ADVERTISEMENT

ಶಿವಕುಮಾರ ಬಂಧನ ಖಂಡಿಸಿ ಪ್ರತಿಭಟನೆ

ಮೂವರು ಶಾಸಕರ ನೇತೃತ್ವದಲ್ಲಿ ಹೋರಾಟ

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2019, 9:52 IST
Last Updated 4 ಸೆಪ್ಟೆಂಬರ್ 2019, 9:52 IST
ಕಾಂಗ್ರೆಸ್‌ ಕಾರ್ಯಕರ್ತರು ಬುಧವಾರ ಹೊಸಪೇಟೆಯ ರೋಟರಿ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು–ಪ್ರಜಾವಾಣಿ ಚಿತ್ರ
ಕಾಂಗ್ರೆಸ್‌ ಕಾರ್ಯಕರ್ತರು ಬುಧವಾರ ಹೊಸಪೇಟೆಯ ರೋಟರಿ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು–ಪ್ರಜಾವಾಣಿ ಚಿತ್ರ   

ಹೊಸಪೇಟೆ: ಶಾಸಕ ಡಿ.ಕೆ. ಶಿವಕುಮಾರ ಅವರ ಬಂಧನ ಖಂಡಿಸಿ ಜಿಲ್ಲಾ ಗ್ರಾಮೀಣ ಕಾಂಗ್ರೆಸ್‌ನಿಂದ ಬುಧವಾರ ನಗರದ ರೋಟರಿ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು.

ಪಕ್ಷದ ಜಿಲ್ಲಾ ಗ್ರಾಮೀಣ ಘಟಕದ ಅಧ್ಯಕ್ಷ ಬಿ.ವಿ. ಶಿವಯೋಗಿ, ಶಾಸಕರಾದ ಪಿ.ಟಿ. ಪರಮೇಶ್ವರ ನಾಯ್ಕ, ಈ. ತುಕಾರಾಂ, ಜೆ.ಎನ್‌. ಗಣೇಶ್‌ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಪಕ್ಷದ ವಿವಿಧ ಘಟಕಗಳ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಪಾಲ್ಗೊಂಡಿದ್ದರು.

‘ಧಿಕ್ಕಾರ.. ಧಿಕ್ಕಾರ.. ಮೋದಿ, ಅಮಿತ್‌ ಶಾಗೆ ಧಿಕ್ಕಾರ’, ‘ಡಿ.ಕೆ. ಶಿವಕುಮಾರಗೆ ಜಯವಾಗಲಿ’ ಎಂದು ಕಾರ್ಯಕರ್ತರು ಘೋಷಣೆಗಳನ್ನು ಹಾಕಿ ಹಾಕಿದರು.

ADVERTISEMENT

ಬಳಿಕ ಮಾತನಾಡಿದ ಈ. ತುಕಾರಾಂ, ‘ಡಿ.ಕೆ. ಶಿವಕುಮಾರ ಅವರು ಜಾರಿ ನಿರ್ದೇಶನಾಲಯದ ತನಿಖೆಗೆ ಎಲ್ಲ ರೀತಿಯ ಸಹಕಾರ ಕೊಡುತ್ತಿದ್ದರೂ ಅವರನ್ನು ವಿನಾಕಾರಣ ಬಂಧಿಸಲಾಗಿದೆ. ರಾಜಕೀಯ ದ್ವೇಷದಿಂದ ಈ ರೀತಿ ಮಾಡುತ್ತಿರುವುದು ಸರಿಯಲ್ಲ. ಬರುವ ದಿನಗಳಲ್ಲಿ ಇದಕ್ಕೆ ಜನ ಸೂಕ್ತ ಉತ್ತರ ಕೊಡಲಿದ್ದಾರೆ’ ಎಂದು ಹೇಳಿದರು.

‘ಕೇಂದ್ರ ಸರ್ಕಾರವು ಅಧಿಕಾರ ದುರ್ಬಳಕೆ ಮಾಡಿಕೊಂಡು ಕಾಂಗ್ರೆಸ್‌ ಪಕ್ಷದ ಮುಖಂಡರನ್ನು ಹಣಿಯುವ ಕೆಲಸ ಮಾಡುತ್ತಿದೆ. ಯಾರಿಗೂ ಅಧಿಕಾರ ಶಾಶ್ವತವಲ್ಲ’ ಎಂದು ಪಿ.ಟಿ. ಪರಮೇಶ್ವರ ನಾಯ್ಕ ತಿಳಿಸಿದರು.

ಜೆ.ಎನ್‌. ಗಣೇಶ್‌ ಮಾತನಾಡಿ, ‘ಡಿ.ಕೆ. ಶಿವಕುಮಾರ ಅವರನ್ನು ರಾಜಕೀಯವಾಗಿ ಮುಗಿಸಲು ಕೇಂದ್ರ ಸರ್ಕಾರ ಅವರನ್ನು ಬಂಧಿಸಿದೆ. ಅದಕ್ಕಾಗಿ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ’ ಎಂದು ಆರೋಪಿಸಿದರು.

ಮುಖಂಡರಾದ ಮೊಹಮ್ಮದ್‌ ಇಮಾಮ್‌ ನಿಯಾಜಿ, ಲತಾ ಮಲ್ಲಿಕಾರ್ಜುನ, ಫಹೀಮ್‌ ಬಾಷಾ, ಗುಜ್ಜಲ್‌ ನಾಗರಾಜ್‌, ಸಿದ್ದನಗೌಡ, ಕೆ.ಎಂ. ಹಾಲಪ್ಪ, ನಿಂಬಗಲ್‌ ರಾಮಕೃಷ್ಣ, ಮೀರ್‌ ಜಾಫರ್‌, ಆಟೊ ಕಿಟ್ಟಿ, ಸಿ. ಕೃಷ್ಣ, ಕೆರೊಲಿನ್‌ ಸ್ಮಿತ್‌, ಬಾನು ಬಿ, ನನ್ನೆಮ್ಮ, ಸೋಫಿಯಾ, ಆಜಾದ್‌, ಅಲಂ ಬಕ್ಷಿ, ಆರ್‌. ಕೊಟ್ರೇಶ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.