ಕಂಪ್ಲಿ: ಪಟ್ಟಣದ ಜನನಿಬಿಡ ಪ್ರದೇಶದಲ್ಲಿರುವ ಐತಿಹಾಸಿಕ ಸೋಮಪ್ಪ ಕೆರೆ ಪುನಶ್ಚೇತನಕ್ಕೆ ದಶಕಗಳಿಂದ ಕೊಟ್ಯಂತರ ರೂಪಾಯಿ ಹಣ ವ್ಯಯಿಸುತ್ತಿದ್ದರೂ ಚಹರೆ ಬದಲಾಗುತ್ತಿಲ್ಲ.
ಒಂದೆಡೆ ಕೆರೆ ಪ್ರದೇಶ ಅಭಿವೃದ್ಧಿಯಾಗುತ್ತಿದ್ದರೆ, ಮತ್ತೊಂದೆಡೆ ಕೆಲ ಕಿಡಿಗೇಡಿಗಳು ಹಾಳು ಮಾಡುತ್ತಿದ್ದಾರೆ. ನಿರ್ವಹಣೆ ಕೊರತೆ ಈ ಸ್ಥಳದಲ್ಲಿ ಎದ್ದು ಕಾಣುತ್ತದೆ.
48 ಎಕರೆ ವ್ಯಾಪಿಸಿರುವ ಕೆರೆ ಜಾಗದ ಉದ್ಯಾನ ಪಕ್ಕದಲ್ಲಿ ವಿಶೇಷ ಬಸ್‍ನಲ್ಲಿ ವಿಹಾರಿಗಳ ಜ್ಞಾನಾರ್ಜನೆಗೆ ಆರಂಭಿಸಿದ್ದ ಸಂಚಾರಿ ಗ್ರಂಥಾಲಯ ಪ್ರಮುಖ ಆಕರ್ಷಣೆಯಾಗಿ ಓದುಗರನ್ನು ಕೈಬೀಸಿ ಕರೆಯುತ್ತಿತ್ತು. ಕೆಲ ಕಿಡಿಗೇಡಿಗಳ ಕೆಂಗಣ್ಣಿಗೆ ಬಸ್ ಇಂದು ಸೊರಗಿದೆ. ಅದರಲ್ಲಿದ್ದ ಮೌಲ್ಯಯುತ ಪುಸ್ತಕಗಳನ್ನು ಹೊತ್ತೊಯ್ಯುವುದರ ಜೊತೆಗೆ ಬಸ್‍ನ ಕಿಟಕಿ, ಬಾಗಿಲುಗಳನ್ನು ಕಿತ್ತು ಹಾಕಿದ್ದು, ಸದ್ಯ ಬಸ್ ಹಾಳು ಸುರಿಯುತ್ತಿದೆ.
ಇನ್ನು ಕೆಲವರು ಉದ್ಯಾನದಲ್ಲಿ ಅಳವಡಿಸಿದ್ದ ಉಯ್ಯಾಲೆ, ಫೈಬರ್ ಜಾರು ಆಟಿಕೆ ಹಾನಿ ಮಾಡಿದ್ದಾರೆ. ಕುಳಿತುಕೊಳ್ಳಲು ಅಳವಡಿಸಿದ್ದ ನುಣುಪಾದ ಕಲ್ಲಿನ ಬೆಂಚ್‍ಗಳ ಬಂಡೆಗಳನ್ನು ಕೆಡವಿದ್ದಾರೆ. ಆಟಿಕೆ ಸಾಮಾನು ಅಳವಡಿಸಿರುವ ಸ್ಥಳದಲ್ಲಿ ಮಳೆ ನೀರು ನಿಲ್ಲುವುದರಿಂದ ಮಕ್ಕಳು ಅಲ್ಲಿಗೆ ತೆರಳಲು ಕಷ್ಟಪಡುತ್ತಾರೆ.
ಪ್ರವೇಶ ದ್ವಾರದ ಬೃಹತ್ ಕಬ್ಬಿಣದ ಗೇಟ್ ವೆಲ್ಡಿಂಗ್ ಕಿತ್ತಿರುವುದರಿಂದ ಪ್ರವೇಶ ಸದಾ ತೆರೆದಿರುತ್ತದೆ. ಮಳೆಗಾಲ ಆರಂಭವಾಗಿರುವುದರಿಂದ ಅಲ್ಲಲ್ಲಿ ಹಸಿರು ಕಳೆ ಅಧಿಕವಾಗಿ ವಿಷಜಂತುಗಳು, ಹುಳು ಹುಪ್ಪಡಿ ಹಾವಳಿ ಸಾಮಾನ್ಯವಾಗಿದೆ. ಅದರಿಂದ ಇತ್ತೀಚೆಗೆ ಕೆರೆ ಸುತ್ತಲು ವಾಯುವಿಹಾರ ಮಾಡುವವರು ಭೀತಿಯಿಂದ ಓಡಾಡಬೇಕಿದೆ.
ವಾಯುವಿಹಾರಿಗಳಿಗೆ ವಿಕಾರ: ಕೆರೆ ಸುತ್ತ ಸಿಸಿ ಕ್ಯಾಮೆರಾ, ಕಾವಲುಗಾರ ಇಲ್ಲದ ಕಾರಣ ರಾತ್ರಿಯಾಗುತ್ತಿದ್ದಂತೆ ಅಕ್ರಮ ಚಟುವಟಿಕೆ, ಮದ್ಯವ್ಯಸನಿಗಳ ಹಾವಳಿ ಶುರುವಾಗುತ್ತದೆ. ಕುಡಿದ ಮತ್ತಿನಲ್ಲಿ ಕೆಲವರು ವಿಹಾರಪಥದ ಕಡೆ ಬಾಟಲ್‍ಗಳನ್ನು ಬೇಕಾಬಿಟ್ಟಿ ಎಸೆಯುವುದರಿಂದ ವಾಯುವಿಹಾರಿಗಳಿಗೆ ವಾಯುವಿಕಾರವಾಗಿ ಗೋಚರಿಸುತ್ತದೆ.
ಇನ್ನು ಅಮವಾಸ್ಯೆ, ನಿಗದಿತ ದಿನಗಳ ರಾತ್ರಿ ಕೆಲವರು ವಿಹಾರಪಥದಲ್ಲಿ ವಾಮಾಚಾರ ಮಾಡುತ್ತಿದ್ದು, ವಾಯು ವಿಹಾರಿಗಳು ರೋಸಿ ಹೋಗಿದ್ದಾರೆ. ಈಚೆಗೆ ಕೆರೆ ಆವರಣದಲ್ಲಿ ಆಂದ್ರಪ್ರದೇಶದ ಮೂಲದ ಯುವಕನ ಕೊಲೆ ನಡೆದಿದ್ದು, ನಿತ್ಯ ವಿಹರಿಸುವವರಿಗೆ ಅಂಜಿಕೆಯು ಆರಂಭವಾಗಿದೆ. ಈ ಕಾರಣದಿಂದ ಗುಂಪು ಗುಂಪಾಗಿ ವಾಯುವಿಹಾರಕ್ಕೆ ಬರುವುದನ್ನು ರೂಢಿಸಿಕೊಂಡಿದ್ದಾರೆ.
ಮೊದಲ ಹಂತದಲ್ಲಿ ಕೆರೆ ದಂಡೆಯಲ್ಲಿ ಅಕ್ರಮವಾಗಿ ನಿರ್ಮಿಸಿದ್ದ ಮನೆಗಳನ್ನು ತೆರವುಗೊಳಿಸಲಾಯಿತು. ಬಳಿಕ 2009ರಲ್ಲಿ ಅಂದಿನ ಸರ್ಕಾರ ಕೆರೆ ಅಭಿವೃದ್ಧಿಗೆ ₹8.80ಕೋಟಿ ಮಂಜೂರು ಮಾಡಿತ್ತು. ಮತ್ತೆ ಹೆಚ್ಚುವರಿಯಾಗಿ ₹1.30ಕೋಟಿ ಮತ್ತು ಶಾಸಕರು ₹70ಲಕ್ಷ ಮಂಜೂರು ಮಾಡಿದ್ದು ಕೆರೆ ಸುತ್ತಲೂ ರಕ್ಷಣಾ ಸರಳು ಅಳವಡಿಕೆ ಸೇರಿದಂತೆ ಬಾಕಿ ಕಾಮಗಾರಿ ಮುಂದುವರಿದಿದೆ.
ಹಾಳಾಗಿರುವ ಸಂಚಾರಿ ಗ್ರಂಥಾಲಯ ಬಸ್‍ನಲ್ಲಿ ಅನೈತಿಕ ಚಟುವಟಿಕೆಗಳು ಮದ್ಯ ಸೇವನೆ ಪಾರ್ಟಿಗಳು ರಾಜರೋಷವಾಗಿ ನಡೆಯುತ್ತಿವೆ. ಕೂಡಲೆ ಅಧಿಕಾರಿಗಳು ಬಸ್ ಸ್ಥಳಾಂತರಕ್ಕೆ ಕ್ರಮಕೈಗೊಳ್ಳಬೇಕು.ಜಿ.ಎಂ. ಸುರೇಶ್ ಉಪಾಧ್ಯಕ್ಷರು ಐತಿಹಾಸಿಕ ಸೋಮಪ್ಪ ಕೆರೆ ವಾಯು ವಿಹಾರಿಗಳ ಸಂಘ
ಕೆರೆ ವ್ಯಾಪ್ತಿಯಲ್ಲಿ ‘ಟ್ರೀ ಪಾರ್ಕ್’ ನಿರ್ಮಾಣಕ್ಕೆ ₹2ಕೋಟಿ ಮಂಜೂರಾಗಿದ್ದು ಚಾಲನೆ ನೀಡಲಾಗುವುದು. ಮಾದರಿ ಉದ್ಯಾನ ಕೆರೆ ಸುತ್ತಲೂ ಹಸೀಕರಣ ಬೋಟಿಂಗ್ ಸೇರಿದಂತೆ ಇತರೆ ಅಭಿವೃದ್ಧಿ ಕಾಮಗಾರಿಗಳಿಗೆ ಮತ್ತೆ ₹7ಕೋಟಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದ್ದೇನೆ. ಕೆರೆ ವ್ಯಾಪ್ತಿಯಲ್ಲಿ ನಿರ್ಮಿಸಿರುವ ತಾಲ್ಲೂಕು ಶಾಖಾ ಗ್ರಂಥಾಲಯಕ್ಕೆ ಪೀಠೋಪಕರಣ ಬಂದ ನಂತರ ಆರಂಭಿಸಲಾಗುವುದು. ಕೆರೆ ರಕ್ಷಣೆಗಾಗಿ ಕಾವಲುಗಾರರನ್ನು ನೇಮಿಸುವಂತೆ ಪುರಸಭೆಗೆ ಸೂಚಿಸುತ್ತೇನೆ.ಜೆ.ಎನ್. ಗಣೇಶ್ ಶಾಸಕರು ಕಂಪ್ಲಿ
ಕೆರೆ ಅಭಿವೃದ್ಧಿ ಕುರಿತಂತೆ ಶಾಸಕ ಜೆ.ಎನ್. ಗಣೇಶ್ ಅವರ ಗಮನಸೆಳೆಯಲಾಗಿದೆ. ಪಟ್ಟಣದ ಜನರ ಆಶಯದಂತೆ ಕೆರೆ ಪ್ರದೇಶ ನಿರ್ವಹಣೆ ಪ್ರಮುಖವಾಗಿ ಕಾವಲುಗಾರ ನೇಮಕ ಕುರಿತಂತೆ ಮುಂದಿನ ಪುರಸಭೆ ಸಾಮಾನ್ಯ ಸಭೆಯಲ್ಲಿ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು.ಭಟ್ಟಾ ಪ್ರಸಾದ್ ಅಧ್ಯಕ್ಷರು ಪುರಸಭೆ ಕಂಪ್ಲಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.