
ತೆಕ್ಕಲಕೋಟೆ: ಸಮೀಪದ ಮಣ್ಣೂರು ಸೂಗೂರು ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ (ಪಿಕೆಪಿ) ಸಹಕಾರ ಸಂಘದ ಅರ್ಧ ಎಕರೆ ಜಾಗವನ್ನು ಅಧ್ಯಕ್ಷರು ತಮ್ಮ ಪತ್ನಿ ಹೆಸರಿಗೆ ಪಹಣಿ ಮಾಡಿಸಿಕೊಂಡ ಘಟನೆ ಈಚೆಗೆ ಬೆಳಕಿಗೆ ಬಂದಿದೆ.
ಕಳೆದ 38 ವರ್ಷಗಳಿಂದ ಪಿಕೆಪಿ ಸಂಘದ ಅಧ್ಯಕ್ಷರಾಗಿರುವ ಎಸ್. ಎಂ. ಬಸವ ಅವರು ಈ ಹಿಂದೆಯೇ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಸರ್ವೆ ನಂ 32/ ಡಿ1ನ (ಪೈಕಿ ಪೂರ್ವ-ಪಶ್ಚಿಮ 276 ಅಡಿ, ಉತ್ತರ-ದಕ್ಷಿಣ 80 ಅಡಿ ಕಟ್ಟಡ ಸೇರಿದಂತೆ) ಒಟ್ಟು ಅರ್ಧ ಎಕರೆ ಭೂಮಿಯನ್ನು 1991ರ ಡಿಸೆಂಬರ್ 19ರಂದು ಸಂಘದ ಕಾರ್ಯದರ್ಶಿ ಚೆನ್ನವೀರಯ್ಯ ಅವರ ಮೂಲಕ ಸಂಘಕ್ಕೆ ಮಾರಾಟ ಮಾಡಿದ್ದರು.
ಆದರೆ ಅಲ್ಲಿಂದ ಈ ವರೆಗೆ ಸಂಘದ ಹೆಸರಿಗೆ ಮ್ಯುಟೇಷನ್ ಮಾಡಿಸದೆ ತಮ್ಮ ಹೆಸರನ್ನು ಪಹಣಿಯಲ್ಲಿ ಮುಂದುವರೆಸಿಕೊಂಡು ಬಂದಿದ್ದರು. 2006ರಲ್ಲಿ ತಮ್ಮ ಪತ್ನಿ ಬಿ.ಎಂ ಅನುಲಾಕ್ಷಿ ಅವರ ಹೆಸರಿಗೆ ಎಸ್. ಎಂ. ಬಸವ ಹಕ್ಕು ಬಿಡುಗಡೆಯ ಮೂಲಕ ಪಹಣಿಯಲ್ಲಿ ಹೆಸರು ಬದಲಾವಣೆ ಮಾಡಿಸಿದ್ದಾರೆ.
‘ಆಸ್ತಿ ಪಾಲು ವಿಭಾಗ ಮಾಡುವಾಗ ಜಾಗ ನನ್ನ ಹೆಂಡತಿ ಮತ್ತು ಮಕ್ಕಳ ಭಾಗಕ್ಕೆ ಹೋಗಿದೆ. ಈಗ ನನ್ನ ಹೆಂಡತಿ 10 ಸೆಂಟ್ಸ್ ಜಾಗ ಬಿಟ್ಟು ಕೊಟ್ಟಲ್ಲಿ ಉಳಿದಿದ್ದನ್ನು ಸಂಘಕ್ಕೆ ಮರು ನೋಂದಣಿ ಮಾಡಿಕೊಡುತ್ತೇನೆ ಎನ್ನುತ್ತಾರೆ’ ಎಂದು ಎಂ. ಸೂಗೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಸ್.ಎಂ.ಬಸವ ತಿಳಿಸಿದರು.
582 ಸದಸ್ಯರನ್ನು ಹೊಂದಿರುವ ಹಾಗೂ ವಾರ್ಷಿಕ ಕೋಟ್ಯಂತರ ವಹಿವಾಟು ನಡೆಸುವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ತನ್ನ ಜಮೀನಿನ ಕುರಿತು ಸರಿಯಾದ ದಾಖಲೆ ಪತ್ರಗಳನ್ನು ನಿರ್ವಹಿಸುವಲ್ಲಿ ಆಸಕ್ತಿ ತೊರದೆ ಇರುವುದು ಸೋಜಿಗ ಎಂದು ಸಾರ್ವಜನಿಕರು ಹುಬ್ಬೇರಿಸಿದ್ದಾರೆ.
‘ಸಂಘದ ಆಸ್ತಿ ನೋಂದಣಿ ನಂತರ, ಮ್ಯುಟೇಷನ್ ಹಾಗೂ ಪಹಣಿಯಲ್ಲಿ ಹೆಸರು ಸೇರ್ಪಡೆಗೊಳಿಸುವಂತೆ ಅಧ್ಯಕ್ಷರಿಗೆ ಹಲವಾರು ಬಾರಿ ಮೌಖಿಕವಾಗಿ ಮನವಿ ಸಲ್ಲಿಸಲಾಗಿದೆ’ ಎನ್ನುತ್ತಾರೆ ಸಂಘದ ಸಿಇಒ ಕೆ.ಎಂ ಮಹಾಬಲೇಶ್ವರ ಸ್ವಾಮಿ.
2024-25ನೇ ಸಾಲಿನಿಂದ ಕೇಂದ್ರ ಸರ್ಕಾರದ ನಬಾರ್ಡ್ ಯೋಜನೆಯಲ್ಲಿ ಇ-ಪ್ಯಾಕ್ಸ್ ಎಂದು ಘೋಷಿಸಿಕೊಂಡ ಈ ಸಂಘ ಷೇರು ಬಂಡವಾಳ ₹58.23 ಲಕ್ಷ, ಸಂಘದ ಉಳಿತಾಯ ₹4.85 ಲಕ್ಷ, 582 ಜನಕ್ಕೆ ₹4.32 ಕೋಟಿ ಕೆಸಿಸಿ ಸಾಲ ನೀಡಲಾಗಿದೆ ಎಂದು ಲೆಕ್ಕಪತ್ರದಲ್ಲಿ ಘೋಷಿಸಿಕೊಂಡಿದೆ.
ಈಗಾಗಲೇ ಕಾರ್ಯದರ್ಶಿಗೆ ಆಡಳಿತಾತ್ಮಕ ಕ್ರಮ ಕೈಗೊಳ್ಳಲು ಸೂಚನೆ ನೀಡಲಾಗಿದ್ದುನ.10ರಂದು ಮ್ಯುಟೇಷನ್ ಹಾಗೂ ಪಹಣಿಯನ್ನು ಸಂಘದ ಹೆಸರಿಗೆ ಬದಲಾಯಿಸಲು ತಹಶೀಲ್ದಾರ್ ಕಚೇರಿಗೆ ಅರ್ಜಿ ಸಲ್ಲಿಸುವಂತೆ ಸೂಚಿಸಲಾಗಿದೆ–ಸುರೇಂದ್ರ ಕುಮಾರ್, ಸಿರುಗುಪ್ಪ ತಾಲ್ಲೂಕು ಸಹಕಾರ ಅಭಿವೃದ್ಧಿ ಅಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.