ADVERTISEMENT

ಹೂವಿನಹಡಗಲಿ | ‘ಒಳ ಮೀಸಲಾತಿ ಜಾರಿಯಾಗುವವರೆಗೆ ಬಡ್ತಿ, ನೇಮಕಾತಿ ಬೇಡ’

​ಪ್ರಜಾವಾಣಿ ವಾರ್ತೆ
Published 13 ಮೇ 2025, 14:31 IST
Last Updated 13 ಮೇ 2025, 14:31 IST
ಒಳ ಮೀಸಲಾತಿಗಾಗಿ ಕ್ರಾಂತಿಕಾರಿ ರಥಯಾತ್ರೆಯಲ್ಲಿ ಹೂವಿನಹಡಗಲಿಗೆ ಬಂದಿದ್ದ ಮುಖಂಡರು ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು
ಒಳ ಮೀಸಲಾತಿಗಾಗಿ ಕ್ರಾಂತಿಕಾರಿ ರಥಯಾತ್ರೆಯಲ್ಲಿ ಹೂವಿನಹಡಗಲಿಗೆ ಬಂದಿದ್ದ ಮುಖಂಡರು ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು   

ಹೂವಿನಹಡಗಲಿ: ಪರಿಶಿಷ್ಟ ಜಾತಿ ಸಮುದಾಯಗಳಿಗೆ ಒಳ ಮೀಸಲಾತಿ ಜಾರಿ ಮಾಡುವವರೆಗೆ ನೌಕರರ ಬಡ್ತಿ ಮತ್ತು ಹುದ್ದೆಗಳ ನೇಮಕಾತಿ ಪ್ರಕ್ರಿಯೆಯನ್ನು ರಾಜ್ಯ ಸರ್ಕಾರ ನಡೆಸಬಾರದು ಎಂದು ಹೋರಾಟಗಾರ ಭಾಸ್ಕರ್ ಪ್ರಸಾದ್ ಒತ್ತಾಯಿಸಿದರು.

ಒಳ ಮೀಸಲಾತಿಗಾಗಿ ಕ್ರಾಂತಿಕಾರಿ ರಥಯಾತ್ರೆಯಲ್ಲಿ ಮಂಗಳವಾರ ಪಟ್ಟಣಕ್ಕೆ ಆಗಮಿಸಿದ್ದ ಅವರು ಡಾ.ಬಿ.ಆರ್‌.ಅಂಬೇಡ್ಕರ್‌ ಪುತ್ತಳಿಗೆ ಮಾಲಾರ್ಪಣೆ ಮಾಡಿ ಮಾತನಾಡಿದರು.

‘ಒಳಮೀಸಲಾತಿ ಜಾರಿಗೊಳಿಸುವಂತೆ ಸುಪ್ರೀಂ ಕೋರ್ಟ್ ಆದೇಶಿಸಿದ್ದರೂ ಅದನ್ನು ಜಾರಿಗೊಳಿಸಲು ರಾಜ್ಯ ಸರ್ಕಾರ ಮೀನಮೇಷ ಎಣಿಸುತ್ತಿದೆ. ‘ಒಳ ಮೀಸಲಾತಿ ಜಾರಿ ಮಾಡಿ ಇಲ್ಲವೇ ಕುರ್ಚಿ ಬಿಡಿ’ ಘೋಷಣೆಯಡಿ ರಾಜ್ಯಾದ್ಯಂತ ರಥಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ADVERTISEMENT

ನಿರಂತರ ಹೋರಾಟ ನಡೆಸಿದ ಪರಿಣಾಮವಾಗಿ ಸಮಾಜಕ್ಕೆ ಸಣ್ಣ ಜಯ ಸಿಕ್ಕಿದೆ. ಸಿಎಂ ಸಿದ್ದರಾಮಯ್ಯ ಒಳ ಮೀಸಲಾತಿ ಜಾರಿ ಮಾಡದೇ ಬಡ್ತಿ ಪ್ರಕ್ರಿಯೆ ಆರಂಭಿಸಿದ್ದಾರೆ. ಇದರಲ್ಲಿ ಕೋಟ್ಯಂತರ ರೂಪಾಯಿ ಭ್ರಷ್ಟಾಚಾರ ನಡೆದಿದೆ. ಇದರಿಂದ ಸಮುದಾಯಕ್ಕೆ ಅನ್ಯಾಯವಾಗುತ್ತಿದ್ದರೂ ಎಚ್.ಸಿ. ಮಹಾದೇವಪ್ಪ, ಆರ್.ಬಿ. ತಿಮ್ಮಾಪುರ, ಮಲ್ಲಿಕಾರ್ಜುನ ಖರ್ಗೆ ಮೂಕ ಪ್ರೇಕ್ಷಕರಾಗಿದ್ದಾರೆ. ತೆರೆಮರೆಯಲ್ಲಿ ಬಡ್ತಿ, ನೇಮಕ ಪ್ರಕ್ರಿಯೆ ನಡೆಸಿದರೆ ಸರ್ಕಾರಕ್ಕೆ ತಕ್ಕ ಶಾಸ್ತಿ ಮಾಡುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜೂನ್‌ 9 ರಂದು ಬೆಂಗಳೂರಿನಲ್ಲಿ ಒಳ ಮೀಸಲಾತಿಗಾಗಿ ಬೃಹತ್ ಹೋರಾಟ ನಡೆಯಲಿದೆ. ಲಕ್ಷಾಂತರ ಜನರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.

ಮುಖಂಡ ಕೆ.ಪುತ್ರೇಶ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪರಿಶಿಷ್ಟ ಸಮುದಾಯದ ಬಗ್ಗೆ ಕಾಳಜಿ ಇದ್ದರೆ ತಕ್ಷಣ ಒಳ ಮೀಸಲಾತಿ ಜಾರಿಗೊಳಿಸಿ ತಮ್ಮ ಬದ್ಧತೆ ಪ್ರದರ್ಶಿಸಬೇಕು. ದಲಿತ ಸಮುದಾಯದ ಸಚಿವರು, ಶಾಸಕರು, ಒಗ್ಗಟ್ಟಿನಿಂದ ಸರ್ಕಾರದ ಮೇಲೆ ಒತ್ತಡ ಹೇರಬೇಕು ಎಂದು ಒತ್ತಾಯಿಸಿದರು.

ಮುಖಂಡರಾದ ಎಚ್‌.ಪೂಜಪ್ಪ, ಜೆ.ಶಿವರಾಜ, ಪಿ.ನಿಂಗಪ್ಪ, ಮಾದಿಗ ಒಳ ಮೀಸಲಾತಿ ಹೋರಾಟ ಸಮಿತಿ ಅಧ್ಯಕ್ಷ ಉಚ್ಚೆಂಗೆಪ್ಪ, ದುರುಗೇಶ, ದೇವೇಂದ್ರಪ್ಪ, ಹಲಗಿ ಸುರೇಶ, ಗುಡುದಪ್ಪ, ನಾಗರಾಜ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.