ಕಂಪ್ಲಿ: ಮುಂಬರುವ ತಾಲ್ಲೂಕು ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆಗಳಲ್ಲಿ ಪಕ್ಷನಿಷ್ಠ ಮತ್ತು ಕ್ರಿಯಾಶೀಲರಿಗೆ ಟಿಕೆಟ್ ನೀಡಲಾಗುವುದು ಎಂದು ಕೆಪಿಸಿಸಿ ಎಸ್ಸಿ ರಾಜ್ಯ ಘಟಕದ ಅಧ್ಯಕ್ಷ ಧರ್ಮಸೇನ ತಿಳಿಸಿದರು.
ಇಲ್ಲಿಯ ಶಾಸಕರ ಜನಸಂಪರ್ಕ ಕಚೇರಿಯಲ್ಲಿ ಬುಧವಾರ ಪರಿಶಿಷ್ಟ ಜಾತಿ ಸಮುದಾಯದವರ ಕುಂದುಕೊರತೆ, ದೊರೆಯಬೇಕಾದ ಸೌಲಭ್ಯಗಳು, ಪಕ್ಷ ಸಂಘಟನೆಯಲ್ಲಿ ಎಸ್ಸಿಗಳ ಪಾತ್ರ ಕುರಿತ ಚರ್ಚೆಯಲ್ಲಿ ಅವರು ಮಾತನಾಡಿದರು.
ಕನಿಷ್ಠ ಪ್ರತಿ ಮೂರು ತಿಂಗಳಿಗೊಮ್ಮೆ ಈ ರೀತಿಯ ಸಭೆ ನಡೆಸುವುದರ ಜೊತೆಗೆ ಕಾಂಗ್ರೆಸ್ ಪಕ್ಷದ ಸಿದ್ಧಾಂತ, ನಾಯಕತ್ವ ಮತ್ತು ಸರ್ಕಾರ, ಪಕ್ಷದ ಕಾರ್ಯಕ್ರಮಗಳ ಬಗ್ಗೆ ಹೆಚ್ಚು ಪ್ರಚಾರಪಡಿಸಬೇಕು. ಪಕ್ಷದ ಪ್ರಗತಿ ಕುರಿತಂತೆ ಸಾಮಾಜಿಕ ಜಾಲತಾಣಗಳ ಸದ್ಬಳಕೆ ಕೌಶಲವು ಅಗತ್ಯ ಎಂದು ವಿವರಿಸಿದರು.
ಎಸ್.ಸಿ.ಎಸ್.ಪಿ/ ಟಿ.ಎಸ್.ಪಿ ಹಣವನ್ನು ಅನ್ಯಕಾರ್ಯಕ್ಕೆ ಬಳಕೆ ಕುರಿತ ಬಿಜೆಪಿ ನಾಯಕರ ಅಪಾದನೆಯಲ್ಲಿ ಸತ್ಯಾಂಶವಿಲ್ಲ ಎಂದು ಸ್ಪಷ್ಟಪಡಿಸಿದರು.
ಶಾಸಕ ಜೆ.ಎನ್. ಗಣೇಶ್ ಮಾತನಾಡಿ, ಗುತ್ತಿಗೆ ಆಧಾರಿತ ಹುದ್ದೆಗಳನ್ನು ಎಸ್.ಸಿ ಸೇರಿ ಆರ್ಥಿಕವಾಗಿ ಹಿಂದುಳಿದವರಿಗೆ ದೊರಕಿಸಿಕೊಡುವಲ್ಲಿ ಸರ್ಕಾರ ಮುಂದಾಗಬೇಕು ಎಂದು ಹೇಳಿದರು.
ಕಾಂಗ್ರೆಸ್ ಎಸ್ಸಿ ಜಿಲ್ಲಾ ಅಧ್ಯಕ್ಷ ವೀರಾಂಜನೇಯಲು ಮಾತನಾಡಿ, ಒಳ ಮೀಸಲಿನಿಂದ ಎಸ್ಸಿಗಳಿಗೆ ಅನುಕೂಲವಾಗಿದೆ. ಇನ್ನಷ್ಟು ಅಭಿವೃದ್ಧಿಗೆ ವಿಶೇಷ ಯೋಜನೆ ರೂಪಿಸುವಂತೆ ಮನವಿ ಮಾಡಿದರು.
ಎಸ್ಸಿ ಬ್ಲಾಕ್ ಅಧ್ಯಕ್ಷ ಆರ್.ಎಂ. ರಾಮಯ್ಯ, ಕೆಪಿಸಿಸಿ ಉಪಾಧ್ಯಕ್ಷರಾದ ಖದಿರಾಮ ರಾಥೋಡ್, ನಾಗರಾಜ ನಾಯಕ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ. ಶ್ರೀನಿವಾಸರಾವ್, ಪುರಸಭಾಧ್ಯಕ್ಷ ಭಟ್ಟ ಪ್ರಸಾದ್, ಪ್ರಮುಖರಾದ ಎನ್. ಹಬೀಬ್ ರೆಹಮಾನ್, ಲಡ್ಡು ಹೊನ್ನೂರವಲಿ, ಸೈಯ್ಯದ್ ಉಸ್ಮಾನ್, ಎಚ್. ಜಗದೀಶ, ಎಚ್. ಜಡೆಪ್ಪ, ಮಲಿಯಪ್ಪ, ಶ್ರೀಗುರು, ಎಸ್.ಸಿ ಘಟಕದ ಪದಾಧಿಕಾರಿಗಳಿದ್ದರು.
‘ಮಹಿಳಾ ಪ್ರಾತಿನಿಧ್ಯಕ್ಕೆ ಅವಕಾಶ ಕಲ್ಪಿಸಿ’
ಸಭೆಗೆ ಮುನ್ನ ನಡೆದ ಚರ್ಚೆಯಲ್ಲಿ ಪರಿಶಿಷ್ಟ ಜನಾಂಗದವರ ಕುಂದುಕೊರತೆಗಳ ಬಗ್ಗೆ ಪ್ರಸ್ತಾಪಿಸಲಾಯಿತು. ಪಕ್ಷ ನಿಗಮ ಮುಂತಾದ ಉನ್ನತ ಸ್ಥಾನಗಳನ್ನು ಎಸ್ಸಿಗಳಿಗೆ ನೀಡಬೇಕು. ಮೂಲ ಕಾಂಗ್ರೆಸ್ ಕಾರ್ಯಕರ್ತರನ್ನು ಕಡೆಗಣಿಸಬಾರದು. ಮಹಿಳಾ ಪ್ರಾತಿನಿಧ್ಯಕ್ಕೆ ಅವಕಾಶ ಕಲ್ಪಿಸಿಕೊಡುವುದು ಸೇರಿದಂತೆ ಹಲವು ಸಮಸ್ಯೆಗಳ ಕುರಿತು ಮುಖಂಡರ ಗಮನಸೆಳೆಯಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.