ADVERTISEMENT

ಬಳ್ಳಾರಿಯಲ್ಲಿ ಮಗು ಕಳ್ಳತನ ಪ್ರಕರಣ: ನಾಲ್ವರ ಬಂಧನ

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2025, 5:47 IST
Last Updated 15 ಸೆಪ್ಟೆಂಬರ್ 2025, 5:47 IST
ಬ್ರೂಸ್‌ಪೇಟೆ ಪೊಲೀಸರು ಮಗು ಕಳ್ಳತನ ಆರೋಪಿಗಳನ್ನು ವಶಕ್ಕೆ ಪಡೆದಿರುವುದು 
ಬ್ರೂಸ್‌ಪೇಟೆ ಪೊಲೀಸರು ಮಗು ಕಳ್ಳತನ ಆರೋಪಿಗಳನ್ನು ವಶಕ್ಕೆ ಪಡೆದಿರುವುದು    

ಬಳ್ಳಾರಿ: ನಗರದ ಬ್ರೂಸ್‌ಪೇಟೆ ಠಾಣೆ ವ್ಯಾಪ್ತಿಯಲ್ಲಿ 12ರಂದು ನಡೆದಿದ್ದ ಮಗು ಕಳ್ಳತನ ಪ್ರಕರಣದ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. 

ಶಮೀಮ್ (25), ಎಚ್.ಎಂ ಇಸ್ಮಾಯಿಲ್ ಸಾಬ್ (65), ಬಾಷಾ (55), ಬಸವರಾಜ ಮಹಾಂತಪ್ಪ (43) ಎಂಬುವವರು ಬಂಧಿತರು. 

ಭಾನುವಾರ ಸುದ್ದಿಗೋಷ್ಠಿ ನಡೆಸಿದ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ. ಶೋಭಾರಾಣಿ ವಿ.ಜೆ ಘಟನೆ ಕುರಿತು ಮಾಹಿತಿ ನೀಡಿದರು. 

ADVERTISEMENT

‘ಜುಲೈನಲ್ಲಿ ಶ್ರೀದೇವಿ ಎಂಬುವವರಿಗೆ ಜಿಲ್ಲಾಸ್ಪತ್ರೆಯಲ್ಲಿ ಹೆರಿಗೆಯಾಗಿತ್ತು. ಹೊಲಿಗೆ ಬಿಚ್ಚಿಸಲು ಮತ್ತು ಜನನ ಪ್ರಮಾಣ ಪತ್ರ ಪಡೆಯಲು ಅವರು ಇದೇ 12ರಂದು ಜಿಲ್ಲಾಸ್ಪತ್ರೆಗೆ ಬಂದಿದ್ದರು. ಜನ್ಮ ಪ್ರಮಾಣ ಪತ್ರ ಕೊಡಿಸುವುದಾಗಿ ಶಮೀಮ್‌ ಎಂಬುವವರು ಶ್ರೀದೇವಿಯನ್ನು ಬಳ್ಳಾರಿ ಮಹಾನಗರ ಪಾಲಿಕೆ ಕಚೇರಿಗೆ ಕರೆದೊಯ್ದಿದ್ದರು. ಶ್ರೀದೇವಿ ಶೌಚಾಲಯಕ್ಕೆ ಹೋಗಿದ್ದ ಸಂದರ್ಭದಲ್ಲಿ ಶಮೀಮ್‌ ಮಗುವನ್ನು ಕಳ್ಳತನ ಮಾಡಿಕೊಂಡು ಹೋಗಿದ್ದರು. ಈ ಬಗ್ಗೆ ಶ್ರೀದೇವಿ ಬ್ರೂಸ್‌ಪೇಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು’ ಎಂದು ತಿಳಿಸಿದರು.  

‘ಶಮೀಮ್‌ ಕೌಲ್‌ ಬಜಾರ್‌ ಠಾಣೆ ವ್ಯಾಪ್ತಿಯಲ್ಲಿ ಪತ್ತೆಯಾಗಿದ್ದಾರೆ. ಆಕೆ ಇಸ್ಮಾಯಿಲ್‌ ಎಂಬುವವರ ಮೂರನೇ ಪತ್ನಿಯಾಗಿದ್ದು, ಮಗುವನ್ನು ಕದ್ದೊಯ್ದು ಪತಿಗೆ ನೀಡಿದ್ದಳು. ಆತ ತೋರಣಗಲ್‌ನ ಬಾಷಾ ಎಂಬುವವರಿಗೆ ಮಗುವನ್ನು ಹಸ್ತಾಂತರ ಮಾಡಿದ್ದ. ಆತ 19 ವರ್ಷಗಳಿಂದ ಮಗುವಾಗದ ಬಸವರಾಜ್‌ ಮಹಾಂತಪ್ಪ ಎಂಬ ದಂಪತಿಗೆ ಮಗುವನ್ನು ನೀಡಿದ್ದ’ ಎಂದು ಅವರು ತಿಳಿಸಿದರು.  

‘ಮಕ್ಕಳಿಲ್ಲದ ಬಸವರಾಜ ಮಹಾಂತಪ್ಪ ಮಗುವೊಂದನ್ನು ದತ್ತು ಪಡೆಯಲು ಬಹಳ ಪ್ರಯತ್ನಪಟ್ಟು ವಿಫಲರಾಗಿದ್ದರು. ಹೀಗಾಗಿ ಯಾರಿಂದಲಾದರು ಮಗುವನ್ನು ಪಡೆದುಕೊಳ್ಳಲು ಪ್ರಯತ್ನ ನಡೆಸುತ್ತಿದ್ದರು. ಈ ವಿಚಾರವನ್ನು ಇಸ್ಮಾಯಿಲ್‌ಗೆ ಅವರು ತಿಳಿಸಿದ್ದರು. ಮಕ್ಕಳಿಗೆ ತಾಯತ ಕಟ್ಟುವ ವೃತ್ತಿ ಮಾಡುವ ಇಸ್ಮಾಯಿಲ್‌ ಮತ್ತು ಆತನ ಪತ್ನಿ ಶಮೀಮ್‌ ಇಬ್ಬರೂ ಸೇರಿ ಶ್ರೀದೇವಿಯ ಮಗು ಕದ್ದಿದ್ದರು’ ಎಂದು ಶೋಭಾರಾಣಿ ತಿಳಿಸಿದರು.  

ಭಾಷಾ ಮತ್ತು ಬಸವರಾಜ ಇಬ್ಬರು ನೆರೆಹೊರೆಯವರಾಗಿದ್ದರು ಎಂಬುದು ತನಿಖೆ ವೇಳೆ ತಿಳಿದು ಬಂದಿದೆ. ‌

ಕಳುವಾಗಿದ್ದ ಮಗುವನ್ನು ಪೊಲೀಸರು ತಾಯಿಯ ಮಡಿಲಿಗೆ ಒಪ್ಪಿಸಿರುವುದು 

ಮಕ್ಕಳ ಕಳ್ಳತನ ಜಾಲದ ಶಂಕೆ  ಸದ್ಯ ಈ ಘಟನೆಯು ಬಳ್ಳಾರಿಯಲ್ಲಿ ಮಕ್ಕಳ ಕಳ್ಳತನ ಜಾಲ ಸಕ್ರಿಯವಾಗಿ ನಡೆಯುತ್ತಿರುಬಹುದೇ ಎಂಬ ಅನುಮಾನಗಳು ಮೂಡಲು ಕಾರಣವಾಗಿದೆ. ಪ್ರಕರಣದ ಸೂತ್ರಧಾರಿ ಇಸ್ಮಾಯಿಲ್‌ ಎಂಬಾತ ಮಕ್ಕಳಿಗೆ ತಾಯತ ಕಟ್ಟುವ ವೃತ್ತಿ ಮಾಡುತ್ತಿದ್ದು ಈ ನೆಪದಲ್ಲಿ ಮಕ್ಕಳ ಕಳ್ಳತನ ಕೃತ್ಯಗಳಲ್ಲಿ ಭಾಗಿಯಾಗಿರಲಾರನೇ ಎಂಬ ಸಂಶಯ ಮೂಡಿದೆ. ಇನ್ನೊಂದೆಡೆ ಶಮೀಮ್‌ ಅವರ ತಾಯಿ ಜೈನಬಿ 2013ರಲ್ಲಿ ವಿಮ್ಸ್‌ನಲ್ಲಿ ಮಗುವನ್ನು ಕದ್ದು ಶಿಕ್ಷೆಗೂ ಗುರಿಯಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಈ ಎಲ್ಲ ಕಾರಣಗಳಿಂದ ಬಳ್ಳಾರಿಯಲ್ಲಿ ಇಂಥದ್ದೊಂದು ಜಾಲ ಇರುವ ಶಂಕೆ ಪ್ರಬಲಗೊಂಡಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.