ADVERTISEMENT

ಸಚಿವ ಆನಂದ್‌ ಸಿಂಗ್‌ ಬೆಂಬಲಿಗರು, ಕೆಆರ್‌ಎಸ್‌ ಕಾರ್ಯಕರ್ತರ ನಡುವೆ ವಾಗ್ವಾದ

ಸ್ಥಳಕ್ಕೆ ಬಂದು ಪರಿಸ್ಥಿತಿ ತಿಳಿಗೊಳಿಸಿದ ಅರಣ್ಯ ಸಚಿವ

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2020, 2:26 IST
Last Updated 5 ಡಿಸೆಂಬರ್ 2020, 2:26 IST
‘ಚಲಿಸು ಕರ್ನಾಟಕ’ ಬೈಸಿಕಲ್‌ ಯಾತ್ರೆ ಕಾರ್ಯಕ್ರಮದ ನಂತರ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ರಾಜ್ಯ ಅಧ್ಯಕ್ಷ ರವಿಕೃಷ್ಣಾರೆಡ್ಡಿ ಹಾಗೂ ಇತರೆ ಮುಖಂಡರು ಅರಣ್ಯ ಸಚಿವ ಆನಂದ್‌ ಸಿಂಗ್‌ ಅವರಿಗೆ ಕೈಮುಗಿದು ನಿರ್ಗಮಿಸಿದರು
‘ಚಲಿಸು ಕರ್ನಾಟಕ’ ಬೈಸಿಕಲ್‌ ಯಾತ್ರೆ ಕಾರ್ಯಕ್ರಮದ ನಂತರ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ರಾಜ್ಯ ಅಧ್ಯಕ್ಷ ರವಿಕೃಷ್ಣಾರೆಡ್ಡಿ ಹಾಗೂ ಇತರೆ ಮುಖಂಡರು ಅರಣ್ಯ ಸಚಿವ ಆನಂದ್‌ ಸಿಂಗ್‌ ಅವರಿಗೆ ಕೈಮುಗಿದು ನಿರ್ಗಮಿಸಿದರು   

ಹೊಸಪೇಟೆ: ಇಲ್ಲಿನ ರೋಟರಿ ವೃತ್ತದಲ್ಲಿ ಅಳವಡಿಸಿರುವ ಅರಣ್ಯ ಸಚಿವ ಆನಂದ್‌ ಸಿಂಗ್‌ ಅವರ ಬೃಹತ್‌ ಕಟೌಟ್‌ ತೆರವುಗೊಳಿಸುವಂತೆ ಆಗ್ರಹಿಸಿ ಕರ್ನಾಟಕ ರಾಷ್ಟ್ರ ಸಮಿತಿ (ಕೆಆರ್‌ಎಸ್‌) ಪಕ್ಷದ ಕಾರ್ಯಕರ್ತರು ಶುಕ್ರವಾರ ರಾತ್ರಿ ಧರಣಿ ನಡೆಸುತ್ತಿದ್ದಾಗ ಅದರಿಂದ ಕೆರಳಿದ ಸಚಿವರ ಬೆಂಬಲಿಗರು ವಾಗ್ವಾದಕ್ಕಿಳಿದು ಹಲ್ಲೆ ನಡೆಸಲು ಮುಂದಾದಾಗ ಸ್ಥಳದಲ್ಲಿ ಕೆಲಕಾಲ ಬಿಗುವಿನ ವಾತಾವರಣ ಸೃಷ್ಟಿಯಾಗಿತ್ತು.

ಪಕ್ಷದಿಂದ ಹಮ್ಮಿಕೊಂಡಿರುವ ‘ಚಲಿಸು ಕರ್ನಾಟಕ’ ಬೈಸಿಕಲ್‌ ಯಾತ್ರೆಯು ಶುಕ್ರವಾರ ರಾತ್ರಿ ನಗರದ ರೋಟರಿ ವೃತ್ತ ತಲುಪಿತು. ಗ್ರಾಮ ಪಂಚಾಯಿತಿ ಚುನಾವಣೆಯಿಂದ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ವೃತ್ತದಲ್ಲಿರುವ ಬ್ಯಾನರ್‌, ಕಟೌಟ್‌ ತೆರವುಗೊಳಿಸುವಂತೆ ಪಟ್ಟು ಹಿಡಿದು, ಘೋಷಣೆ ಕೂಗಿದರು. ಇದಕ್ಕೆ ಮಣಿದ ನಗರಸಭೆ ಸಿಬ್ಬಂದಿ ತಾಲ್ಲೂಕು ಕಚೇರಿ ಎದುರಿನ ಬ್ಯಾನರ್‌ ತೆರವುಗೊಳಿಸಿದರು.

ಇನ್ನೊಂದು ಬದಿಯಲ್ಲಿದ್ದ ಆನಂದ್‌ ಸಿಂಗ್‌ ಅವರ ಕಟೌಟ್‌ ಕೂಡ ತೆರವುಗೊಳಿಸಬೇಕೆಂದು ಆಗ್ರಹಿಸಿ ಪಕ್ಷದ ಕಾರ್ಯಕರ್ತರು ಅದರಡಿ ಧರಣಿ ನಡೆಸಿ, ಘೋಷಣೆ ಕೂಗಲಾರಂಭಿಸಿದರು. ಇದರಿಂದ ಕೆರಳಿದ ಸಚಿವರ ಬೆಂಬಲಿಗರು, ಅವರೊಂದಿಗೆ ವಾಗ್ವಾದಕ್ಕಿಳಿದರು. ನಂತರ ಹಲ್ಲೆಗೆ ಮುಂದಾದರು. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಆನಂದ್‌ ಸಿಂಗ್‌ ಹಾಗೂ ಪೊಲೀಸರು ಜನರನ್ನು ಅಲ್ಲಿಂದ ಕಳಿಸಿ ವಾತಾವರಣ ತಿಳಿಗೊಳಿಸಿದರು.

ADVERTISEMENT

‘ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಪ್ರತಿಭಟನೆ ನಡೆಸುವ ಹಕ್ಕಿದೆ. ಅವರ ಕಾರ್ಯಕ್ರಮಕ್ಕೆ ಯಾರೂ ಅಡ್ಡಿಪಡಿಸಬಾರದು’ ಎಂದು ಹೇಳಿ ಬೆಂಬಲಿಗರನ್ನು ಅಲ್ಲಿಂದ ಕಳಿಸಿದರು. ಬಳಿಕ ಸ್ವತಃ ಅವರೇ ಕಟೌಟ್‌ ತೆರವುಗೊಳಿಸಿದರು. ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಪಕ್ಷದ ರಾಜ್ಯ ಘಟಕದ ರವಿಕೃಷ್ಣಾರೆಡ್ಡಿ, ‘ಎಲ್ಲ ಕ್ಷೇತ್ರಗಳಲ್ಲಿ ಮಿತಿ ಮೀರಿದ ಭ್ರಷ್ಟಾಚಾರದಿಂದಾಗಿ ಸಾಮಾನ್ಯ ಜನರು ಬಹಳ ತೊಂದರೆ ಅನುಭವಿಸುತ್ತಿದ್ದಾರೆ. ಜೆಡಿಎಸ್‌, ಕಾಂಗ್ರೆಸ್‌, ಬಿಜೆಪಿ ಪಕ್ಷಗಳಿಂದ ಈ ರಾಜ್ಯದ ಉದ್ಧಾರ ಸಾಧ್ಯವಿಲ್ಲ. ಹೊಸ ರಾಜಕಾರಣಕ್ಕೆ ಮುನ್ನುಡಿ ಹಾಡಲು ಪಕ್ಷ ಕಟ್ಟಿ ರಾಜ್ಯದಾದ್ಯಂತ ಬೈಸಿಕಲ್‌ ಯಾತ್ರೆ ಮೂಲಕ ಪ್ರಚಾರ ಹಮ್ಮಿಕೊಳ್ಳಲಾಗಿದೆ’ ಎಂದು ತಿಳಿಸಿದರು.

ಕಾರ್ಯಕ್ರಮ ಕೊನೆಗೊಳ್ಳುವವರೆಗೆ ಆನಂದ್‌ ಸಿಂಗ್‌ ಅವರು ರಸ್ತೆ ಬದಿ ನಿಂತು ರವಿಕೃಷ್ಣಾರೆಡ್ಡಿ ಅವರ ಭಾಷಣ ಆಲಿಸಿದರು. ಕಾರ್ಯಕ್ರಮದ ನಂತರ ರವಿಕೃಷ್ಣಾರೆಡ್ಡಿ ಅವರು ಸಚಿವರ ಬಳಿ ಬಂದು, ‘ಅರಣ್ಯ ಇಲಾಖೆಯಂತಹ ಮಹತ್ವದ ಖಾತೆಯ ಸಚಿವರಾಗಿದ್ದೀರಿ. ಇಲಾಖೆಯಲ್ಲಿ ಭ್ರಷ್ಟಾಚಾರ ನಿರ್ಮೂಲನೆ ಮಾಡಬೇಕು. ರಾಜ್ಯದಲ್ಲಿ ಹೆಚ್ಚಿನ ಸಸಿಗಳನ್ನು ಬೆಳೆಸಬೇಕು’ ಎಂದು ಹೇಳಿದರು.

ಅದಕ್ಕೆ ಸಚಿವ ಆನಂದ್‌ ಸಿಂಗ್‌, ‘ಈ ನಿಟ್ಟಿನಲ್ಲಿ ಪ್ರಯತ್ನಿಸುವೆ. ನೀವು ಮಾಡುತ್ತಿರುವ ಕೆಲಸ ಉತ್ತಮವಾದುದು. ಆದರೆ, ಭಾಷಣ ಮಾಡುವಾಗ ಪದ ಬಳಕೆಯ ಮೇಲೆ ಎಚ್ಚರ ವಹಿಸಬೇಕು’ ಎಂದು ಸಲಹೆ ನೀಡಿದರು. ‘ಕೆಆರ್‌ಎಸ್‌ ಪಕ್ಷದ ಎಲ್ಲ ಮುಖಂಡರು, ಕಾರ್ಯಕರ್ತರಿಗೆ ರಕ್ಷಣೆ ಕೊಡಬೇಕು’ ಎಂದು ಸಚಿವರು ಪೊಲೀಸರಿಗೆ ಸೂಚಿಸಿದರು. ಪಕ್ಷದ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಪ.ಯ. ಗಣೇಶ್‌ ಇತರರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.