ADVERTISEMENT

ಶಾಲೆ, ಕಾಲೇಜುಗಳಲ್ಲಿ ಸಿ.ಎ ಕೋರ್ಸ್ ಜಾಗೃತಿ!

ರಾಜ್ಯ ಸರ್ಕಾರ– ಭಾರತೀಯ ಚಾರ್ಟರ್ಡ್‌ ಅಕೌಂಟೆಂಟ್‌ಗಳ ಸಂಸ್ಥೆ ನಡುವೆ ಒಪ್ಪಂದ

ಕೆ.ನರಸಿಂಹ ಮೂರ್ತಿ
Published 24 ಜೂನ್ 2019, 20:00 IST
Last Updated 24 ಜೂನ್ 2019, 20:00 IST
ಎಸ್‌.ಪನ್ನರಾಜ್‌
ಎಸ್‌.ಪನ್ನರಾಜ್‌   

ಬಳ್ಳಾರಿ: ವಾಣಿಜ್ಯ ಶಿಕ್ಷಣ, ಅದರಲ್ಲೂ ಚಾರ್ಟರ್ಡ್‌ ಅಕೌಂಟೆನ್ಸಿ (ಸಿ.ಎ) ಕೋರ್ಸ್‌ ಕುರಿತ ಉಚಿತ ಜಾಗೃತಿ ಕಾರ್ಯಾಗಾರಗಳು ರಾಜ್ಯದ ಸರ್ಕಾರಿ ಮತ್ತು ಅನುದಾನಿತ ಪ್ರೌಢಶಾಲೆ ಮತ್ತು ಪದವಿಪೂರ್ವ ಕಾಲೇಜುಗಳಲ್ಲಿಜುಲೈ 1ರಿಂದ ಆರಂಭವಾಗಲಿವೆ.

ವಾಣಿಜ್ಯ ಶಿಕ್ಷಣ ಪಡೆಯುವು ದರಿಂದ ಆಗುವ ಲಾಭಗಳ ಕುರಿತು ಅರಿವು ಮೂಡಿಸುವ ಸಂಬಂಧ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ ಹಾಗೂಭಾರತೀಯ ಚಾರ್ಟರ್ಡ್‌ ಅಕೌಂಟೆಂಟ್‌ಗಳ ಸಂಸ್ಥೆಯ ನಡುವೆ ಜೂನ್‌ 19ರಂದು ಮೂರು ವರ್ಷಗಳ ಅವಧಿಗೆ ಒಪ್ಪಂದ ಏರ್ಪಟ್ಟಿದೆ.

ಇಂಥ ಕಾರ್ಯಕ್ರಮ ಈಗ ತಮಿಳುನಾಡಿನಲ್ಲಷ್ಟೇ ಇದೆ. ಈ ಪದ್ಧತಿ ಅಳವಡಿಸಿಕೊಂಡಿರುವ ರಾಜ್ಯಗಳಲ್ಲಿ ಕರ್ನಾಟಕ ಎರಡನೆಯದ್ದಾಗಿದೆ. ಸಂಸ್ಥೆಯ ಸಂಸ್ಥಾಪನಾ ದಿನವಾದ ಜುಲೈ 1ರಂದೇ ಈ ಕಾರ್ಯಕ್ರಮಕ್ಕೆ ಚಾಲನೆ ದೊರಕಲಿರುವುದು ವಿಶೇಷ.

ADVERTISEMENT

ವಾಣಿಜ್ಯ ಶಿಕ್ಷಣದ ಪಠ್ಯ ಕ್ರಮಗಳು, ಅಧ್ಯಯನ ಸಾಮಗ್ರಿ,ಅದಕ್ಕಾಗಿ ನಡೆಸಬೇಕಾದ ಪೂರ್ವಸಿದ್ಧತೆಗಳ ಕುರಿತು ವಿದ್ಯಾರ್ಥಿಗಳಲ್ಲಿ ಪ್ರೌಢ ಶಾಲೆ ಮತ್ತು ಪದವಿಪೂರ್ವ ಶಿಕ್ಷಣದ ಹಂತದಲ್ಲೇ ಜಾಗೃತಿ ಮೂಡಿಸುವುದು ಈ ಒಪ್ಪಂದದ ಪ್ರಮುಖ ಉದ್ದೇಶ. ರಾಜ್ಯದಲ್ಲಿರುವ ಸಂಸ್ಥೆಯ ವಿವಿಧ ಜಿಲ್ಲಾ ಶಾಖೆಗಳ ವ್ಯಾಪ್ತಿಯ ಶಾಲೆ– ಕಾಲೇಜುಗಳಲ್ಲಿ ಸ್ಪರ್ಧೆಗಳು, ಉಪನ್ಯಾಸ, ತರಬೇತಿ ಕಾರ್ಯಾಗಾರ, ಆಪ್ತ ಸಮಾಲೋಚನೆ ಕಾರ್ಯಕ್ರಮ ಗಳನ್ನು ಏರ್ಪಡಿಸಲು ಸಿದ್ಧತೆ ನಡೆಸಿದೆ. ಸಂಸ್ಥೆಯ ಸಂಪನ್ಮೂಲ ವ್ಯಕ್ತಿಗಳೇ ಶಾಲೆ– ಕಾಲೇಜುಗಳಿಗೆ ತೆರಳಿ ಜಾಗೃತಿ ಮೂಡಿಸಲಿದ್ದಾರೆ.

‘ನಮ್ಮ ದೇಶದಲ್ಲಿ 5 ಲಕ್ಷ ಚಾರ್ಟರ್ಡ್‌ ಅಕೌಂಟೆಂಟ್‌ಗಳ ಅಗತ್ಯವಿದೆ. ಆದರೆ ಇರುವುದು 2.80 ಲಕ್ಷ ಮಂದಿ ಮಾತ್ರ. ದೇಶ ವಿದೇಶಗಳಲ್ಲಿಯೂ ಬೇಡಿಕೆ ಇದೆ. ಈ ಕೋರ್ಸ್‌ ಮಾಡಿದವರ ಆರಂಭಿಕ ವೇತನವೇ ಈಗ ₹ 50 ಸಾವಿರ. ಗ್ರಾಮೀಣ ವಿದ್ಯಾರ್ಥಿಗಳಿಗೆ ಈ ಬಗ್ಗೆ ಗೊತ್ತಾಗಲಿ ಎಂಬುದೇ ಈ ಒಪ್ಪಂದದ ಉದ್ದೇಶ’ ಎಂದು ಸಂಸ್ಥೆಯ ದಕ್ಷಿಣ ಭಾರತ ಪ್ರಾಂತೀಯ ಪರಿಷತ್‌ ಸದಸ್ಯ ಎಸ್‌.ಪನ್ನರಾಜ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ವಾಣಿಜ್ಯ ಶಿಕ್ಷಣಕ್ಕೆ ಇರುವ ಉದ್ಯೋಗಾವಕಾಶಗಳ ಮಾಹಿತಿ ನೀಡುವುದರ ಜೊತೆಗೆ, ಕೋರ್ಸ್‌ ಗಳಿಗೆ ಸಿದ್ಧರಾಗುವುದು ಹೇಗೆ ಎಂಬ ಕುರಿತು 3 ದಿನ, 15 ದಿನ ತರಬೇತಿ ಹಾಗೂ 1 ತಿಂಗಳ ಬುನಾದಿ ತರಬೇತಿ ಕಾರ್ಯಾಗಾರಗಳನ್ನೂ ಆಯೋಜಿ ಸಲಾಗುವುದು’ ಎಂದು ಮಾಹಿತಿ ನೀಡಿದರು. ‘ನುರಿತ ಚಾರ್ಟರ್ಡ್‌ ಅಕೌಂಟೆಂಟ್‌ಗಳೇ ಈ ಕಾರ್ಯ ಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಸಂಸ್ಥೆಯೇ ಅವರಿಗೆ ನಿರ್ದಿಷ್ಟ ಮೊತ್ತದ ಗೌರವಧನ ಪಾವತಿಸುತ್ತದೆ. ಶಾಲೆ, ಕಾಲೇಜುಗಳಲ್ಲಿ ಅವಕಾಶ ಮಾಡಿಕೊಡುವುದಷ್ಟೇ ಸರ್ಕಾರದ ಕೆಲಸ’ ಎಂದರು.

14 ಜಿಲ್ಲೆಗಳಲ್ಲಿ ತರಬೇತಿ..
ಸಂಸ್ಥೆಯ ಶಾಖೆಗಳಿರುವ ಕಲಬುರ್ಗಿ, ಬಳ್ಳಾರಿ, ಹುಬ್ಬಳ್ಳಿ, ಬೆಳಗಾವಿ, ಉಡುಪಿ, ಮಂಗಳೂರು, ಮೈಸೂರು ಮತ್ತು ಬೆಂಗಳೂರು, ಕಿರುಶಾಖೆಗಳಿರುವ ರಾಯಚೂರು, ಬಾಗಲಕೋಟೆ, ಶಿರಸಿ, ವಿಜಯಪುರ, ದಾವಣಗೆರೆ ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಮೊದಲಿಗೆ ಈಜಾಗೃತಿ ಕಾರ್ಯಕ್ರಮಗಳು ಆರಂಭವಾಗಲಿವೆ.

ಬಳ್ಳಾರಿಯಲ್ಲಿ ಜಿಲ್ಲಾಧಿಕಾರಿ ಎಸ್‌.ಎಸ್‌.ನಕುಲ್‌ ಈ ಕಾರ್ಯಕ್ರಮವನ್ನು ನಗರದ ಶೆಟ್ರ ಗುರುಶಾಂತಪ್ಪ ಪದವಿಪೂರ್ವ ಕಾಲೇಜಿನಲ್ಲಿ ಉದ್ಘಾಟಿಸಲಿದ್ದಾರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.