ADVERTISEMENT

ಹಗರಿಬೊಮ್ಮನಹಳ್ಳಿ | ‘5 ಸಾವಿರ ಎಕರೆ ಪ್ರದೇಶದ 2 ಬೆಳೆಗಳಿಗೆ ನೀರು’

ಚಿಲವಾರು ಬಂಡೆ ಏತನೀರಾವರಿ ಪರೀಕ್ಷಾರ್ಥ ಪ್ರಯೋಗ

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2025, 3:14 IST
Last Updated 6 ಡಿಸೆಂಬರ್ 2025, 3:14 IST
ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ಅಡವಿ ಆನಂದೇವನಹಳ್ಳಿ ಬಳಿ ಚಿಲವಾರು ಬಂಡಿ ಏತನೀರಾವರಿ ಯೋಜನೆಯ ಪರೀಕ್ಷಾರ್ಥ ಪ್ರಯೋಗ ನಡೆಸಿ ಜಾಕ್‍ವೆಲ್ ಮೂಲಕ ಕಾಲುವೆಗಳಿಗೆ ನೀರು ಹರಿಸಲಾಯಿತು, ಶಾಸಕ ಕೆ.ನೇಮರಾಜನಾಯ್ಕ ಚಾಲನೆ ನೀಡಿದರು, ವಿವಿಧ ಮಠಾಧೀಶರು ಮುಖಂಡರು ಭಾಗವಹಿಸಿದ್ದರು
ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ಅಡವಿ ಆನಂದೇವನಹಳ್ಳಿ ಬಳಿ ಚಿಲವಾರು ಬಂಡಿ ಏತನೀರಾವರಿ ಯೋಜನೆಯ ಪರೀಕ್ಷಾರ್ಥ ಪ್ರಯೋಗ ನಡೆಸಿ ಜಾಕ್‍ವೆಲ್ ಮೂಲಕ ಕಾಲುವೆಗಳಿಗೆ ನೀರು ಹರಿಸಲಾಯಿತು, ಶಾಸಕ ಕೆ.ನೇಮರಾಜನಾಯ್ಕ ಚಾಲನೆ ನೀಡಿದರು, ವಿವಿಧ ಮಠಾಧೀಶರು ಮುಖಂಡರು ಭಾಗವಹಿಸಿದ್ದರು   

ಹಗರಿಬೊಮ್ಮನಹಳ್ಳಿ: ತಾಲ್ಲೂಕಿನ ಅಡವಿ ಆನಂದೇವನಹಳ್ಳಿ ಬಳಿ ತುಂಗಭದ್ರಾ ಹಿನ್ನೀರು ಪ್ರದೇಶದಲ್ಲಿ ಚಿಲವಾರು ಬಂಡೆ ಏತನೀರಾವರಿ ಯೋಜನೆಯ ಪರೀಕ್ಷಾರ್ಥ ಪ್ರಯೋಗ ಶುಕ್ರವಾರ ಯಶಸ್ವಿಯಾಗಿ ನೆರವೇರಿತು.

ಶಾಸಕ ಕೆ.ನೇಮರಾಜನಾಯ್ಕ ಅವರು ಮೋಟಾರ್ ಮತ್ತು ಪಂಪ್ ಬಟನ್ ಒತ್ತುವ ಮೂಲಕ ಚಾಲನೆ ನೀಡಿದರು.

ಚಿಲುವಾರು ಬಂಡೆಯ ಬಳಿ ನಿರ್ಮಿಸಿದ್ದ ಜಾಕ್‍ವೆಲ್‍ನಲ್ಲಿ ನೀರು ಚಿಮ್ಮುತ್ತಿದ್ದಂತೆಯೇ ನೆರೆದಿದ್ದ ನೂರಾರು ಜನ ರೈತರ ಹರ್ಷೋದ್ಘಾರ ಮುಗಿಲು ಮುಟ್ಟಿತ್ತು. ಅಲ್ಲಿಂದ ನೀರು ಒಳ ಕಾಲುವೆಗಳಿಗೆ ಹರಿಯುತ್ತಿರುವುದನ್ನು ರೈತರು ಸಂತಸದಿಂದ ವೀಕ್ಷಿಸಿದರು.

ADVERTISEMENT

ಶಾಸಕ ಕೆ.ನೇಮರಾಜನಾಯ್ಕ ಮಾತನಾಡಿ, ಎಸ್‍ಸಿಎಸ್‍ಪಿ ಯೋಜನೆಡಿಯಲ್ಲಿ ₹30ಕೋಟಿ ಹಾಗೂ ಟಿಎಸ್‍ಪಿಯಲ್ಲಿ ₹20 ಕೋಟಿ ಸೇರಿದಂತೆ ಒಟ್ಟು ₹50ಕೋಟಿ ಅಂದಾಜು ಮೊತ್ತದ ಯೋಜನೆ ಇದಾಗಿದೆ, 0.5 ಟಿಎಂಸಿ ನೀರು ಬಳಕೆ ಮಾಡಿಕೊಳ್ಳಲಾಗುವುದು. ತಲಾ 1ಸಾವಿರ ಎಚ್‍ಪಿ ಸಾಮರ್ಥ್ಯದ 4 ಮೋಟಾರ್ ಪಂಪ್‍ಗಳು ಕಾರ್ಯನಿರ್ವಹಿಸುತ್ತಿದ್ದು, ಒಂದು ಸ್ಟ್ಯಾಂಡ್ ಬೈ ಇಡಲಾಗುವುದು ಎಂದು ತಿಳಿಸಿದರು.

ನೂರಾರು ರೈತರ 5 ಸಾವಿರ ಎಕರೆಗೂ ಹೆಚ್ಚು ನೀರಾವರಿ ಪ್ರದೇಶವಾಗಲಿದೆ. ಸಾವಿರಾರು ಕೊಳವೆ ಬಾವಿಗಳಲ್ಲಿ ಅಂತರ್ಜಲ ಹೆಚ್ಚುತ್ತದೆ, ಕೆರೆ ಕಟ್ಟೆಗಳು ಭರ್ತಿಯಾಗಿ ಹತ್ತಾರು ಗ್ರಾಮಗಳ ರೈತರ ಬದುಕು ಹಸನಾಗಿ ಸಂಕಷ್ಟ ದೂರವಾಗಲಿದೆ ಎಂದರು.

ವಾರ್ಷಿಕ ಎರಡು ಬೆಳೆಗಳಿಗೆ ನೀರು ಹರಿಸಲಾಗುವುದು, ಸತತ ಎರಡು ತಿಂಗಳು ಪರೀಕ್ಷಾರ್ಥ ಪ್ರಯೋಗ ನಡೆಸಿ, ಏನಾದರೂ ನ್ಯೂನ್ಯತೆ ಇದ್ದರೆ ಸರಿಪಡಿಸಿ ಜುಲೈ ತಿಂಗಳಲ್ಲಿ ಅಧಿಕೃತವಾಗಿ ಯೋಜನೆ ಲೋಕಾರ್ಪಣೆಗೊಳ್ಳಲಿದೆ ಎಂದು ತಿಳಿಸಿದರು. ಮೊದಲ ಬಾರಿಗೆ ಶಾಸಕನಾಗಿದ್ದಾಗಲೇ ಯೋಜನೆಗೆ ತಾಂತ್ರಿಕ ಮತ್ತು ಆರ್ಥಿಕ ಅನುಮೋದನೆ ಪಡೆದು ಭೂಮಿ ಪೂಜೆ ಮಾಡಲಾಗಿತ್ತು, ಬಳಿಕ ಯೋಜನೆ ನನೆಗುದಿಗೆ ಬಿದ್ದಿತ್ತು ಎಂದರು.

ತಹಶೀಲ್ದಾರ್ ಆರ್.ಕವಿತಾ, ಮಲ್ಲಿಕಾರ್ಜುನ ಶಿವಾಚಾರ್ಯ, ನಂದಿಪುರದ ಮಹೇಶ್ವರ ಸ್ವಾಮೀಜಿ, ಹಾಲಸಿದ್ಧೇಶ್ವರ ಸ್ವಾಮೀಜಿ, ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ವೈ,ಮಲ್ಲಿಕಾರ್ಜುನ, ತಾಲ್ಲೂಕು ಪಂಚಾಯ್ತಿ ಮಾಜಿ ಅಧ್ಯಕ್ಷ ಪಿ.ಸೂರ್ಯಬಾಬು, ಪಿಕೆಪಿಎಸ್ ಅಧ್ಯಕ್ಷ ಕನ್ನಿಹಳ್ಳಿ ಚಂದ್ರಶೇಖರ್, ಟಿಎಪಿಸಿಎಂಎಸ್ ನಿರ್ದೇಶಕ ಬದಾಮಿ ಮೃತ್ಯುಂಜಯ, ನರೇಗಲ್ ಬಸವರಾಜ, ಪುರಸಭೆ ಸದಸ್ಯ ನಾಗರಾಜ ಜನ್ನು, ಮುಖಂಡರಾದ ಐ.ಟಿ.ಕೊಟ್ರೇಶ್, ಪಿ.ರಾಜಲಿಂಗಪ್ಪ, ಜಿ.ಎಂ.ಜಗದೀಶ್, ಎಚ್.ಕೊಟ್ರೇಶ್, ಕೋಡಿಹಳ್ಳಿ ಶಿವಣ್ಣ, ಎಚ್.ಶೇಖರಪ್ಪ, ಯು.ರಾಮಣ್ಣ, ಸಿ.ರಮೇಶ್ ಇದ್ದರು.