸ್ಥೂಲ ನೋಟ’ ಕುರಿತು ವಿಚಾರ ಮಂಡಿಸಿ ‘ಅಶೋಕನ ಕಾಲದಿಂದ ಆಧುನಿಕ ಕಾಲದ ವರೆಗಿನ ಪುಸ್ತಕ ಪ್ರಕಾಶನ ಬೆಳೆದು ಬಂದ ಹಾದಿ ಕುರಿತು ವಿವರಿಸಿದರು.
'ಕನ್ನಡ ನೆಲದಲ್ಲಿ ಕನ್ನಡದ ಪುಸ್ತಕ ಪ್ರಕಟಣೆ ಮೊದಲು ಆಗಿದ್ದೇ ಬಳ್ಳಾರಿಯಲ್ಲಿ’ ಎಂದು ತಿಳಿಸಿದರು. ‘ಸಂಗಾತ’ ಪ್ರಕಾಶನದ ಟಿ. ಎಸ್. ಗೊರವರ ಮಾತನಾಡಿ ‘ಪ್ರಕಾಶಕ ನಾಟಕ ಕಥೆ ಕಾದಂಬರಿ ವೈಚಾರಿಕ ಸಾಹಿತ್ಯ ಕುರಿತು ಅವಲೋಕಿಸದೆ ಪ್ರಕಾಶನಕ್ಕೆ ಧುಮುಕಬಾರದು’ ಎಂದು ಕಿವಿಮಾತು ಹೇಳಿದರು. ಸಮಾಜ ವಿಜ್ಞಾನ ನಿಕಾಯ ಡೀನರು ಡಾ.ಗೌರಿ ಮಾಣಿಕ್ ಮಾನಸ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.