ADVERTISEMENT

ನಗರಸಭೆ ಚುನಾವಣೆ: ಸಿರುಗುಪ್ಪ ಕಾಂಗ್ರೆಸ್‌ಗೆ, ತೆಕ್ಕಲಕೋಟೆ ಬಿಜೆಪಿಗೆ

ಕೆ.ನರಸಿಂಹ ಮೂರ್ತಿ
Published 11 ಫೆಬ್ರುವರಿ 2020, 19:45 IST
Last Updated 11 ಫೆಬ್ರುವರಿ 2020, 19:45 IST
   

ಬಳ್ಳಾರಿ: ಈ ಬಾರಿಯ ಚುನಾವಣೆಯಲ್ಲಿ ಸಿರುಗುಪ್ಪ ನಗರಸಭೆಯು ಕಾಂಗ್ರೆಸ್‌ ತೆಕ್ಕೆಗೆ ದೊರಕಿದರೆ, ತೆಕ್ಕಲಕೋಟೆ ಪಟ್ಟಣ ಪಂಚಾಯ್ತಿಯು ಬಿಜೆಪಿಯ ಮಡಿಲು ಸೇರಿದೆ. ಜೆಡಿಎಸ್‌ ಲೆಕ್ಕಕ್ಕೇ ಇಲ್ಲದಂತಾಗಿದೆ.

ನಗರಸಭೆಯಾದ ಬಳಿಕ ಸಿರುಗುಪ್ಪದಲ್ಲಿ ಮೊದಲ ಚುನಾವಣೆ ನಡೆದಿದೆ. ಪಟ್ಟಣ ಪಂಚಾಯ್ತಿಯಾದ ತೆಕ್ಕಲಕೋಟೆಯು ಶಾಸಕ ಎಂ.ಎಸ್‌.ಸೋಮಲಿಂಗಪ್ಪ ಅವರ ಹುಟ್ಟೂರು, ಅವರ ನಿವಾಸ ಅಲ್ಲಿಯೇ ಇರುವುದರಿಂದ ಅವರು ಅಲ್ಲಿ ಬಹುಮತ ಪಡೆದುಕೊಂಡಿದ್ದಾರೆ.

ಹಿಂದಿನ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಲು ಅವಕಾಶ ದೊರಕದಿದ್ದರೂ, ಈ ಬಾರಿ ಅತ್ಯುತ್ಸಾಹದಿಂದ ಕೆಲಸ ಮಾಡಿದ ಮಾಜಿ ಶಾಸಕ ಬಿ.ಎಂ.ನಾಗರಾಜ್‌ ನಗರಸಭೆಯಲ್ಲಿ ಮಾತ್ರ ತಮ್ಮ ತಂಡಕ್ಕೆ ಅಧಿಕಾರ ದೊರಕಿಸಿಕೊಡುವಲ್ಲಿ ಯಶಸ್ವಿಯಾಗಿದ್ದಾರೆ.

ADVERTISEMENT

ಚುನಾವಣೆಗೆ ಮುಂಚೆಯೇ ಈ ಎರಡೂ ಸ್ಥಳೀಯ ಸಂಸ್ಥೆಗಳಲ್ಲಿ ಕಾಂಗ್ರೆಸ್‌ ಮುಖಂಡರು ಗೆಲ್ಲುವ ವಿಶ್ವಾಸವನ್ನು ವ್ಯಕ್ತಪಡಿಸಿದ್ದರು. ಅದು ಸಂಪೂರ್ಣವಾಗಿ ಈಡೇರಿಲ್ಲ.

ವಿಶೇಷ ಎಂದರೆ ಹಿಂದಿನ ರೀತಿಯಲ್ಲಿ ಆದಂತೆ ಪಕ್ಷೇತರರು ಮತ್ತು ಇತರೆ ಪಕ್ಷಗಳ ಸದಸ್ಯರನ್ನು ಸೇರಿಸಿಕೊಂಡು ಅಧಿಕಾರ ಪಡೆಯುವ ಅನಿವಾರ್ಯತೆ ಎರಡೂ ಪಕ್ಷಗಳಿಗೆ ಎದುರಾಗಿಲ್ಲ. ಸ್ಪಷ್ಟ ಬಹುಮತವನ್ನು ಗಳಿಸಿರುವುದರಿಂದ ಈ ಸಮಸ್ಯೆ ಇಲ್ಲದೆಯೇ ಅಧಿಕಾರ ನಡೆಸುವ ಅವಕಾಶ ಸಿಕ್ಕಿದೆ.

ಸಿರುಗುಪ್ಪ ಪುರಸಭೆಗೆ ಹಿಂದೆ ನಡೆದಿದ್ದ ಚುನಾವಣೆಯಲ್ಲಿಯೂ ಕಾಂಗ್ರೆಸ್ ಬಹುಮತ ಗಳಿಸಿತ್ತು. ಬಿಎಸ್‌ಆರ್‌ ಕಾಂಗ್ರೆಸ್‌ನ ಒಬ್ಬರು ಮತ್ತು ಇಬ್ಬರು ಪಕ್ಷೇತರರೂ ಕಾಂಗ್ರೆಸ್‌ಗೆ ಸೇರ್ಪಡೆಗೊಂಡಿದ್ದರು.

ತೆಕ್ಕಲಕೋಟೆ ಪಟ್ಟಣ ಪಂಚಾಯ್ತಿಗೆ ಈ ಹಿಂದಿನ ಅವಧಿಯಲ್ಲಿ ಯಾರಿಗೂ ಬಹುಮತ ದೊರಕಿರಲಿಲ್ಲ. ಒಟ್ಟು 20 ಸದಸ್ಯರ ಪೈಕಿ ಬಿಜೆಪಿ ಮತ್ತು ಬಿಎಸ್‍ಆರ್ ಕಾಂಗ್ರೆಸ್‌ ತಲಾ 8 ಸ್ಥಾನ ಪಡೆದು ಸಮಾನ ಬಲ ಹೊಂದಿತ್ತು. ನಂತರದ ಬೆಳವಣಿಗೆಯಲ್ಲಿ ಬಿಎಸ್‍ಆರ್‌ನ 8 ಸದಸ್ಯರೂ ಕಾಂಗ್ರೆಸ್‌ನೊಂದಿಗೆ ವಿಲೀನಗೊಂಡು 12 ಸದಸ್ಯರು ಕೂಡಿ ಪಟ್ಟಣ ಪಂಚಾಯ್ತಿಯ ಆಡಳಿತ ಚುಕ್ಕಾಣಿ ಹಿಡಿದಿದ್ದರು. ಇಲ್ಲಿ ಬಿಜೆಪಿ ವಿರೋಧ ಪಕ್ಷದವರಾಗಿ ಕೆಲಸ ಮಾಡಿತ್ತು.

ಈ ಬಾರಿ ಸನ್ನಿವೇಶ ಬದಲಾಗಿದೆ. ಶಾಸಕ ಸೋಮಲಿಂಗಪ್ಪ ತವರಲ್ಲಿ ಬಿಜೆಪಿ ಆಡಳಿತ ಪಕ್ಷವಾಗಿ ಅಧಿಕಾರ ಚಲಾಯಿಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.