ADVERTISEMENT

ಬಳ್ಳಾರಿ | ಜಾತಿಗಳ ಎದುರು ‘ಕ್ರೈಸ್ತ’: ಆಕ್ರೋಶ

‘ಸಾಮಾಜಿಕ ನ್ಯಾಯ ಜಾಗೃತಿ ವೇದಿಕೆ’ಯಿಂದ ನಗರದಲ್ಲಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2025, 4:39 IST
Last Updated 16 ಸೆಪ್ಟೆಂಬರ್ 2025, 4:39 IST
ಜಾತಿ ಸಮೀಕ್ಷೆಯಲ್ಲಿ ಹಿಂದೂ ಜಾತಿಗಳ ಮುಂದೆ ಕ್ರೈಸ್ತ ಎಂಬ ಪದ ಸೇರಿಸಿರುವುದನ್ನು ವಿರೋಧಿಸಿ ‘ಸಾಮಾಜಿಕ ನ್ಯಾಯ ಜಾಗೃತಿ ವೇದಿಕೆ’ಯಿಂದ ಸೋಮವಾರ ನಗರದಲ್ಲಿ ಪ್ರತಿಭಟನೆ ನಡೆಯಿತು. ಮಾಜಿ ಶಾಸಕ ಸೋಮಶೇಖರ ರೆಡ್ಡಿ, ಬಿಜೆಪಿ ಜಿಲ್ಲಾ ಘಟಕದ ಅನಿಲ್‌ ಕುಮಾರ್‌ ಸೇರಿದಂತೆ ಹಲವರು ಇದ್ದರು
ಜಾತಿ ಸಮೀಕ್ಷೆಯಲ್ಲಿ ಹಿಂದೂ ಜಾತಿಗಳ ಮುಂದೆ ಕ್ರೈಸ್ತ ಎಂಬ ಪದ ಸೇರಿಸಿರುವುದನ್ನು ವಿರೋಧಿಸಿ ‘ಸಾಮಾಜಿಕ ನ್ಯಾಯ ಜಾಗೃತಿ ವೇದಿಕೆ’ಯಿಂದ ಸೋಮವಾರ ನಗರದಲ್ಲಿ ಪ್ರತಿಭಟನೆ ನಡೆಯಿತು. ಮಾಜಿ ಶಾಸಕ ಸೋಮಶೇಖರ ರೆಡ್ಡಿ, ಬಿಜೆಪಿ ಜಿಲ್ಲಾ ಘಟಕದ ಅನಿಲ್‌ ಕುಮಾರ್‌ ಸೇರಿದಂತೆ ಹಲವರು ಇದ್ದರು   

ಬಳ್ಳಾರಿ: ಜಾತಿ ಸಮೀಕ್ಷೆಯಲ್ಲಿ ಹಿಂದೂ ಜಾತಿಗಳ ಮುಂದೆ ಕ್ರೈಸ್ತ ಎಂಬ ಪದ ಸೇರಿಸಿರುವುದನ್ನು ವಿರೋಧಿಸಿ ನಗರದ ಜಿಲ್ಲಾಕಾರಿ ಕಚೇರಿ ಆವರಣದಲ್ಲಿ ‘ಸಾಮಾಜಿಕ ನ್ಯಾಯ ಜಾಗೃತಿ ವೇದಿಕೆ’ಯಿಂದ ಸೋಮವಾರ ಪ್ರತಿಭಟನೆ ನಡೆಸಿದರು.

ಹಿಂದುತ್ವ ಸಂಘಟನೆಗಳು, ಬಿಜೆಪಿ ಈ ಹೋರಾಟಕ್ಕೆ ಬೆಂಬಲ ನೀಡಿತ್ತು. ಪ್ರತಿಭಟನಾ ಮೆರವಣಿಗೆಯು ನಗರದ ಕನಕದುರ್ಗಮ್ಮ ದೇವಸ್ಥಾನದಿಂದ ಆರಂಭವಾಗಿ ಗಡಿಗಿ ಚೆನ್ನಪ್ಪ (ರಾಯಲ್‌) ವೃತ್ತದ ಮಾರ್ಗವಾಗಿ ಜಿಲ್ಲಾಕಾರಿ ಕಚೇರಿಗೆ ತಲುಪಿತು. ಮೆರವಣಿಗೆಯಲ್ಲಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಘೋಷಣೆಗಳು ಮೊಳಗಿದವು. 

ಈ ವೇಳೆ ಮಾತನಾಡಿದ ಮ್ಮರಚೇಡು ಮಠದ ಕಲ್ಯಾಣ ಸ್ವಾಮೀಜಿ ‘ರಾಜ್ಯ ಸರ್ಕಾರವು ಹಿಂದುಳಿದ ವರ್ಗಗಳ ಆಯೋಗದ ಮೂಲಕ ಕೈಗೊಂಡಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ಜಾತಿಗಳ ಪಟ್ಟಿಯಲ್ಲಿ ಬ್ರಾಹ್ಮಣ ಕ್ರೈಸ್ತ, ಲಿಂಗಾಯತ ಕ್ರೈಸ್ತ ಸೇರಿದಂತೆ ಹಲವು ಜಾತಿಗಳ ಎದುರು ಕ್ರೈಸ್ತ ಎಂದು ಸೇರಿಸಿದೆ. ಇದರಿಂದ ಜನರಿಗೆ ನೋವಾಗಿದೆ’ ಎಂದರು. 

‘ಬಲವಂತವಾಗಿ ಮತಾಂತರ ಕಾರ್ಯಗಳು ನಡೆಯುತ್ತಿವೆ. ಸಮೀಕ್ಷೆಯಿಂದ ಸಮಾಜವನ್ನು ಹೊಡೆಯುವ ಹುನ್ನಾರಗಳ ನಡೆಯುತ್ತಿದೆ. ಸರ್ಕಾರದ ಆದೇಶವನ್ನು ನಾವು ವಿರೋಧಿಸುತ್ತಿದ್ದೇವೆ. ಕಾಂಗ್ರೆಸ್ ಸರ್ಕಾರವು ಜಾತಿಗಳ ಸಮೀಕ್ಷೆಯಿಂದ ಪತನವಾಗಲಿದೆ’ ಎಂದರು.  

ಮಾಜಿ ಶಾಸಕ ಜಿ.ಸೋಮಶೇಖರ್ ರೆಡ್ಡಿ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಅನಿಲ್ ಕುಮಾರ್ ಮೋಕಾ, ಮಾಜಿ ಬುಡಾ ಅಧ್ಯಕ್ಷ ಮಾರುತಿ ಪ್ರಸಾದ್, ರಾಮಲಿಂಗಪ್ಪ, ಹನುಮಂಪತಪ್ಪ ಸೇರಿದಂತೆ ಬ್ರಾಹ್ಮಣ, ಲಿಂಗಾಯತ ಮುಖಂಡರು ಇದ್ದರು.

‘ಬೆಸ್ತರ್ ಜಾತಿ ಸೇರಿಸಲು ಅವಕಾಶ ನೀಡಿ’

ಬಳ್ಳಾರಿ: ರಾಜ್ಯ ಗಂಗಾಮತ ಸಮುದಾಯದ ಪರ್ಯಾಯ ಪದವಾದ ‘ಬೆಸ್ತರ್’ ಮತ್ತು ಉಪಜಾತಿಗಳನ್ನು ಜಾತಿಗಣತಿ ಪಟ್ಟಿಯಲ್ಲಿ ಸೇರಿಸಲು ಅವಕಾಶ ಕಲ್ಪಿಸಬೇಕು ಎಂದು ರಾಜ್ಯ ಗಂಗಾಮತಸ್ಥರ ಸಂಘದ ಅಧ್ಯಕ್ಷ ಬಿ.ಮೌಲಾಲಿ ಆಗ್ರಹಿಸಿದ್ದಾರೆ. 

ಸುದ್ದಿಗೋಷ್ಠಿಯಲ್ಲಿ ಸೋಮವಾರ ಮಾತನಾಡಿದ ಅವರು, ‘ರಾಜ್ಯ ಸರ್ಕಾರದಿಂದ ಜಾತಿಗಣತಿ ಕಾರ್ಯ ನಡೆಯುತ್ತಿದೆ. ರಾಜ್ಯದ 22 ಜಿಲ್ಲೆಯಲ್ಲಿ ಗಂಗಮತ ಸಮದಾಯವಿದೆ. ಸಮುದಾಯದ ಪರ್ಯಾಯ ಪದವಾದ ‘ಬೆಸ್ತರ್’ ಅತಿ ಹೆಚ್ಚಿನ ಸಂಖ್ಯೆಯಲ್ಲಿದೆ’ ಎಂದು ಅವರು ತಿಳಿಸಿದರು.

‘ಬೆಸ್ತರ್ ಸಮುದಾಯದವರು ಜಾತಿಗಣತಿದಾರರಿಗೆ ಮಾಹಿತಿ ನೀಡುವ ವೇಳೆ ಜಾತಿ ಕಾಲಂನಲ್ಲಿ ಬೆಸ್ತರ್ ಎಂದೇ ಬರೆಸಬೇಕು. ಇದರಿಂದ ಬೆಸ್ತರ್ ಜಾತಿಯವರು ಸರ್ಕಾರರಿಂದ ಶೈಕ್ಷಣಿಕ, ಆರ್ಥಿಕ, ಸಾಮಾಜಿಕ ನೆರವು ಪಡೆಯಲು ಹಾಗೂ ರಾಜಕೀಯವಾಗಿ ಮುನ್ನೆಲೆಗೆ ಬರಲು ಅನುಕೂಲವಾಗುತ್ತದೆ’ ಎಂದರು.

ಸಂಘದ ಮುಖಂಡರಾದ ಬಸವರಾಜ್, ಪಂಪಾಪತಿ, ಹುಲುಗಪ್ಪಘಿ, ಶಿವಶಂಕರ್, ಲಿಂಗಪ್ಪ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.