ADVERTISEMENT

ಮಳೆಗಾಲ ಎದುರಿಸಲು ಭರದ ಸಿದ್ಧತೆ

ಹೊಸಪೇಟೆ ನಗರದಾದ್ಯಂತ ನಡೆಯುತ್ತಿದೆ ರಾಜಕಾಲುವೆ, ಚರಂಡಿ ನಿರ್ಮಾಣ ಕಾಮಗಾರಿ

ಶಶಿಕಾಂತ್ ಎಸ್. ಶೆಂಬೆಳ್ಳಿ
Published 26 ಮೇ 2019, 19:45 IST
Last Updated 26 ಮೇ 2019, 19:45 IST
ಹೊಸಪೇಟೆಯ ಬಳ್ಳಾರಿ ರಸ್ತೆಯಲ್ಲಿ ರಾಜಕಾಲುವೆ ದುರಸ್ತಿ ಕೆಲಸ ಭರದಿಂದ ನಡೆಯುತ್ತಿರುವುದು–ಪ್ರಜಾವಾಣಿ ಚಿತ್ರ
ಹೊಸಪೇಟೆಯ ಬಳ್ಳಾರಿ ರಸ್ತೆಯಲ್ಲಿ ರಾಜಕಾಲುವೆ ದುರಸ್ತಿ ಕೆಲಸ ಭರದಿಂದ ನಡೆಯುತ್ತಿರುವುದು–ಪ್ರಜಾವಾಣಿ ಚಿತ್ರ   

ಹೊಸಪೇಟೆ: ಮಳೆಗಾಲದಲ್ಲಿ ಎದುರಾಗುವ ಸಮಸ್ಯೆಗಳನ್ನು ನಿಭಾಯಿಸಲು ನಗರಸಭೆ ಯುದ್ಧೋಪಾದಿಯಲ್ಲಿ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ.

ಪ್ರತಿ ವರ್ಷ ಮಳೆಗಾಲದಲ್ಲಿ ನಗರದಲ್ಲಿನ ಚರಂಡಿಗಳು ತುಂಬಿ ಹರಿಯುತ್ತವೆ. ಕೆಲವೆಡೆ ಚರಂಡಿಗಳು ಹಾಳಾಗಿದ್ದು, ಚರಂಡಿಯ ಹೊಲಸು ಮನೆಗಳಿಗೆ ನುಗ್ಗಿ ಅವಾಂತರ ಸೃಷ್ಟಿಯಾಗುತ್ತದೆ. ಮತ್ತೆ ಕೆಲವೆಡೆ ಚರಂಡಿಗಳೇ ಇಲ್ಲ. ಇದರಿಂದಾಗಿ ರಸ್ತೆಯ ಮೇಲೆಲ್ಲ ನೀರು ನಿಂತು ಜನರ ಓಡಾಟಕ್ಕೆ ತೊಂದರೆ ಉಂಟಾಗುತ್ತದೆ. ಈ ವರ್ಷ ಈ ಸಮಸ್ಯೆ ಎದುರಾಗದಂತೆ ನೋಡಿಕೊಳ್ಳಲು ನಗರಸಭೆಯು ರಾಜಕಾಲುವೆ, ಚರಂಡಿಗಳ ನಿರ್ಮಾಣಕ್ಕೆ ಕೈ ಹಾಕಿದೆ.

ಈಗಾಗಲೇ ಬಹುತೇಕ ಕಡೆಗಳಲ್ಲಿ ಚರಂಡಿ ನಿರ್ಮಾಣ ಕೆಲಸ ಮುಗಿದಿದೆ. ಇನ್ನೂ ಕೆಲವು ಕಡೆ ಕಾಮಗಾರಿ ಪ್ರಗತಿಯಲ್ಲಿದೆ. ಮಳೆಗಾಲ ಆರಂಭಗೊಳ್ಳುವುದಕ್ಕೂ ಮುನ್ನ ಕೆಲಸ ಪೂರ್ಣಗೊಳಿಸಲು ಗಡುವು ಹಾಕಿಕೊಂಡಿದೆ.

ADVERTISEMENT

ಬಳ್ಳಾರಿ ರಸ್ತೆಯ ಮೀರ್‌ ಆಲಂ ಚಿತ್ರಮಂದಿರ ಬಳಿ ಬಸವ ಕಾಲುವೆಗೆ ಅಡ್ಡಲಾಗಿ ನಿರ್ಮಿಸಿದ್ದ ರಾಜಕಾಲುವೆ ಸಂಪೂರ್ಣ ಶಿಥಿಲಗೊಂಡಿತ್ತು. ಅದಕ್ಕೆ ಹೊಂದಿಕೊಂಡಂತಿದ್ದ ಚರಂಡಿಗಳು ಅತಿಕ್ರಮಣವಾಗಿದ್ದವು. ಇದರಿಂದ ಮಳೆಗಾಲದಲ್ಲಿ ಹೊಲಸು ರಸ್ತೆಯ ತುಂಬೆಲ್ಲ ಹರಡಿಕೊಳ್ಳುತ್ತಿತ್ತು. ಕೆಲವೆಡೆ ಮನೆಗಳಿಗೆ ಹೊಲಸು ನುಗ್ಗುತ್ತಿತ್ತು. ಜನರ ಬದುಕು ನರಕವಾಗುತ್ತಿತ್ತು. ಈಗ ಅತಿಕ್ರಮಣ ತೆರವುಗೊಳಿಸಿ, ರಾಜಕಾಲುವೆಗೆ ಹೊಸದಾಗಿ ಕಾಂಕ್ರೀಟ್‌ ಬೆಡ್‌ ಹಾಕಿ, ಎರಡೂ ಕಡೆ ಸಿಮೆಂಟ್‌ ಗೋಡೆಗಳನ್ನು ನಿರ್ಮಿಸಲಾಗಿದೆ. ಬಳ್ಳಾರಿ ರಸ್ತೆಗೆ ಹೊಂದಿಕೊಂಡಿರುವ ಚರಂಡಿಯಲ್ಲಿನ ತ್ಯಾಜ್ಯ ತೆರವುಗೊಳಿಸಿ ಹೊಸದಾಗಿ ಚರಂಡಿ ನಿರ್ಮಿಸಲಾಗುತ್ತಿದೆ.

ಜನನಿಬಿಡ ಬಸ್‌ ನಿಲ್ದಾಣ ಮುಂಭಾಗದಲ್ಲಿನ ರಸ್ತೆ, ಚರಂಡಿಯನ್ನು ಈಗಾಗಲೇ ಅಭಿವೃದ್ಧಿಪಡಿಸಲಾಗಿದೆ. ಅದೇ ರೀತಿ ಚಿತ್ತವಾಡ್ಗಿ ರಸ್ತೆ, ಚಿತ್ತವಾಡ್ಗಿಯಲ್ಲೂ ಭರದಿಂದ ಕಾಮಗಾರಿ ನಡೆಯುತ್ತಿದೆ. ಈಗಾಗಲೇ ಬಹುತೇಕ ಕಾಮಗಾರಿ ಪೂರ್ಣಗೊಂಡಿದೆ. ಎಲ್ಲೆಲ್ಲಿ ಕಾಮಗಾರಿ ಮುಗಿದಿದೆಯೋ ಅಂತಹ ಕಡೆಗಳಲ್ಲಿ ಚರಂಡಿ ಮೇಲೆ ಬೆಡ್‌ ಹಾಕುವ ಕೆಲಸ ನಡೆಯುತ್ತಿದೆ.

‘ಅಮೃತ ಯೋಜನೆಯಡಿ ಈಗಾಗಲೇ ನಗರದಲ್ಲಿನ ಎಲ್ಲ ರಸ್ತೆಗಳನ್ನು ಅಭಿವೃದ್ಧಿ ಪಡಿಸಲಾಗಿದೆ. ಅನೇಕ ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ರಾಜಕಾಲುವೆ, ಚರಂಡಿಗಳ ಅಭಿವೃದ್ಧಿ ಕೆಲಸ ಭರದಿಂದ ನಡೆಯುತ್ತಿದೆ. ಬಹುತೇಕ ಕಡೆಗಳಲ್ಲಿ ಕೆಲಸ ಪೂರ್ಣಗೊಂಡಿದೆ. ಅಂತಿಮ ಹಂತದ ಕೆಲಸ ಪ್ರಗತಿಯಲ್ಲಿದೆ’ ಎಂದು ನಗರಸಭೆ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಸೈಯದ್‌ ಮನ್ಸೂರ್‌ ಅಹಮ್ಮದ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ರಾಜಕಾಲುವೆ, ಚರಂಡಿಗಳು ಹಾಳಾಗಿದ್ದವು. ಕೆಲವೆಡೆ ಅತಿಕ್ರಮಣ ಕೂಡ ಆಗಿತ್ತು. ಅತಿಕ್ರಮಣ ತೆರವುಗೊಳಿಸಿ, ಹೊಸದಾಗಿ ನಿರ್ಮಾಣ ಮಾಡಲಾಗುತ್ತಿದೆ. ಚರಂಡಿಗಳು ಹಾಳಾಗಿದ್ದರಿಂದ ಪ್ರತಿ ಮಳೆಗಾಲದಲ್ಲಿ ಸಮಸ್ಯೆ ಸೃಷ್ಟಿಯಾಗುತ್ತಿತ್ತು. ಮಳೆಗಾಲ ಮುಗಿಯುವವರೆಗೆ ನಗರಸಭೆ ಸಿಬ್ಬಂದಿ ಹೆಣಗಾಟ ನಡೆಸಬೇಕಾಗುತ್ತಿತ್ತು. ಈ ವರ್ಷ ಅಂತಹ ಪರಿಸ್ಥಿತಿ ಉದ್ಭವಿಸುವುದಿಲ್ಲ. ಮಳೆಗಾಲವನ್ನು ದೃಷ್ಟಿಯಲ್ಲಿ ಇಟ್ಟುಕೊಂಡೇ ಕಾಮಗಾರಿಯನ್ನು ಬೇಸಿಗೆಯಲ್ಲಿ ಆರಂಭಿಸಿದೆವು’ ಎಂದು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.